ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ಜೋಕರ್’ ಎಂದು ಟೀಕಿಸಿದ್ದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಜೆಡಿಎಸ್ ಮುಖಂಡರು ಹರಿಹಾಯ್ದಿದ್ದಾರೆ.
ಶಾಸಕ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮತ್ತು ಮಾಜಿ ಸದಸ್ಯ ಟಿ.ಎ. ಶರವಣ ಅವರು ಭಾನುವಾರ ಸಚಿವರ ವಿರುದ್ಧ ಸರಣಿಯೋಪಾದಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇಕಡ 80ರಷ್ಟು ಮಂದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಕ್ಷೇತ್ರ ಕೈತಪ್ಪುತ್ತಿರುವುದನ್ನು ನೋಡಲಾಗದೇ ಯೋಗೇಶ್ವರ್ ಅವರಿಗೆ ಮತಿಭ್ರಮಣೆಯಾಗಿದೆ. ಅದಕ್ಕಾಗಿಯೇ ಈ ಉರಿ ಮಾತುಗಳನ್ನು ಆಡಿದ್ದಾರೆ’ ಎಂದು ಸಾ.ರಾ.ಮಹೇಶ್ ಟ್ವಿಟರ್‌ನಲ್ಲಿ ತಿರುಗೇಟು ನೀಡಿದ್ದಾರೆ.
‘ಸರ್ವ ಪಕ್ಷ ಸದಸ್ಯರಾಗಿರುವ ಯೋಗೇಶ್ವರ್ ಅವರಿಗೆ ಹುಟ್ಟೂರು ಚಕ್ಕೆರೆಯಲ್ಲೇ ಮರ್ಯಾದೆ ಇಲ್ಲ. ಅವರ ಮಾತಿಗೆ ನಾಲ್ಕಾಣೆ ಬೆಲೆಯೂ ಅಲ್ಲಿ ಇಲ್ಲ. ಚಕ್ಕೆರೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲೂ ಜೆಡಿಎಸ್ ಬೆಂಬಲಿತರೇ ಗೆದ್ದಿರುವುದು ಇದಕ್ಕೆ ಸಾಕ್ಷಿ. ಹುಟ್ಟೂರಿನಲ್ಲೇ ಗೆಲ್ಲದ ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವೆ? ಸಿ.ಡಿಯಿಂದಲೋ ಅಥವಾ ಫೋಟೊ ಕಾರಣದಿಂದಲೂ ಬಿಜೆಪಿ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಮತ್ತು ಸಚಿವ ಪದವಿ ಎರಡನ್ನೂ ಕೊಟ್ಟಿದೆ. ಅದನ್ನು ಅಚ್ಚುಕಟ್ಟಾಗಿ ಮಾಡಲಿ’ ಎಂದು ಟ್ವೀಟ್ ಮಾಡಿದ್ದಾರೆ.
ಮರ್ಕಟ ಮನಸ್ಥಿತಿ: ‘ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ನೆಗೆಯುವ ಯೋಗೇಶ್ವರ್ ಮರ್ಕಟ ಮನಸ್ಥಿತಿಯ ರಾಜಕಾರಣಿ. ಕುಮಾರಸ್ವಾಮಿ ಅವರನ್ನು ಹಣಿಯಲು ಯೋಗೇಶ್ವರ್ ಅವರು ಡಿ.ಕೆ. ಶಿವಕುಮಾರ್ ಅವರ ಪಾದ ನೆಕ್ಕಿದ್ದನ್ನು ನಾವು ನೋಡಿಲ್ಲವೆ? ಕುಮಾರಸ್ವಾಮಿ ಜೋಕರ್ ಅಲ್ಲ, ರಾಜಕೀಯದ ಮದಗಜ. ಅವರನ್ನು ನಿಂದಿಸಿ ರಾಜಕೀಯವಾಗಿ ಬೆಳೆಯುತ್ತೇನೆ ಎಂಬುದು ಮೂರ್ಖತನ’ ಎಂದು ಭೋಜೇಗೌಡ ಟ್ವೀಟ್ ಮಾಡಿದ್ದಾರೆ.
‘ಯೋಗೇಶ್ವರ್ ಅವರೇ ಸಿ.ಡಿ, ಫೋಟೊಗಳ ಬಗ್ಗೆ ಹುಷಾರಾಗಿರಿ. ನಿಮ್ಮ ಮಾತು ನಿಮ್ಮ ಮನೆಯವರನ್ನೇ ಬೀದಿಗೆ ತಂದುಬಿಟ್ಟೀತು. ಡ್ರಗ್ಸ್ ದಂಧೆಯಲ್ಲಿ ಜೈಲು ಸೇರಿದವರ ಪಲ್ಲಂಗದಲ್ಲಿ ಪಂದ್ಯವಾಡಿದ ನಿಮ್ಮವರ ಫೋಟೊ, ವಿಡಿಯೊಗಳು ನಿಮ್ಮನ್ನು ಬಟಾಬಯಲು ಮಾಡಲಿವೆ. ಗಾಜಿನ ಮನೆಯಲ್ಲಿ ನಿಂತು ಕಲ್ಲೆಸೆಯಬೇಡಿ, ಬಾಯಿ ಚಪಲಕ್ಕೆ ಮಾತನಾಡಬೇಡಿ’ ಎಂದು ಎಚ್ಚರಿಸಿದ್ದಾರೆ.
‘ಯೋಗೇಶ್ವರ್ ಒಬ್ಬ ಸುಳ್ಳುಕೋರ. ಮಂಗನಂತೆ ಚಂಚಲ ಮನಸ್ಸಿನ ವ್ಯಕ್ತಿ. ಮೆಗಾಸಿಟಿ ಹಗರಣದಲ್ಲಿ ಅವರಿಂದ ವಂಚನೆಗೊಳಗಾದವರು ನೊಂದು, ಆತ್ಮಹತ್ಯೆ ಮಾಡಿಕೊಂಡವರನ್ನೇ ಅವರು ಮರೆಯುತ್ತಾರೆ. ಎಲ್ಲ ಪಕ್ಷಗಳನ್ನೂ ಸುತ್ತಿಬಂದು, ಈಗ ಬಿಜೆಪಿಯಲ್ಲಿ ಕುಳಿತು ಸಿದ್ಧಾಂತದ ಮಾತನಾಡುತ್ತಿದ್ದಾರೆ’ ಎಂದು ಶರವಣ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.