ಬೆಂಗಳೂರು: ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಾಗದ ಕಾಂಗ್ರೆಸ್ ತಮ್ಮ ಪಕ್ಷದ ವಿರುದ್ಧ ಹೋರಾಟಗಳನ್ನು ನಡೆಸುತ್ತಿದೆ ಎಂದು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಮಂಡಿಸಿದ ಭೂ ಸುಧಾರಣೆ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಜೆಡಿಎಸ್ ಬೆಂಬಲ ಸೂಚಿಸಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಮತ್ತು ಕೆಲವು ರೈತ ಮುಖಂಡರು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದರು. ಇದೀಗ ಕಾಂಗ್ರೆಸ್ ಹಾಗೂ ರೈತ ಮುಖಂಡರ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು, ‘ರಾಜ್ಯದಲ್ಲಿ ರೈತರಿಗೆ ಸ್ಪಂದಿಸುವ ಪಕ್ಷವೇನಾದರೂ ಇದ್ದರೆ ಅದು ಜೆಡಿಎಸ್ ಮಾತ್ರ. ನೀರಾವರಿ, ಕೃಷಿ, ರೈತರ ಆರ್ಥಿಕ ಸಬಲೀಕರಣಕ್ಕೆ ರಾಜ್ಯದಲ್ಲಿ ಏನಾದರೂ ಒಳ್ಳೆಯದಾಗಿದ್ದರೆ ಅದು ಜೆಡಿಎಸ್‌ನಿಂದ ಮಾತ್ರ. ಜೆಡಿಎಸ್ ರಾಜಕೀಯ ಪಕ್ಷ ಮಾತ್ರವಲ್ಲ. ಅದು ರೈತರಿಗಾಗಿ ಹೋರಾಡುವ ರೈತ ಸಂಘವೂ ಹೌದು ಎಂಬುದನ್ನು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘2013-14ರ ಕಾಲ. ಕಾಂಗ್ರೆಸ್ ಅಧಿಕಾರದಲ್ಲಿತ್ತು. ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿತ್ತು. ರಾಮನಗರ, ಮಂಡ್ಯದಲ್ಲಿ ರೋಗದ ರುದ್ರ ನರ್ತನ. ಸರ್ಕಾರ ಸುಮ್ಮನಿತ್ತು. ಆಗ ಚನ್ನಪಟ್ಟಣ, ರಾಮನಗರ, ಕನಕಪುರ, ಮಂಡ್ಯದಲ್ಲಿ ಪ್ರತಿ ಕುಟುಂಬಕ್ಕೆ ₹25 ಸಾವಿರ ನೆರವು ವೈಯಕ್ತಿವಾಗಿ ನೀಡಿದ್ದೆ. ಆಗ ಈ ರೈತ ನಾಯಕರು ಎಲ್ಲಿದ್ದರು?’ ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು, ‘ಮಹದಾಯಿಗಾಗಿ ಯಮನೂರಿನಲ್ಲಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಕಾಂಗ್ರೆಸ್ ಸರ್ಕಾರ ಹಲ್ಲೆ ಮಾಡಿತ್ತು. ಆ ದಾಳಿಯನ್ನು ರೈತರು ಇಂದೂ ಮರೆತಿಲ್ಲ ಎಂದು ಇತ್ತೀಚೆಗೆ ಪತ್ರಿಕೆಗಳೂ ವರದಿ ಮಾಡಿವೆ. ಅಂದು ಯಮನೂರಿಗೆ ಧಾವಿಸಿ ರೈತರಿಗೆ ಸಾಂತ್ವನ ಹೇಳಿದ್ದು, ನಾನು. ಸರ್ಕಾರ ರೈತರ ಮೇಲೆ ದಾಳಿ ನಡೆಸುತ್ತಿದ್ದಾಗ ಈ ರೈತ ನಾಯಕರು ಎಲ್ಲಿದ್ದರು?’ ಎಂದು ಕೇಳಿದ್ದಾರೆ.
ಸಾಲಮನ್ನಾ ವಿಚಾರವಾಗಿಯೂ ಟ್ವೀಟ್ ಮಾಡಿರುವ ಅವರು, ‘ರೈತರ ₹25 ಸಾವಿರ ಕೋಟಿ ಮೊತ್ತದ ಸಾಲಮನ್ನಾ ಮಾಡುವಾಗ ರೈತ ಸಂಘಗಗಳ ಬಳಿ ಏನಾದರೂ ಕಮಿಷನ್ ಪಡೆದೆನೇ? ಕೆಲ ರೈತ ನಾಯಕರ ಬಾಯಲ್ಲಿ ಬರುತ್ತಿರುವ ‘ಕಿಕ್‌ಬ್ಯಾಕ್’ ಏನಾದರೂ ಪಡೆದೆನೇ? ರೈತ ನಾಯಕರು ಎನಿಸಿಕೊಂಡವರಿಗೆ ಸಾಲಮನ್ನಾ ವಿಚಾರವಾಗಿ ನನ್ನ ಕಡೆಗೆ ಕೃತಜ್ಞತೆ ಇದೆಯೇ? ರೈತರು ಸಾಲದ ಸುಳಿಯಲ್ಲಿದ್ದಾಗ ಈ ರೈತ ನಾಯಕರು ಎಲ್ಲಿದ್ದರು?’ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.