ರಾಮನಗರ: ಹಾರೋಹಳ್ಳಿ ಹೋಬಳಿಯ ಕೊಳ್ಳಿಗನಹಳ್ಳಿ ಹಾಗೂ ಜಕ್ಕಸಂದ್ರದಲ್ಲಿ ಬುಧವಾರ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಬಂದವರಿಗೆ ಹಣ ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದರ ವಿಡಿಯೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ದೇವೇಗೌಡರು ಈ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ್ದು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಹೀಗೆ ಬಂದವರಿಗೆ ತಲಾ ₹150–200 ಹಂಚಿಕೆ ಮಾಡಲಾಯಿತು ಎಂದು ಆರೋಪಿಸಲಾಗಿದೆ. ಜೆಡಿಎಸ್–ಕಾಂಗ್ರೆಸ್ ಶಾಲು ಹಾಕಿಕೊಂಡು ಜನರಿಗೆ ಹಣ ನೀಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಂಡಿವೆ. ಆದರೆ ಈ ಆರೋಪವನ್ನು ಸ್ಥಳೀಯ ಜೆಡಿಎಸ್ ಮುಖಂಡರು ನಿರಾಕರಿಸಿದ್ದು, ‘ಎಲ್ಲಿಯೂ ಹಣ ಹಂಚಿಕೆ ಮಾಡಲಾಗಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಮತ್ತೊಂದು ವಿಡಿಯೊ: ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷ ಮಂಗಳವಾರ ರಾಮನಗರದಲ್ಲಿ ಅನಿತಾ ಪರ ಪ್ರಚಾರ ಮಾಡುತ್ತಿದ್ದರು. ಈ ಸಂದರ್ಭ ಟಿಪ್ಪುನಗರದಲ್ಲಿನ ಮಸೀದಿಗೆ ಭೇಟಿ ನೀಡಿದ್ದು, ಅಲ್ಲಿನ ಮುಖಂಡರಿಗೆ ₹2 ಲಕ್ಷ ನೀಡಿದ್ದಾರೆ ಎನ್ನಲಾದ ವಿಡಿಯೊ ಬಹಿರಂಗವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.