ADVERTISEMENT

ಮೂವರು ಅನರ್ಹರ ಶಾಸಕರ ಉಚ್ಚಾಟಿಸಿದ ಜೆಡಿಎಸ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:50 IST
Last Updated 1 ಡಿಸೆಂಬರ್ 2019, 13:50 IST
   

ಬೆಂಗಳೂರು: ಅನರ್ಹ ಶಾಸಕರಾದ ಎಚ್‌.ವಿಶ್ವನಾಥ್‌ (ಹುಣಸೂರು), ಕೆ. ಗೋಪಾಲಯ್ಯ (ಮಹಾಲಕ್ಷ್ಮಿ ಲೇ ಔಟ್‌) ಮತ್ತು ಕೆ.ಸಿ. ನಾರಾಯಣಗೌಡ (ಕೆ.ಆರ್‌.ಪೇಟೆ) ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ತಕ್ಷಣ ದಿಂದಲೇ ಜಾರಿಗೆ ಬರುವಂತೆ ಉಚ್ಚಾಟಿಸಲಾಗಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಇಲ್ಲಿ ಬುಧವಾರ ನಡೆದ ಪಕ್ಷದ ಸೋತಅಭ್ಯರ್ಥಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರಬಗ್ಗೆ ಸುಪ್ರೀಂ ಕೋ‌ರ್ಟ್‌ನ ತೀರ್ಮಾನ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು ಎಂದರು.

‘ಆಗಸ್ಟ್ ಏಳರಂದು ಬೆಂಗಳೂರಿನಲ್ಲಿ ಜೆಡಿಎಸ್ ಸಮಾವೇಶ ನಡೆಸುತ್ತೇವೆ. ಆಗ ನೂತನ ಜಿಲ್ಲಾ ಅಧ್ಯಕ್ಷರನ್ನುನೇಮಕ ಮಾಡುತ್ತೇವೆ’ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್‌ ಜತೆಗಿನ ದೋಸ್ತಿ ಉಪಚುನಾವಣೆವರೆಗೆ ಮಾತ್ರ ಸಾಕು. ಬಳಿಕ ಯಾವ ಕಾರಣಕ್ಕೂ ದೋಸ್ತಿ ಬೇಡ ಎಂದು ಸಭೆಯಲ್ಲಿ ಹಲವರು ಒತ್ತಾಯಿಸಿದರು ಎಂದು ಹೇಳಲಾಗಿದೆ.

ವಕ್ತಾರರ ನೇಮಕ: ಪಕ್ಷದ ರಾಜ್ಯ ಮಾಧ್ಯಮ ವಕ್ತಾರರಾಗಿ ವೈ.ಎಸ್‌.ವಿ. ದತ್ತ, ಕೆ.ಎಂ. ಶಿವಲಿಂಗೇ ಗೌಡ, ರಮೇಶ್‌ ಬಾಬು, ಕೆ.ಟಿ. ಶ್ರೀಕಂಠೇ ಗೌಡ, ಎನ್‌.ಎಚ್‌.ಕೋನರಡ್ಡಿ, ಟಿ.ಎ. ಶರವಣ, ಎಸ್‌.ಎಲ್‌. ಭೋಜೇಗೌಡ, ಮರಿಲಿಂಗೇಗೌಡ, ಮೊಹಮ್ಮದ್‌ ಜಫ್ರುಲ್ಲಾ ಖಾನ್‌, ಸೈಯದ್‌ ಶಫೀವುಲ್ಲಾ ಸಾಹೇಬ್, ಸೈಯದ್‌ ಮೋಹಿದ್‌ ಅಲ್ತಾಫ್‌, ಆರ್.ಪ್ರಕಾಶ್‌ ಮತ್ತು ಎಲ್‌.ಗಂಗಾಧರ ಮೂರ್ತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಸಕರ ಅನರ್ಹತೆ ಬಗ್ಗೆ ಜನರ ಪ್ರತಿಕ್ರಿಯೆ
‘ಕ್ಷೇತ್ರದ ಅಭಿವೃದ್ಧಿ ಆಗುತ್ತಿಲ್ಲ’ ಎಂಬ ಕಾರಣ ನೀಡಿ ರಾಜೀನಾಮೆ ನೀಡಿರುವ ಕೆ.ಆರ್‌.ಪುರ, ಯಶವಂತಪುರ, ಶಿವಾಜಿನಗರ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮೀ ಬಡಾವಣೆ ಹಾಗೂ ಹೊಸಕೋಟೆ ಕ್ಷೇತ್ರಗಳ ಶಾಸಕರನ್ನು ವಿಧಾನಸಭಾಧ್ಯಕ್ಷರು ಅನರ್ಹಗೊಳಿಸಿದ್ದಾರೆ. ಅವರು ಕೊಟ್ಟ ಕಾರಣ ನಿಜವೇ? ಎಂಬುದರ ಬಗ್ಗೆ ನಗರದ ಜನರು ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕ ಸ್ಥಾನಕ್ಕೆ ಯೋಗ್ಯರಲ್ಲ
ದುರಾಸೆ ಹಾಗೂ ಸ್ವಾರ್ಥ ರಾಜಕಾರಣದ ಬೆನ್ನತ್ತಿ ಹೋಗಿರುವ ಶಾಸಕರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿ ಮೇಲೆ ಗಮನವಿಲ್ಲ. ಹೆಸರಿಗೆ ಮಾತ್ರ ಕ್ಷೇತ್ರದಅಭಿವೃದ್ಧಿಯ ನೆಪ ನೀಡಿ ರಾಜೀನಾಮೆನೀಡಿದ್ದಾರೆ. ಶಾಸಕರಾಗಿಯೂ ಕ್ಷೇತ್ರ ಅಭಿವೃದ್ಧಿ ಮಾಡಲು ಆಗಲಿಲ್ಲ ಎಂದರೆ ಅವರು ಆ ಸ್ಥಾನಕ್ಕೆ ಯೋಗ್ಯರಲ್ಲ.
-ಜಿ.ಎಸ್.ಮನು,ಬೆಂಗಳೂರು

