ADVERTISEMENT

ಭಾರತ ಜೋಡೊ ಸಮಾರೋಪಕ್ಕೆ ಕರೆದರೂ ಹೋಗುವ ಸ್ಥಿತಿಯಲ್ಲಿ ನಾವಿಲ್ಲ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 4:41 IST
Last Updated 14 ಜನವರಿ 2023, 4:41 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ    

ಕಲಬುರಗಿ: ಭಾರತ್ ಜೋಡೊ ಸಮಾರೋಪ ಸಮಾರಂಭಕ್ಕೆ ಕರೆದರೂ ನಾವು ಹೋಗುವ ಪರಿಸ್ಥಿತಿಯಲ್ಲಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಪಂಚರತ್ನ ಯಾತ್ರೆ ಪ್ರಯುಕ್ತ ಕಲಬುರಗಿ ನಗರದ ಜಗತ್ ವೃತ್ತದಿಂದ ಸರ್ದಾರ್ ಪಟೇಲ್ ವೃತ್ತದವರೆಗೆ ಶುಕ್ರವಾರ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ ಅವರು, ಹೀಗೆ ಹೇಳಿದರು.

ADVERTISEMENT

‘ಭಾರತ್ ಜೋಡೊ ಸಮಾರೋಪ ಸಮಾರಂಭಕ್ಕೆ ನನಗೆ ಯಾವುದೇ ಆಹ್ವಾನ ಬಂದಿಲ್ಲ. ನಾನು ಜನರ ಕಷ್ಟ–ಸುಖ ನೋಡಬೇಕು. ನಮಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳಿವೆ. ಕರೆದರೂ ನಾವು ಹೋಗುವ ಪರಿಸ್ಥಿತಿಯಲ್ಲಿಲ್ಲ’ ಎಂದರು.

ಜಮ್ಮು–ಕಾಶ್ಮೀರದ ಶ್ರೀನಗರದಲ್ಲಿ ಜ. 30ರಂದು ನಡೆಯಲಿರುವ ‘ಭಾರತ್ ಜೋಡೊ’ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನೇತೃತ್ವದ ಜೆಡಿಎಸ್‌ಗೆ ಕಾಂಗ್ರೆಸ್‌ ಆಹ್ವಾನ ನೀಡಿದೆ.

ಜೆಡಿಎಸ್‌ಗೆ ನೀಡಿದ ಆಹ್ವಾನ ದಿಂದಾಗಿ ‘ಭಾರತ್ ಜೋಡೊ’ದ ಸಮಾರೋಪದಲ್ಲಿ ಒಟ್ಟು 23 ಸಮಾನ ಮನಸ್ಕ ಪಕ್ಷಗಳ ನಾಯಕರಿಗೆ ಆಹ್ವಾನ ದೊರೆತಂತಾಗಿದೆ.

ರಾಹುಲ್ ಪತ್ರ

‘ವಿಭಜಕ ಶಕ್ತಿಗಳು ವೈವಿಧ್ಯತೆಯನ್ನು ನಮ್ಮ ವಿರುದ್ಧ ತಿರುಗಿಸಲು ಯತ್ನಿಸುತ್ತಿವೆ. ಆದರೆ, ಭಾರತವು ದ್ವೇಷವನ್ನು ತಿರಸ್ಕರಿಸುತ್ತದೆ. ಇನ್ನು ಮುಂದೆ ಕೆಟ್ಟ ಅಜೆಂಡಾ ಮುಂದುವರಿಯಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

‘ಭಾರತ್ ಜೋಡೊ’ ಯಾತ್ರೆಯ ಮುಂದುವರಿದ ಭಾಗವಾಗಿರುವ ಪಕ್ಷದ ಮುಂಬರುವ ‘ಹಾಥ್ ಸೆ ಹಾಥ್ ಜೋಡೊ’ ಅಭಿಯಾನದ ಅಂಗವಾಗಿ ಜನರನ್ನು ಉದ್ದೇಶಿಸಿ ಪತ್ರ ಬರೆದಿರುವ ರಾಹುಲ್, ‘ಇಂದು ನಮ್ಮ ಬಹುತ್ವಕ್ಕೂ ಅಪಾಯವಿದೆ. ವಿಭಜಕ ಶಕ್ತಿಗಳು ನಮ್ಮ ವೈವಿಧ್ಯತೆಯನ್ನು ನಮ್ಮ ವಿರುದ್ಧ ತಿರುಗಿಸಲು ಪ್ರಯತ್ನಿಸುತ್ತಿವೆ. ಯಾತ್ರೆಯ ನಂತರ, ಈ ಕೆಟ್ಟ ಅಜೆಂಡಾವು ತನ್ನ ಮಿತಿಗಳನ್ನು ಹೊಂದಿದೆ ಎಂಬುದು ನನಗೆ ಮನವರಿಕೆಯಾಗಿದೆ. ಇದು ಇನ್ನು ಮುಂದೆ ಮುಂದುವರಿಯಲು ಸಾಧ್ಯವಿಲ್ಲ’ ಎಂದಿದ್ದಾರೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.