ಬೆಂಗಳೂರು: ‘ಕಾಟೇರ’ ಸಿನಿಮಾ ಯಶಸ್ಸು ಸಂಭ್ರಮಿಸಲು ನಟ ದರ್ಶನ್ ಮತ್ತು ಇತರೆ ಸಿನಿಮಾ ತಾರೆಯರು ನಿಯಮ ಮೀರಿ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದರು ಎಂದು ಆರೋಪಿಸಲಾಗಿರುವ ಜೆಟ್‌ಲ್ಯಾಗ್ ಪಬ್‌ನ ಪರವಾನಗಿಯನ್ನು 25 ದಿನಗಳ ಕಾಲ ರದ್ದು ಮಾಡಿ ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜೆಟ್‌ಲ್ಯಾಗ್ ಪಬ್, ಅಬಕಾರಿ ನಿಯಮ ಮೀರಿರುವ ಕಾರಣ, ಮುಂದಿನ 25 ದಿನಗಳ ಕಾಲ ಮದ್ಯ ಮಾರಾಟ ಮಾಡುವಂತಿಲ್ಲ.
ಜೆಟ್‌ಲ್ಯಾಗ್ ಪಬ್ನಲ್ಲಿ ಅಬಕಾರಿ ನಿಯಮ ಉಲ್ಲಂಘಿಸಿರುವ ಬಗ್ಗೆ ಎಫ್ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿತ್ತು. ಮೊದಲ ಬಾರಿ ಜೆಟ್‌ಲ್ಯಾಗ್ ವಿರುದ್ಧ ದೂರು ಬಂದಿರುವ ಕಾರಣ 25 ದಿನಗಳ ಕಾಲ ಪರವಾನಗಿ ರದ್ದು ಮಾಡಲಾಗಿದೆ. ಮೂರು ಬಾರಿ ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು ಮಾಡಲಾಗುತ್ತದೆ.
‘ಜೆಟ್‌ಲ್ಯಾಗ್ ಪಬ್’ನಲ್ಲಿ ಜ. 3ರಂದು ಮುಂಜಾನೆವರೆಗೂ ಪಾರ್ಟಿ ಆಯೋಜಿಸಿದ್ದ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಚಿತ್ರರಂಗದ ಎಂಟು ಮಂದಿ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಶುಕ್ರವಾರ ವಿಚಾರಣೆಗೆ ಹಾಜರಾಗಿ, ನೋಟಿಸ್‌ಗೆ ಉತ್ತರಿಸಿದ್ದರು. ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ನಟರಾದ ‘ನೀನಾಸಂ’ ಸತೀಶ್, ಡಾಲಿ ಧನಂಜಯ್, ಚಿಕ್ಕಣ್ಣ, ಅಭಿಷೇಕ್ ಅಂಬರೀಷ್ ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ವಿಚಾರಣೆಗೆ ಹಾಜರಾಗಿದ್ದರು.
ಮುಂಜಾನೆಯವರೆಗೆ ಮದ್ಯ ಪೂರೈಸಿದ ಆರೋಪದ ಮೇರೆಗೆ ಪಬ್ ಮಾಲೀಕರಾದ ಶಶಿರೇಖಾ ಜಗದೀಶ್ ಹಾಗೂ ವ್ಯವಸ್ಥಾಪಕ ವ್ಯವಸ್ಥಾಪಕ ಪ್ರಶಾಂತ್ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.