ರೆಸಾರ್ಟ್‌ನಲ್ಲಿದ್ದರೆ ಅಭಿವೃದ್ಧಿಯೇ?
ಕ್ಷೇತ್ರದ ಅಭಿವೃದ್ಧಿಯಾಗದ ಕಾರಣಕ್ಕೆ ರಾಜೀನಾಮೆ ನೀಡಿದ್ದೇವೆ ಎಂಬ ಶಾಸಕರ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಶಾಸಕರು ತಮ್ಮ ಕ್ಷೇತ್ರದಲ್ಲಿ ಲಭ್ಯವಿದ್ದರೆ ಮಾತ್ರ ಆ ಕ್ಷೇತ್ರದ ಕುಂದುಕೊರತೆಗಳು ಕಣ್ಣಿಗೆ ಕಾಣುತ್ತವೆ. ಎಲ್ಲೋ ರೆಸಾರ್ಟ್‌ನಲ್ಲಿ ಹೇಡಿಗಳಂತೆ ಅವಿತುಕೊಂಡರೆ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ?
-ರಂಗಸ್ವಾಮಿ,ಉಲ್ಲಾಳ ಉಪನಗರ

ಕ್ಷೇತ್ರದ ಹೆಸರನ್ನು ಗಿರವಿಗೆ ಇಟ್ಟಿದ್ದಾರೆ
ರಾಜೀನಾಮೆಗೆ ‘ಕ್ಷೇತ್ರದ ಅಭಿವೃದ್ಧಿ ಆಗುತ್ತಿಲ್ಲ’ ಎಂಬಅವರ ಸಮರ್ಥನೆ ಸಬೂಬು ಅಷ್ಟೇ. ಅಧಿಕಾರದ ದಾಹದಿಂದ ಅಥವಾ ಹಣದ ಮೇಲಿನಮೋಹದಿಂದ ರಾಜೀನಾಮೆ ನಿರ್ಧಾರತೆಗೆದುಕೊಂಡಿರಬಹುದು. ಇದಕ್ಕೆ ಕ್ಷೇತ್ರದ ಹೆಸರನ್ನು ಗಿರವಿಗೆ ಇಟ್ಟಿದ್ದಾರೆ.
-ಪುಟ್ಟೇಗೌಡ,ಬನಶಂಕರಿ 3ನೇ ಹಂತ

ಅನರ್ಹತೆ ಸರಿಯಾದ ಕ್ರಮ
ಕ್ಷೇತ್ರದ ಜನರಿಗೆ ಮೋಸ ಮಾಡಲು ಶಾಸಕರು ನಿರ್ಧರಿಸಿದಂತಿದೆ. ನಿಮ್ಮಂತಹ ಅಸಮರ್ಥ ನಾಯಕರನ್ನು ಆಯ್ಕೆ ಮಾಡಿ ದೊಡ್ಡ ತಪ್ಪು ಮಾಡಿದ ಭಾವನೆಯಲ್ಲಿದ್ದೆವು. ಈಗ ಶಾಸಕರನ್ನು ಅನರ್ಹಗೊಳಿಸಿರುವುದೇ ಸೂಕ್ತ ಕ್ರಮ.
-ಎಚ್.ಎಸ್.ಶ್ರೀಮತಿ,ಜಯನಗರ

