ADVERTISEMENT

ಜೆಇಇ: ಬೆಂಗಳೂರಿನ ಮೂವರು ಮೊದಲಿಗರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:26 IST
Last Updated 25 ಏಪ್ರಿಲ್ 2024, 15:26 IST
   

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ ಮುಖ್ಯ–2) ಬೆಂಗಳೂರಿನ ಮೂವರು ವಿದ್ಯಾರ್ಥಿಗಳಾದ ಅಮೋಘ್ ಅಗರ್‌ವಾಲ್‌, ಸಾನ್ವಿ ಜೈನ್‌, ಸಾಯಿ ನವನೀತ್‌ ಮುಕುಂದ್‌ 100 ಪರ್ಸೆಂಟೈಲ್‌ ಗಳಿಸುವ ಮೂಲಕ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ನ ನಾರಾಯಣ-ಕೋ-ಕಾವೇರಿ ಭವನ ಕಾಲೇಜಿನ ವಿದ್ಯಾರ್ಥಿಯಾದ ಅಮೋಘ್ ಅಗರ್‌ವಾಲ್‌ ಮೊದಲ ಮುಖ್ಯ ಪರೀಕ್ಷೆಯಲ್ಲೂ ಶೇ 100 ಪರ್ಸೆಂಟೈಲ್‌ ಗಳಿಸುವ ಮೂಲಕ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದರು. ಎರಡನೇ ಪ್ರಯತ್ನದಲ್ಲೂ ಸಾಧನೆ ಸರಿಗಟ್ಟಿದ್ದಾರೆ.

ಈ ಮೂವರು ಅಂಕಗಳನ್ನು ಸುಧಾರಿಸಲು ಜೆಇಎನಲ್ಲಿ ಎರಡನೇ ಪ್ರಯತ್ನ ನಡೆಸಿದ್ದರು. ರಾಷ್ಟ್ರೀಯ ಮಟ್ಟದಲ್ಲಿ 100 ಪರ್ಸೆಂಟೈಲ್‌ ಗಳಿಸಿದ ಇಬ್ಬರು ವಿದ್ಯಾರ್ಥಿನಿಯರಲ್ಲಿ ಸಾನ್ವಿ ಸಹ ಒಬ್ಬರು. ಪ್ರಸ್ತುತ ಮೇ 5ರಂದು ನಡೆಯಲಿರುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ (ನೀಟ್‌) ಮತ್ತು ಜೆಇಇ ಮುಂದುವರಿದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.

ADVERTISEMENT

ಸಾಯಿ ನವನೀತ್‌ ಮುಕುಂದ್‌ ವಾಗ್ದೇವಿ ವಿಲಾಸ್‌ ಶಾಲೆ ವಿದ್ಯಾರ್ಥಿ. ಜಯನಗರದ ಅಲೆನ್‌ ಶಾಖೆಯಲ್ಲಿ ತರಬೇತಿ ಪಡೆದಿದ್ದರು. ಮೊದಲ ಪ್ರಯತ್ನದಲ್ಲಿ 99.98 ಪರ್ಸೆಂಟೈಲ್‌ ಗಳಿಸಿದ್ದರು. ಸಾಯಿ ನವನೀತ್ ಮುಕುಂದ್, ಐಐಟಿ ಬಾಂಬೆಗೆ ಸೇರುವ ಗುರಿ ಇಟ್ಟುಕೊಂಡಿದ್ದಾರೆ.

‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜೀಸ್‌ (ಐಐಟಿ) ಸೇರುವ ಗುರಿ ಹೊಂದಿದ್ದು, ಪ್ರಸ್ತುತ ಜೆಇಇ ಅಡ್ವಾನ್ಸ್‌ಗೆ ಸಿದ್ಧತೆ ನಡೆಸಿದ್ದೇನೆ. ಅಣಕು ಪರೀಕ್ಷೆಗಳ ಮೇಲೆ ಹೆಚ್ಚು ಗಮನ ಹರಿಸಿದ್ದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಹಕಾರಿಯಾಯಿತು. ಭವಿಷ್ಯದಲ್ಲಿ ಉದ್ಯಮಿಯಾಗುವ ಕನಸಿದೆ’ ಎಂದು ಅಮೋಘ್‌ ಪ್ರತಿಕ್ರಿಯಿಸಿದರು.

ಈ ವರ್ಷ ಇಬ್ಬರು ವಿದ್ಯಾರ್ಥಿನಿಯರೂ ಸೇರಿದಂತೆ ಒಟ್ಟು 56 ಅಭ್ಯರ್ಥಿಗಳು ರಾಷ್ಟ್ರಮಟ್ಟದಲ್ಲಿ 100 ಪರ್ಸೆಂಟೈಲ್‌ ಗಳಿಸಿದ್ದಾರೆ. ಜೆಇಇ–ಮೇನ್‌ ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ನಡೆಸಲಾಗಿತ್ತು. ವಿದೇಶಗಳಲ್ಲಿ ಸಹ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು 10 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.