ಬೆಂಗಳೂರು: ಬಿಡದಿಯಲ್ಲಿರುವ ತಮ್ಮ ತೋಟಕ್ಕೆ ಭೇಟಿ ನೀಡಿದ ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸುಲ್ ಜನರಲ್ ಟ್ಯಾಮಿ ಬೆನ್‌ಹೈಮ್ ಅವರಿಗೆ ಬಾಳೆಗೊನೆಯನ್ನು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಉಡುಗೊರೆಯಾಗಿ ನೀಡಿದ್ದಾರೆ.
ಈ ವಿಷಯವನ್ನು ಮೈಕ್ರೊ ಬ್ಲಾಗಿಂಗ್‌ನ ಎಕ್ಸ್‌ನ ಖಾತೆಯಲ್ಲಿ ಹಂಚಿಕೊಂಡಿರುವ ಕುಮಾರಸ್ವಾಮಿ, ‘ನಮ್ಮ ಬಿಡದಿ ಫಾರ್ಮ್‌ಹೌಸ್‌ಗೆ ಟ್ಯಾಮಿ ಬೆನ್‌ಹೈಮ್ ಭೇಟಿ ನೀಡಿದರು. ಕರ್ನಾಟಕ–ಇಸ್ರೇಲ್ ಸಂಬಂಧ, ಪರಸ್ಪರ ಸಹಕಾರ, ಜ್ಞಾನ ಮತ್ತು ತಂತ್ರಜ್ಞಾನದ ವಿನಿಮಯ ಕುರಿತು ಹೈಮ್ ಅವರೊಂದಿಗೆ ಚರ್ಚಿಸಿದೆ’ ಎಂದು ಬರೆದುಕೊಂಡಿದ್ದಾರೆ.
‘ಮಾತುಕತೆ ಸಂದರ್ಭದಲ್ಲಿ ಇಸ್ರೇಲ್–ಹಮಾಸ್ ನಡುವಿನ ಯುದ್ಧದ ಪರಿಸ್ಥಿತಿಯನ್ನು ಹೈಮ್ ಹಂಚಿಕೊಂಡರು. ಹಮಾಸ್ ವಶದಲ್ಲಿರುವ ಮುಗ್ದ ಜನರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳನ್ನು ಹೈಮ್ ವಿವರಿಸಿದರು. ಯುದ್ಧ ಪ್ರದೇಶದಲ್ಲಿ ಶಾಂತಿ ನೆಲಸಲಿ. ಅಪಹರಿಸಿರುವವರನ್ನು ಹಮಾಸ್ ಸುರಕ್ಷಿತವಾಗಿ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸವಿದೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬ್ಯಾಟರಿ ಕಾರಿನಲ್ಲಿ ಹೈಮ್ ಅವರನ್ನು ಕೂರಿಸಿಕೊಂಡು ಕುಮಾರಸ್ವಾಮಿ ಅವರು ತಮ್ಮ ತೋಟವನ್ನು ತೋರಿಸಿದರು. ತಾವು ಕೈಗೊಂಡ ಕೃಷಿಯನ್ನು ಅವರಿಗೆ ವಿವರಿಸಿದರು.
ಭೇಟಿಯ ನೆನಪಿಗಾಗಿ ಹೈಮ್ ಅವರು ಕುಮಾರಸ್ವಾಮಿ ಅವರಿಗೆ ಇಸ್ರೇಲ್ ಎಂದು ಬರೆದ ಚೀದಲ್ಲಿ ಒಂದಷ್ಟು ಉಡುಗೊರೆ ನೀಡಿದರು. ಹೈಮ್ ಅವರಿಗೆ ಏಲಕ್ಕಿ ಹಾರ ಹಾಕಿ ಸನ್ಮಾನ ಮಾಡಿದ ಕುಮಾರಸ್ವಾಮಿ, ಬಾಳೆಗೊನೆಯನ್ನು ಕುಮಾರಸ್ವಾಮಿ ಉಡುಗೊರೆಯಾಗಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.