ADVERTISEMENT

‘ಯಶಸ್ವಿನಿ’ ಯೋಜನೆ ಹಾಳು ಮಾಡಿದ್ದೇ ರಮೇಶ್‌ಕುಮಾರ್‌: ಎಚ್‌. ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 14:37 IST
Last Updated 9 ಫೆಬ್ರುವರಿ 2019, 14:37 IST
ಎಚ್‌.ವಿಶ್ವನಾಥ್‌
ಎಚ್‌.ವಿಶ್ವನಾಥ್‌   

ಚಿತ್ರದುರ್ಗ: ಜನೋಪಯೋಗಿ ಯಶಸ್ವಿನಿ ಯೋಜನೆ ಸಿದ್ದರಾಮಯ್ಯ ಅವರ ಆಡಳಿತದ ಅವಧಿಯಲ್ಲಿಯೇ ಸ್ಥಗಿತಗೊಂಡಿದೆ. ಈ ಯೋಜನೆ ಹಾಳು ಮಾಡಿದ ಕೀರ್ತಿ ಆರೋಗ್ಯ ಸಚಿವರಾಗಿದ್ದ ಕೆ.ಆರ್‌.ರಮೇಶ್‌ಕುಮಾರ್‌ ಅವರಿಗೆ ಸಲ್ಲುತ್ತದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಮಿತ್ರ ಪಕ್ಷವನ್ನು ಕುಟುಕಿದರು.

ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ನಡೆಯುತ್ತಿರುವ ‘ವಾಲ್ಮೀಕಿ ಜಾತ್ರೆ’ಗೆ ಬಂದಿದ್ದ ಅವರು ಮಾರ್ಗ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಯಶಸ್ವಿನಿ ಯೋಜನೆಗೆ ಮರುಚಾಲನೆ ನೀಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ಸುಕರಾಗಿದ್ದರು. ಬಹಿರಂಗವಾಗಿ ಘೋಷಣೆ ಕೂಡ ಮಾಡಿದ್ದರು. ಆದರೆ, ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರನ್ನು ಎದುರಿಸಲು ಸಾಧ್ಯವಾಗದೇ ಈ ಪ್ರಕ್ರಿಯೆ ಕೈಬಿಟ್ಟಿರುವ ಸಾಧ್ಯತೆ ಇದೆ’ ಎಂದರು.

ADVERTISEMENT

‘ರಾಜ್ಯ ಸರ್ಕಾರದ ಸಾಲದ ಹೊರೆ ₹ 3 ಲಕ್ಷ ಕೋಟಿ ದಾಟುತ್ತಿರುವುದು ಆತಂಕಕಾರಿ ಬೆಳವಣಿಗೆ. ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಲದ ಹೊರೆ ಹೆಚ್ಚಾಗತೊಡಗಿತು. ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಹಾಗೂ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ಗಣನೀಯವಾಗಿ ಏರಿಕೆ ಕಂಡಿತು’ ಎಂದು ಆರೋಪಿಸಿದರು.

‘ಯಡಿಯೂರಪ್ಪ ಅವರ ಬಗ್ಗೆ ಬಿಡುಗಡೆ ಮಾಡಿದ ಆಡಿಯೊದ ಸತ್ಯಾಸತ್ಯತೆ ಪರಿಶೀಲನೆ ಆಗಬೇಕಿದೆ. ಬಿಜೆಪಿ ಎಷ್ಟೇ ಪ್ರಯತ್ನಿಸಿದರೂ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸುತ್ತದೆ. ಸರ್ಕಾರದ ಸಮನ್ವಯ ಸಮಿತಿಗೆ ದಿನೇಶ್‌ ಗುಂಡೂರಾವ್‌ ಹಾಗೂ ನನ್ನನ್ನು ಸೇರಿಸಬೇಕು. ಸಿದ್ದರಾಮಯ್ಯ ಅವರ ಹಠಮಾರಿ ಧೋರಣೆಯಿಂದ ಇದು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.