ಬೆಂಗಳೂರು: ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಗುರುವಾರ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಜತೆಗಿನ ಮೈತ್ರಿಗೆ ಆಕ್ಷೇಪ ವ್ಯಕ್ತಪಡಿಸಿ ಸಿ.ಎಂ. ಇಬ್ರಾಹಿಂ ಅವರು ಪ್ರತ್ಯೇಕ ಸಭೆ ನಡೆಸಿದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.
ಪಕ್ಷದ ಕಾರ್ಯ ಚಟುವಟಿಕೆಯ ನಿರ್ವಹಣೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ದೇವೇಗೌಡ, ‘ಗುರುವಾರ ನಡೆದ ಪಕ್ಷದ ಉನ್ನತ ನಾಯಕರು, ಶಾಸಕರು, ಜಿಲ್ಲಾ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೆಡಿಎಸ್ ಪಕ್ಷದ ಸಂವಿಧಾನ ಮತ್ತು ನಿಯಮಗಳ ಅನ್ವಯ ಸಮಿತಿಯನ್ನು ವಿಸರ್ಜಿಸಲಾಗಿದೆ’ ಎಂದರು.
‘ಕುಮಾರಸ್ವಾಮಿ ಅವರ ರಾಜಕೀಯ ನಡೆಯನ್ನು ಎಲ್ಲ ನಾಯಕರು ಗಮನಿಸಿದ್ದಾರೆ. ಪಕ್ಷದ ಜವಾಬ್ದಾರಿ ಅವರಿಗೆ ನೀಡಿದರೆ ಅನುಕೂಲವಾಗುತ್ತದೆ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಅವರ ನಾಯಕತ್ವಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ವಿಧಾನಸಭೆ ಚುನಾವಣೆ ಮುಗಿದ ಮೇಲೆ ಸ್ಥಗಿತಗೊಂಡಿದ್ದ ಪಕ್ಷದ ಚಟುವಟಿಕೆಗೆ ಮತ್ತೆ ವೇಗ ದೊರೆಯಲಿದೆ’ ಎಂದು ಹೇಳಿದರು.
‘ಬಿಜೆಪಿ ಜತೆಗಿನ ಮೈತ್ರಿಗೆ ಕೇರಳದ ಘಟಕ ಸಹ ಒಪ್ಪಿಗೆ ನೀಡಿದೆ. ವಿವಿಧ ರಾಜ್ಯಗಳ ಘಟಕಗಳಿಗೂ ಮಾಹಿತಿ ನೀಡಲಾಗಿದೆ. ಇಬ್ರಾಹಿಂ ಸೇರಿದಂತೆ ಪಕ್ಷದ ನಾಯಕರು, ಶಾಸಕರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಅಸಮಾಧಾನವನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಲು ಅವಕಾಶವಿತ್ತು. ಆದರೆ, ಕೆಲವರು ಪಕ್ಷಕ್ಕೆ ಮುಜುಗರವಾಗುವ ನಡೆ ಅನುಸರಿಸಿದರು. ಪಕ್ಷದ ಹಲವು ಮುಸ್ಲಿಂ ನಾಯಕರು ಜತೆಗೆ ಇದ್ದಾರೆ. ಯಾರೂ ಧೃತಿಗೆಡಬೇಕಾಗಿಲ್ಲ’ ಎಂದರು.
ಜೆಡಿಎಸ್ ಉನ್ನತ ಸಮಿತಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮುಖಂಡರಾದ ಎಚ್.ಕೆ. ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ, ಅಲ್ಕೊಡ್ ಹನುಮಂತಪ್ಪ, ವೆಂಕಟರಾವ್ ನಾಡಗೌಡ, ವೈ.ಎಸ್.ವಿ.ದತ್ತ, ಟಿ.ಎ. ಶರವಣ, ರಮೇಶ್ ಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.