ಬಳ್ಳಾರಿ: ಪ್ರಸ್ತುತ ಲೀಸ್ ಕಂ ಸೇಲ್ ಒಪ್ಪಂದದ ಮೇರೆಗೆ ಜಿಂದಾಲ್ ವಶದಲ್ಲಿರುವ 3,667.25 ಎಕರೆ ಭೂಮಿಯನ್ನು ಪ್ರತ್ಯೇಕವಾಗಿ ಗುರುತಿಸಲು ಆಗದ ರೀತಿಯಲ್ಲಿ ಅದು ಜಿಂದಾಲ್ ಉಕ್ಕು ಸಂಸ್ಥೆಯ ವಿಶಾಲವಾದ ಪ್ರದೇಶದಲ್ಲಿ ಸೇರಿ ಹೋಗಿದೆ.
ಅಲ್ಲಿ ಹಲವು ಕಟ್ಟಡಗಳು ಎದ್ದು ನಿಂತು ಹಲವು ವರ್ಷಗಳಾಗಿವೆ. ಸ್ವತಃ ಆ ಸಂಸ್ಥೆಗೂ ನಿರ್ದಿಷ್ಟವಾಗಿ ಭೂಮಿಯನ್ನು ಗುರುತಿಸಲು ಆಗದ ಪರಿಸ್ಥಿತಿ ಇದೆ.
ಸರ್ಕಾರವು ಜಿಂದಾಲ್‌ಗೆ ಒಟ್ಟು ನಾಲ್ಕು ಹಂತಗಳಲ್ಲಿ ಭೂಮಿ ನೀಡಿದ್ದು, ಕೊನೆಯ ಎರಡು ಹಂತಗಳಲ್ಲಿ ನೀಡಿದ ಭೂಮಿಯೇ ಈಗ ವಿವಾದಕ್ಕೆ ಗುರಿಯಾಗಿದೆ. ಸಂಡೂರು ತಾಲ್ಲೂಕಿನ ತೋರಣಗಲ್ಲು, ಕುರೇಕುಪ್ಪ, ಮುಸಿನಾಯಕನಹಳ್ಳಿ ಮತ್ತು ಯರಬನಹಳ್ಳಿಯ ಜಮೀನುಗಳನ್ನೇ ಜಿಂದಾಲ್‌ಗೆ ನೀಡಲಾಗಿದೆ.
23 ವರ್ಷಗಳ ಹಿಂದೆ (1996), ಜಿಲ್ಲೆಯಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪಿಸಲು ಅಂದಿನ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ ಸಂಸ್ಥೆಗೆ ಮೊದಲ ಹಂತದಲ್ಲಿ3,430.16 ಎಕರೆ ಜಾಗವನ್ನು ಗುತ್ತಿಗೆ ನೀಡಲಾಗಿತ್ತು. ಬಳಿಕ 2005ರಲ್ಲಿ ಅದನ್ನು ಜಿಂದಲ್‌ಗೆ ಮಾರಾಟ ಮಾಡಲಾಗಿತ್ತು.
ಕಾರ್ಖಾನೆ ವಿಸ್ತರಣೆಗೆಂದು 2004ರಲ್ಲಿ ಮತ್ತೆ 615 ಎಕರೆ ಜಾಗವನ್ನು ಗುತ್ತಿಗೆ ನೀಡಿ, 2010ರಲ್ಲಿ ಮಾರಾಟ ಮಾಡಲಾಗಿತ್ತು. ಈ ಅವಧಿಯಲ್ಲಿ ಸಂಸ್ಥೆಯ ಹೆಸರು ಜಿಂದಾಲ್ ಸೌತ್ ವೆಸ್ಟ್ ಐರನ್ ಅಂಡ್ ಸ್ಟೀಲ್ ಎಂದಾಗಿತ್ತು. ನಂತರ ಜೆಎಸ್‌ಡಬ್ಲ್ಯು ಸ್ಟೀಲ್ ಎಂದಾಯಿತು.
2006ರಲ್ಲಿ 6 ವರ್ಷಗಳ ಅವಧಿಗೆ ಮೂರನೇ ಹಂತದಲ್ಲಿ ಜಮೀನು ಗುತ್ತಿಗೆ ನೀಡಿದ ಬಳಿಕ, 2012ರಲ್ಲಿ ಒಪ್ಪಂದದ ಪ್ರಕಾರ ಜಮೀನು ಮಾರಾಟವಾಗಬೇಕಿತ್ತು. ಆಗಲಿಲ್ಲ. 2007ರಲ್ಲಿ 10 ವರ್ಷಗಳ ಅವಧಿಗೆ ಜಮೀನು ನೀಡಿದ ಬಳಿಕ, 2017ರಲ್ಲಿ ಜಮೀನು ಮಾರಾಟವಾಗಬೇಕಿತ್ತು. ಆದೂ ಆಗಿರಲಿಲ್ಲ. ಈಗಿನ ಸಮ್ಮಿಶ್ರ ಸರ್ಕಾರವು ಮೇ ತಿಂಗಳಲ್ಲಿ ಮಾರಾಟದ ತೀರ್ಮಾನ ಕೈಗೊಂಡ ಬಳಿಕ ವಿರೋಧ ವ್ಯಕ್ತವಾಗಿದೆ.
