ADVERTISEMENT

ಕಾಂಗ್ರೆಸ್ ಭ್ರಷ್ಟಾಚಾರವನ್ನು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಹೋಲಿಸಿದ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 10:57 IST
Last Updated 15 ಆಗಸ್ಟ್ 2023, 10:57 IST
ಎಚ್‌ಡಿಕೆ
ಎಚ್‌ಡಿಕೆ   

ಬೆಂಗಳೂರು: ಪ್ಯಾನ್‌ ಇಂಡಿಯಾ ಸಿನಿಮಾಗಳಂತೆ ರಾಜ್ಯ ಸರ್ಕಾರದ ಲಂಚಾವತಾರವೂ ಹಲವು ಭಾಗಗಳಾಗಿ ತೆರೆದುಕೊಳ್ಳುತ್ತಿದೆ. ಪ್ರತಿ ಚಿತ್ರಕ್ಕೂ ಕೊನೆಯಲ್ಲಿ ಕ್ಲೈಮ್ಯಾಕ್ಸ್ ಇರುವಂತೆ ಕಾಂಗ್ರೆಸ್‌ ಭ್ರಷ್ಟಾಚಾರದ ನಾಟಕಕ್ಕೂ ಶೀಘ್ರ ತೆರೆ ಬೀಳಲಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆ ನಂತರ ಅವರು ಮಾತನಾಡಿದರು.

ನನಗೆ ಬುದ್ಧಿಭ್ರಮಣೆಯಾಗಿದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದ್ದಾರೆ. ನನ್ನ ಬಗ್ಗೆ ಅವರು ಚಿಂತಿಸುವುದು ಬೇಡ. ನಮ್ಮ ಕುಟುಂಬದಲ್ಲೇ ಸಾಕಷ್ಟು ವೈದ್ಯರಿದ್ದಾರೆ. ತಪಾಸಣೆ ಮಾಡಿಸಿಕೊಳ್ಳುತ್ತೇನೆ. ಆದರೆ, ಮತ ಹಾಕಿದ ಮತದಾರರ ಬುದ್ಧಿಭ್ರಮಣೆ ಮಾಡುವುದು ಬೇಡ. ಇಂಥ ಕೆಟ್ಟ ಸರ್ಕಾರ ಎಂದೂ ನೋಡಿರಲಿಲ್ಲ ಎಂದರು.

ADVERTISEMENT

ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ  ವೀರಾವೇಶದ ಮಾತುಗಳನ್ನು ಆಡಿದ್ದಾರೆ. ಮುಖ್ಯಮಂತ್ರಿ ಪೆನ್‌ ಡ್ರೈವ್‌ಗೆ ಪ್ರತಿಯಾಗಿ ಪೆನ್‌ ತೆಗೆದು ತೋರಿಸುತ್ತಾ ಅಭಿನಯ ಮಾಡಿದ್ದಾರೆ. ನಾನು ಕೊಡುವ ಸಾಕ್ಷ್ಯಕ್ಕೆ ಪ್ರತಿಯಾಗಿ ಆರೋಪಿತರ ಮೇಲೆ ಕ್ರಮ ಜರುಗಿಸುವ ಎದೆಗಾರಿಕೆ ಮುಖ್ಯಮಂತ್ರಿಗೆ ಇದೆಯಾ ಎಂದು ಪ್ರಶ್ನಿಸಿದರು.

ಇದು 40 ಪರ್ಸೆಂಟ್‌ ಸರ್ಕಾರ ಎಂದು ಗುತ್ತಿಗೆದಾರರು ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಬೆಂಕಿಯಿಂದ ಬಾಣಲೆಗೆ ಬಿದ್ದೆವು ಎಂದಿದ್ದವರೇ ಈಗ ಉಲ್ಟಾ ಹೊಡೆದಿದ್ದಾರೆ. ಗುತ್ತಿಗೆದಾರರಿಗೆ ಗಟ್ಟಿತನ ಬೇಕು. ಧೈರ್ಯವಾಗಿ ಮಾತಾಡಬೇಕು. ವಿದೇಶಕ್ಕೆ ಹೋಗುವ ಮೊದಲು ನಮ್ಮ ಮನೆಗೆ ಬಂದು ತಮ್ಮ ನೋವು ತೋಡಿಕೊಂಡರು. ಅವರಿಗೆ ಬೆಂಬಲ ನೀಡುವುದಾಗಿ ಭರವಸೆ ಕೊಟ್ಟಿದ್ದೆ. ಈಗ ವರಸೆ ಬದಲಾಗಿದೆ. ಅಜ್ಜಯ್ಯನ ಮೇಲೆ ಪ್ರಮಾಣ ಮಾಡಿ ಎಂದು ಸವಾಲು ಹಾಕಿದ್ದವರು ತಣ್ಣಗಾಗಿದ್ದಾರೆ. ಅವರನ್ನು ತಣ್ಣಗೆ ಮಾಡಿದವರು ಯಾರು? ಅವರ ಮೇಲೆ ಒತ್ತಡ ಹಾಕಲು ಮಧ್ಯಸ್ಥಿಕೆ ವಹಿಸಿದವರು ಯಾರು? ಆತ್ಮಹತ್ಯೆ ಪ್ರಕರಣದಲ್ಲಿ ದುಡ್ಡು ಕೊಟ್ಟು ಸರಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕೊಬ್ಬರು ಮಾತಾಡಿದ್ದಾರೆ. ದುಡ್ಡಿನಿಂದ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿದ್ದಾಗ ಒಂದೂ ದಾಖಲೆ ಬಿಡುಗಡೆ ಮಾಡಲಿಲ್ಲ. ಇಂಥವರು ಇನ್ನೊಬ್ಬರ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ. ಗ್ಯಾರಂಟಿ ಬಗ್ಗೆ ಪ್ರತಿದಿನ ಹೇಳಿಕೊಳ್ಳುವ ಕಾಂಗ್ರೆಸ್‌ ನಾಯಕರು ಪಕ್ಷದ ದುಡ್ಡಿನಿಂದ ಕೊಟ್ಟಿದ್ದಾರಾ? ಉಪ ಮುಖ್ಯಮಂತ್ರಿ ಅವರು ನಮ್ಮ ಅಜ್ಜಯ್ಯನ ಕಥೆ ಇವರಿಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಮಗೆ ಅಜ್ಜಯ್ಯನ ರಕ್ಷಣೆ ಇಲ್ಲವೇ ಅವರೊಬ್ಬರಿಗೆ ಮಾತ್ರ ಇರೋದಾ? ಎಂದು ಕೇಳಿದರು.

