ಬೆಂಗಳೂರು: ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಇನ್ನೂ ಕಾರ್ಯಕರ್ತರಿಗೆ ಅಧಿಕಾರ ನೀಡದಿರುವ ಬಗ್ಗೆ ಭಾನುವಾರ ನಡೆದ ಜೆಡಿಎಸ್ ಸಭೆಯಲ್ಲಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ, ಗದ್ದಲ ನಡೆಸಿದ್ದಾರೆ.
ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಬೆಂಗಳೂರು ನಗರ ಘಟಕದ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ, ಗದ್ದಲಕ್ಕೆ ಮುಂದಾದರು. ‘ಪಕ್ಷ ಸಂಘಟಿಸಬೇಕು ಎನ್ನುತ್ತೀರಿ, ಆದರೆ ಕಾರ್ಯಕರ್ತರಿಗೆ ಇನ್ನೂ ಅಧಿಕಾರ ಕೊಟ್ಟಿಲ್ಲ. ನಿಗಮ– ಮಂಡಳಿಗಳಿಗೆ ಶಾಸಕರನ್ನು ಮಾತ್ರ ನೇಮಕ ಮಾಡಲಾಗುತ್ತಿದ್ದು, ನಮ್ಮನ್ನು ನಿರ್ಲಕ್ಷ್ಯಿಸಲಾಗುತ್ತಿದೆ. ತಕ್ಷಣವೇ ಕಾರ್ಯಕರ್ತರನ್ನು ನಿಗಮಗಳಿಗೆ ನೇಮಕ ಮಾಡುವ ಮೂಲಕ ಅಧಿಕಾರ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
ನಂತರ ಶಾಸಕ ಕೆ.ಗೋಪಾಲಯ್ಯ ಅವರು ಕಾರ್ಯಕರ್ತರನ್ನು ಸಮಾಧಾನಪಡಿಸಿ, ಸಭೆಯಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಶೀಘ್ರದಲ್ಲೇ ನಿಗಮ– ಮಂಡಳಿಗಳಿಗೆ ನೇಮಕ ಮಾಡಲು ಕ್ರಮ ಕೈಗೊಳ್ಳುವುದಾಗಿ ಮುಖಂಡರು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಿಂದ ಹೊರಬರುತ್ತಿದ್ದಂತೆ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಅವರನ್ನು ಅಡ್ಡಗಟ್ಟಿ, ಆಕ್ರೊಶ ಹೊರಹಾಕಿದ್ದಾರೆ. ಪಕ್ಷಕ್ಕಾಗಿ ದುಡಿಯುವವರಿಗೆ ಅವಕಾಶ ನೀಡಬೇಕು.
ಆರ್ಯ ವೈಶ್ಯ ಅಭಿವೃದ್ಧಿ ಮಂಡಳಿಗೆ ಪಕ್ಷದ ಕಾರ್ಯಕರ್ತರು ಅಲ್ಲದವರನ್ನು ನೇಮಕ ಮಾಡಲಾಗಿದೆ. ನೇಮಕಗೊಂಡವರು ಕಾಂಗ್ರೆಸ್ ಕಾರ್ಯಕರ್ತರೂ ಅಲ್ಲ, ಜೆಡಿಎಸ್‌ಗೂ ಸೇರಿಲ್ಲ. ಪಕ್ಷದ ಹೊರಗಿನವರಿಗೆ ಅವಕಾಶ ನೀಡಲಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಪಾದಯಾತ್ರೆ: ‘ಪಕ್ಷ ಸಂಘಟನೆಗಾಗಿ ಆಗಸ್ಟ್ 20ರಿಂದ ಪಾದಯಾತ್ರೆ ಆರಂಭವಾಗಲಿದೆ. ಇದರಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ಕಿಂಚಿತ್ತೂ ತೊಂದರೆ, ಅಡ್ಡಿಯಾಗದಂತೆ ನಾನೇ ಮುಂದೆ ನಿಂತು ಮುನ್ನಡೆಸುತ್ತೇನೆ’ ಎಂದು ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಅನುಮತಿ ಪಡೆದು ಹೋಗಬೇಕೆ?
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅನುಮತಿ ಪಡೆದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಮೆರಿಕ ಪ್ರವಾಸ ಹೋಗಬೇಕೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.
ವಿದೇಶ ಪ್ರವಾಸ ಟೀಕಿಸಿದ ಬಿಜೆಪಿ ನಾಯಕರ ವಿರುದ್ಧ ಗುಡುಗಿದರು. ಕುಮಾರಸ್ವಾಮಿ ಯಾರ ದುಡ್ಡಿನಲ್ಲೂ ಪ್ರವಾಸ ಕೈಗೊಂಡಿಲ್ಲ. ನಮ್ಮ ಸಮುದಾಯದ ಕಾರ್ಯಕ್ರಮಕ್ಕೂ ಹೋಗುವುದು ತಪ್ಪೆ? ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.