ಅನುದಾನ ಏನಾಯಿತು?
ಕ್ಷೇತ್ರದ ಅಭಿವೃದ್ಧಿ ಮಾಡಲು ಸರ್ಕಾರ ಸಾಕಷ್ಟು ಅನುದಾನವನ್ನು ನೀಡಿದ್ದರೂ ‘ನನ್ನ ಕ್ಷೇತ್ರ ಅಭಿವೃದ್ಧಿಯಾಗಿಲ್ಲ’ ಎಂದು ಹೇಳಲು ಶಾಸಕರಿಗೆ ನಾಚಿಕೆ ಆಗಬೇಕು. ಹಾಗಾದರೆ ಅನುದಾನ ಬಳಕೆಯಾಗದೆ ಶಾಸಕರ ಜೇಬು ತುಂಬಿದೆಯೇ? ಅವರನ್ನು ಅನರ್ಹಗೊಳಿಸಿಪ್ರಜಾಪ್ರಭುತ್ವವನ್ನು ಉಳಿಸಿದಂತಾಗಿದೆ.
-ರಾಘವೇಂದ್ರ,ಗೋವಿಂದರಾಜನಗರ

ರಾಜಕೀಯ ಆಟ ನೋಡಿದ್ದೇವೆ
ಶಾಸಕರೇ, ಇಡೀ ರಾಜ್ಯದ ಜನರು ನಿಮ್ಮ ರಾಜಕೀಯ ಆಟಗಳನ್ನು ಗಮನಿಸಿದ್ದಾರೆ. ನಿಮ್ಮ ದುರಾಸೆಗಳಿಗೆ ಕ್ಷೇತ್ರ ಹಾಗೂ ಕ್ಷೇತ್ರದ ಜನರನ್ನು ಯಾಕೆ ಬಲಿಪಶುಗಳನ್ನಾಗಿ ಮಾಡಿದ್ದೀರಿ? ಅಧಿಕಾರ ಗದ್ದುಗೆ ಏರಿ ಮೆರೆಯುತ್ತಿದ್ದ ನಿಮ್ಮನ್ನು ಅನರ್ಹಗೊಳಿಸಿರುವುದೇ ಸರಿ.
-ಅಶೋಕ್ ಗೌಡ,ದೊಡ್ಡಜಾಲ

ಶಾಸಕರಿಗೆ ಎಚ್ಚರಿಕೆಯ ಗಂಟೆ
ಅಧಿಕಾರವನ್ನು ಬಟ್ಟೆಯಂತೆ ಬದಲಿಸಿ ಜನರಿಗೆ ಮೋಸ ಮಾಡುವವವರಿಗೆ ಈ ಅನರ್ಹತೆ ಆದೇಶಎಚ್ಚರಿಕೆಯ ಗಂಟೆಯಾಗಲಿದೆ. ಜನರನ್ನುಆಳಬೇಕಾದವನು ಅರಸನಂತೆ ರೆಸಾರ್ಟ್‌ನಲ್ಲಿ ಇರಲು ಮತ ಹಾಕಿಲ್ಲ. ಅಧಿಕಾರ ದಾಹಕ್ಕೆ ಅನರ್ಹತೆ ತಡೆ ನೀಡಿದೆ.
-ಎಂ.ಎನ್.ಆನಂದ್,ಬೆಂಗಳೂರು

ಸರ್ಕಾರದ ಮೇಲೆ ಒತ್ತಡ ಹೇರಬೇಕಿತ್ತು
ಶಾಸಕರಿಗೆ ನಿಜವಾಗಿ ತಮ್ಮ ಕ್ಷೇತ್ರದ ಮೇಲೆಕಾಳಜಿ ಇದ್ದಲ್ಲಿ ಸತ್ಯಾಗ್ರಹ, ಚಳವಳಿ, ಧರಣಿಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬಹುದಿತ್ತು. ಅದನ್ನು ಬಿಟ್ಟು ರಾಜೀನಾಮೆ ನೀಡಿ ರೆಸಾರ್ಟ್‌ ಸೇರಿ ಅವುಗಳ ಅಭಿವೃದ್ಧಿ ಮಾಡುತ್ತಿದ್ದಾರೆ. ಅನರ್ಹಗೊಳಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ.
–ಸಿ.ಮಂಜುನಾಥ್ ನೆಟ್ಕಲ್,ಕಾಳಿಕಾ‌ನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.