ರಾಮನಗರ: ಕನಕಪುರ ತಾಲ್ಲೂಕಿನ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಬೆಟ್ಟಕ್ಕೆ ಪೊಲೀಸ್ ಕಾವಲು ಹಾಕಲಾಗಿದೆ.
ವಿವಾದ ಸಂಬಂಧ ಜಿಲ್ಲಾಡಳಿತದಿಂದ ವರದಿ ಸಲ್ಲಿಕೆ ಆಗುವ ಮುನ್ನವೇ ಕನಕಪುರ ತಹಶೀಲ್ದಾರ್ ಆನಂದಯ್ಯ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಯಳಂದೂರು ತಹಶೀಲ್ದಾರ್ ವರ್ಷಾ ಅವರನ್ನು ಕನಕಪುರ ತಹಶೀಲ್ದಾರ್ ಆಗಿ ವರ್ಗಾಯಿಸಿ ಸೋಮವಾರ ರಾತ್ರಿ ಸರ್ಕಾರ ಆದೇಶ ನೀಡಿದೆ. ಆನಂದಯ್ಯಗೆ ಜಾಗ ತೋರಿಸಿಲ್ಲ. ವರ್ಷಾ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡಿಲ್ಲ. ಆನಂದಯ್ಯ ಸಹ ಕಚೇರಿಗೆ ಬಂದಿಲ್ಲ.
ರಾಜ್ಯ ಸರ್ಕಾರದ ಸೂಚನೆ ಮೇರೆಗೆಕಳೆದ ವಾರ ಆನಂದಯ್ಯ, ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ ಜತೆಗೆ ಬೆಟ್ಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದರು. ಇನ್ನು ಕೆಲವು ದಿನಗಳಲ್ಲಿ ವರದಿ ಸಲ್ಲಿಕೆ ಆಗಬೇಕಿತ್ತು. ಈ ನಡುವೆ ತಹಶೀಲ್ದಾರ್ ವರ್ಗಾವಣೆ ಮಾಡಲಾಗಿದೆ.
ಆನಂದಯ್ಯ, ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಆಪ್ತರು ಎನ್ನುವ ಕಾರಣಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬ ಆರೋಪಗಳು ಕೇಳಿ ಬಂದಿವೆ. ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ಸೇರಿದಂತೆ ಹಲವರು ಆನಂದಯ್ಯ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಅಧಿಕಾರಿಗಳ ಸ್ಥಳ ಪರಿಶೀಲನೆ ಬಳಿಕ ಯೇಸು ಪ್ರತಿಮೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಕಲ್ಲುಗಳ ಕೆತ್ತನೆ ಕಾರ್ಯ ಇಲ್ಲಿ ನಡೆದಿದ್ದು, ನಾಲ್ಕಾರು ಕಾರ್ಮಿಕರು ಈ ಕಾರ್ಯದಲ್ಲಿ ನಿರತರಾಗಿದ್ದರು. ಅವರೆಲ್ಲ ಸ್ಥಳ ಬಿಟ್ಟು ತೆರಳಿದ್ದಾರೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.