ಮೂರು ಮತ್ತು ನಾಲ್ಕನೇ ಹಂತದಲ್ಲಿ ಜಮೀನು ಗುತ್ತಿಗೆ ಕೊಟ್ಟು 13 ವರ್ಷ ಆಗಿದ್ದು, ಈ ಅವಧಿಯಲ್ಲಿ ಇಡೀ ಪ್ರದೇಶ ಕಾರ್ಖಾನೆಯಲ್ಲಿ ಲೀನವಾಗಿದೆ. ಜೆಎಸ್‌ಡಬ್ಲ್ಯು ಎನರ್ಜಿ, ಜೆಎಸ್‌ಡಬ್ಲ್ಯು ಸಿಮೆಂಟ್, ಜೆಎಸ್‌ಡಬ್ಲ್ಯು ಪೇಂಟ್ಸ್, ಜೆಎಸ್‌ಡಬ್ಲ್ಯು ಸಿವರ್ ಫೀಲ್ಡ್ ಸ್ಟ್ರಕ್ಚರ್ಸ್, ಜೆಎಸ್‌ಡಬ್ಲ್ಯು ಪ್ರಾಜೆಕ್ಟ್‌ನ ಭಾಗವಾಗಿ ಎದ್ದು ನಿಂತ ಕಾರ್ಖಾನೆಗಳು ಹಾಗೂ ಇತರೆ ಕಟ್ಟಡಗಳ ದೊಡ್ಡ ಲೋಕವೇ ಹರಡಿಕೊಂಡಿದೆ.
ಗುರುತಿಸಲು ಆಗಲ್ಲ:ವಿವಾದಿತ ಸ್ಥಳ ಹೇಗಿದೆ ಎಂಬ ಮಾಹಿತಿ ಪಡೆಯಲು ಸಂಸ್ಥೆಗೆ ಶನಿವಾರ ಭೇಟಿ ನೀಡಿದ ‘ಪ್ರಜಾವಾಣಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಮಂಜುನಾಥ ಪ್ರಭು, ‘ಈಗ ಆ ಜಾಗವನ್ನು ಗುರುತಿಸಲು ಆಗುವುದಿಲ್ಲ. ವಿಶಾಲವಾದ ಪ್ರದೇಶದಲ್ಲಿ ಹಲವು ಕಾರ್ಖಾನೆ ಕಟ್ಟಡಗಳು, ಸಂಶೋಧನೆ, ತರಬೇತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಘಟಕ ವಿಸ್ತರಣೆಗೆಂದು ಪಡೆದ ಜಮೀನನ್ನು ದಶಕಕ್ಕೂ ಹೆಚ್ಚು ಕಾಲ ಖಾಲಿ ಬಿಟ್ಟಿರಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
‘ಕಾರ್ಖಾನೆ ಆರಂಭವಾದಾಗ ವರ್ಷಕ್ಕೆ 12.5 ಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ ಇತ್ತು. ಈಗ 1.2 ಕೋಟಿ ಟನ್ ಉತ್ಪಾದಿಸುತ್ತಿದ್ದೇವೆ. 1.8 ಕೋಟಿ ಟನ್ ಉತ್ಪಾದಿಸುವ ಗುರಿ ಇದೆ. ದೇಶದಲ್ಲೇ ಅತ್ಯಧಿಕ ಉಕ್ಕು ಉತ್ಪಾದಿಸುವ ಘಟಕವಾಗುವುದು ಸುಲಭದ ಮಾತಲ್ಲ’ ಎಂದು ಪ್ರತಿಪಾದಿಸಿದರು.
ವಿವಾದದ ಹಿನ್ನೆಲೆಯ ರಾಜಕೀಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಜಮೀನು ಮಾರಾಟ ಮಾಡುವುದನ್ನು ವಿರೋಧಿಸುತ್ತಿರುವವರಿಗೆ ಇಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಿಲ್ಲ. ವಿವಿಧ ಇಲಾಖೆಗಳ ಪರಿಶೀಲನೆ ಬಳಿಕವೇ ಆಗಿರುವ ಲೀಸ್ ಕಂ ಸೇಲ್ ಒಪ್ಪಂದದ ನಿಯಮಗಳ ಅರಿವಿರುವವರು ಯಾರೂ ವಿರೋಧಿಸುವುದಿಲ್ಲ’ ಎಂದರು.
**
ಜಿಂದಾಲ್‌ನಂಥ ದೊಡ್ಡ ಸಂಸ್ಥೆಗೆ ಅಡ್ಡದಾರಿ ಹಿಡಿಯಬೇಕಾದ ಅಗತ್ಯವಿಲ್ಲ. ನಿಯಮಗಳ ಅನುಸಾರವೇ ಲೀಸ್ ಕಂ ಸೇಲ್ ಒಪ್ಪಂದ ಏರ್ಪಟ್ಟಿದೆ. ಸರ್ಕಾರ ಏನು ಮಾಡುತ್ತದೋ ಕಾದುನೋಡುತ್ತಿದ್ದೇವೆ.
–ಮಂಜುನಾಥ ಪ್ರಭು, ಉಪಾಧ್ಯಕ್ಷ, ಜೆಎಸ್‌ಡಬ್ಲ್ಯು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.