-ಕುಮಾರಸ್ವಾಮಿ ಬಿಜೆಪಿ ಅಡಿಯಾಳಲ್ಲ

'ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ನಾಯಕರು ಆರೋಪಿಸಿದಂತೆ ನಾನು ಬಿಜೆಪಿ ವಕ್ತಾರನಲ್ಲ. ಅಡಿಯಾಳೂ ಅಲ್ಲ ನಾನು ಆರೂವರೆ ಕೋಟಿ ಕನ್ನಡಿಗರ ವಕ್ತಾರ. ಜನರು ಪ್ರತಿಪಕ್ಷ ಸ್ಥಾನದಲ್ಲಿ ಇರಿಸಿದ್ದಾರೆ. ಅವರ ಪರವಾಗಿ ಕಾವಲುಗಾರನಾಗಿ ಸರ್ಕಾರವನ್ನು ಪ್ರಶ್ನಿಸುತ್ತಿದ್ದೇನೆ. ವಿರೋಧ ಪಕ್ಷದ ಸಾಮಾನ್ಯ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಕುಮಾರಸ್ವಾಮಿಗೆ ಹೊಟ್ಟೆ ಉರಿ ಎಂದು ಹೇಳುತ್ತಿದ್ದಾರೆ. ನನಗೆ ಏನಾಗಿದೆಯೋ ಅದಕ್ಕೆ ಔಷಧ ತೆಗೆದುಕೊಳ್ಳುವೆ. ಜನರ ಸಂಕಟಕ್ಕೆ ಅವರು ಪರಿಹಾರ ನೀಡಲಿ’ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಗುತ್ತಿಗೆದಾರರ ತಣ್ಣಗೆ ಮಾಡಿದವರು ಯಾರು? ‘

ಇದು 40 ಪರ್ಸೆಂಟ್‌ ಸರ್ಕಾರ. ಬೆಂಕಿಯಿಂದ ಬಾಣಲೆಗೆ ಬಿದ್ದೆವು ಎಂದಿದ್ದವರೇ ಈಗ ಉಲ್ಟಾ ಹೊಡೆದಿದ್ದಾರೆ. ಗುತ್ತಿಗೆದಾರರಿಗೆ ಗಟ್ಟಿತನ ಬೇಕು. ಧೈರ್ಯವಾಗಿ ಮಾತಾಡಬೇಕು. ವಿದೇಶಕ್ಕೆ ಹೋಗುವ ಮೊದಲು ನಮ್ಮ ಮನೆಗೆ ಬಂದು ತಮ್ಮ ನೋವು ತೋಡಿಕೊಂಡರು. ಅವರಿಗೆ ಬೆಂಬಲ ನೀಡುವುದಾಗಿ ಭರವಸೆ ಕೊಟ್ಟಿದ್ದೆ. ಈಗ ಅವರ ವರಸೆ ಬದಲಾಗಿದೆ’ ಎಂದು ಕುಮಾರಸ್ವಾಮಿ ಹೇಳಿದರು.  ‘ಅಜ್ಜಯ್ಯನ ಮೇಲೆ ಪ್ರಮಾಣ ಮಾಡಿ ಎಂದು ಸವಾಲು ಹಾಕಿದ್ದವರು ತಣ್ಣಗಾಗಿದ್ದಾರೆ. ಅವರನ್ನು ತಣ್ಣಗೆ ಮಾಡಿದವರು ಯಾರು? ಅವರ ಮೇಲೆ ಒತ್ತಡ ಹಾಕಲು ಮಧ್ಯಸ್ಥಿಕೆ ವಹಿಸಿದವರು ಯಾರು? ಆತ್ಮಹತ್ಯೆ ಪ್ರಕರಣದಲ್ಲಿ ದುಡ್ಡು ಕೊಟ್ಟು ಸರಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕೊಬ್ಬರು ಮಾತನಾಡಿದ್ದಾರೆ. ದುಡ್ಡಿನಿಂದ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.