ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಜೆಡಿಎಸ್, ಜಾರ್ಖಂಡ್ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಮುಂದಿಟ್ಟುಕೊಂಡು ಕುಟುಕಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, 'ನಶಿಸುತ್ತಿರುವ ಶತಮಾನಗಳ ಪಳೆಯುಳಿಕೆ ಕಾಂಗ್ರೆಸ್. ಪಕ್ಷದ ಪಕಳೆಗಳು ದೇಶದಾದ್ಯಂತ ಒಂದೊಂದೇ ಉದುರುತ್ತಿವೆ. ಮಹಾರಾಷ್ಟ್ರದಲ್ಲಿ ನೆಲಕಚ್ಚಿದೆ. ಅಲ್ಲಿ 6ನೇ ಸ್ಥಾನಕ್ಕೆ, ಜಾರ್ಖಂಡ್‌ನಲ್ಲಿ 3ನೇ ಸ್ಥಾನಕ್ಕೆ ಜಾರಿದೆ. ಆದರೂ ಕರ್ನಾಟಕದಲ್ಲಿ ವಾಮಮಾರ್ಗದಲ್ಲಿ ಗೆದ್ದ 3 ಬೈಎಲೆಕ್ಷನ್ ಸೀಟುಗಳನ್ನು ಮುಖದ ಮೇಲಿಟ್ಟುಕೊಂಡು ಮೆರೆಯುತ್ತಿದೆ, ಮೆರೆಯಲಿ' ಎಂದು ಕಿಡಿಕಾರಿದೆ.
ಮಹಾರಾಷ್ಟ್ರದಲ್ಲಿ ಮತದಾರರು 'ಕೈ' ಪಕ್ಷದ ಪೋಸ್ಟ್ ಮಾರ್ಟಮ್ ಮಾಡಿದ್ದಾರೆ. 'ಕಾಂಗ್ರೆಸ್ಸಿಗರೇ.. ಅನ್ಯರ ಬಗ್ಗೆ ಹಗುರವಾಗಿ ಮಾತಾನಾಡುವ ನಿಮ್ಮ ಹರಕು ಬಾಯಿಗಳಿಗೆ, ನಿಮ್ಮ ತೂತುಬಿದ್ದ ಮಡಿಕೆಯಂತಾಗಿರುವ ನಿಮ್ಮ ಪಕ್ಷಕ್ಕೆ ಮೊದಲು ತೇಪೆ ಹಚ್ಚಿ. 288 ಸೀಟುಗಳ ಮಹಾರಾಷ್ಟ್ರದಲ್ಲಿ ಹದಿನಾರೇ ಸೀಟಿಗೆ ಬೋರಲು ಬಿದ್ದ ಸೋಕಾಲ್ಡ್ ನ್ಯಾಷನಲ್ ಪಾರ್ಟಿ ನಾಯಕರೇ, ಇನ್ನೊಬ್ಬರ ಬಚ್ಚಲು ಮನೆ ಮೂಸಿ ನೋಡುವ ಚಟ ಬಿಡಿ' ಎಂದು ಸಲಹೆ ನೀಡಿದೆ.
ಇನ್ನು ಜಾರ್ಖಂಡ್, 'ಜೆಎಂಎಂ ಪರಾವಲಂಬಿಯಾಗಿ ಪರದೇಸಿ ಬಾಳ್ವೆ ಮಾಡಿಕೊಂಡು 81 ಸೀಟಿನ ಪೈಕಿ ಹದಿನಾರಕ್ಕೆ ಅಡ್ಡಡ್ಡ ಬಿದ್ದ ನಿಮ್ಮ ಪಕ್ಷಕ್ಕೆ ಅಲ್ಲಿಯೂ ಜನ ಚಟ್ಟ ಕಟ್ಟಿದ್ದಾರೆ. ಸರಳ ಲೆಕ್ಕ ಕಾಂಗ್ರೆಸ್ಸಿಗರೇ.. 288+81=369. ಇಷ್ಟರಲ್ಲಿ ಒಟ್ಟು ಎಷ್ಟು ಗೆದ್ದಿದ್ದೀರಿ? ಕೇವಲ.. ಕೇವಲ.. 32. ಅದರಲ್ಲಿಯೂ ಮಹಾರಾಷ್ಟ್ರದಲ್ಲಿ -28. ಛೀ.. ನಿಮ್ಮ ಜನ್ಮಕ್ಕೆ.. ನಿಮಗಿಂತ ನಾವು ಕಳಪೆಯೇ..? 224 ಕ್ಷೇತ್ರಗಳಲ್ಲಿ 19 ಗೆದ್ದಿದ್ದೆವು. ಅದೂ ಯಾವ ಮೈತ್ರಿಯೂ ಇಲ್ಲದೆ!. ನಾವು ಪ್ರಾದೇಶಿಕ, ನೀವು ಸೋಕಾಲ್ಡ್ ನ್ಯಾಷನಲ್' ಎಂದು ವಾಗ್ದಾಳಿ ನಡೆಸಿದೆ.
'ಐರೆನ್ ಲೆಗ್ ಪಾರ್ಟಿ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಮೈತ್ರಿ ಪಕ್ಷಗಳನ್ನು ವ್ಯವಸ್ಥಿತವಾಗಿ ಮುಗಿಸಿದೆ. ಅದಕ್ಕೆ ಬಲಿಯಾದ ಪಕ್ಷ ಉದ್ಧವ್ ಠಾಕ್ರೆಯವರ ಶಿವಸೇನೆ. ಮೈತ್ರಿಗೆ, ಮೈತ್ರಿ ಪಕ್ಷಗಳಿಗೆ ಮಿತ್ರದ್ರೋಹ ಮಾಡುತ್ತಿರುವ ಕಾಂಗ್ರೆಸ್ ಸಂವಿಧಾನವನ್ನೇ ಅಣಕಿಸುತ್ತಿದೆ. ಅನ್ಯರ ಅಣಕವೇ ಮನೆಹಾಳು ಕಾಂಗ್ರೆಸ್ಸಿನ ಕಾಯಕ' ಎಂದೂ ದೂರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.