ಬೆಂಗಳೂರು: ಜೋಗ ಜಲಪಾತದ ಬಳಿಯ ಅರಣ್ಯ ಜಮೀನನ್ನು ಬಳಸಿಕೊಂಡು ಪಂಚತಾರಾ ಹೋಟೆಲ್ ನಿರ್ಮಿಸುವ ಯೋಜನೆಗೆ ಅರಣ್ಯ ಇಲಾಖೆಯ ಅನುಮತಿ ಕೋರಿರುವ ಪ್ರಸ್ತಾವವನ್ನು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮರು ಪರಿಶೀಲನೆಗಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ರವಾನಿಸಿದ್ದಾರೆ.
ಇನ್ನೊಂದೆಡೆ ಈ ಯೋಜನೆಗೆ ರಾಷ್ಟ್ರೀಯ ಮತ್ತು ರಾಜ್ಯ ವನ್ಯಜೀವಿ ಮಂಡಳಿಗಳ ಒಪ್ಪಿಗೆಯನ್ನೂ ಪಡೆಯುವಂತೆ ಸೂಚಿಸಲಾಗಿದೆ.
ಸಾಗರ ತಾಲ್ಲೂಕಿನ ನಡವಾಡ ತಲಕಳಲೆ ಗ್ರಾಮದ ಸರ್ವೆ ನಂಬರ್ 151ರಲ್ಲಿ 0.8536 ಹೆಕ್ಟೇರ್ ಅರಣ್ಯ ಜಮೀನನ್ನು ಬಳಸಿಕೊಂಡು ₹ 116 ಕೋಟಿ ವೆಚ್ಚದಲ್ಲಿ ಪಂಚತಾರಾ ಹೋಟೆಲ್ ಮತ್ತು ರೋಪ್ ವೇ ನಿರ್ಮಿಸುವ ಪ್ರಸ್ತಾವಕ್ಕೆ ಜನವರಿ 6ರಂದು ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಮತ್ತೆ ಪ್ರಯತ್ನ ಆರಂಭವಾಗಿರುವುದನ್ನು ಅರಿತಿದ್ದ ಪರಿಸರವಾದಿ ಗಿರಿಧರ್ ಕುಲಕರ್ಣಿ, ಕೇಂದ್ರ ಮತ್ತು ರಾಜ್ಯಗಳ ಪರಿಸರ ಮತ್ತು ಅರಣ್ಯ ಇಲಾಖೆಗಳಿಗೆ ತಕರಾರು ಸಲ್ಲಿಸಿದ್ದರು.
ಗಿರಿಧರ್ ಅವರ ದೂರನ್ನು ಆಧರಿಸಿ ರಾಜ್ಯದ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ಪಿಸಿಸಿಎಫ್) 2021ರ ಆಗಸ್ಟ್ 9ರಂದು ಪತ್ರ ಬರೆದಿದ್ದ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ, ಪರಿಸರ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆಗಳ ಅಡಿಯಲ್ಲಿ ನಿಯಮಾನುಸಾರ ಒಪ್ಪಿಗೆ ಪಡೆಯಲು ಪ್ರಸ್ತಾವಗಳನ್ನು ಸಲ್ಲಿಸುವಂತೆ ಸೂಚಿಸಿತ್ತು.
ಈ ಬೆಳವಣಿಗೆಯ ಬಳಿಕ ಅರಣ್ಯ ಜಮೀನನ್ನು ಅನ್ಯ ಉದ್ದೇಶಕ್ಕೆ ಬಳಸಲು ಅನುಮತಿ ಕೋರಿದ್ದ ಪ್ರಸ್ತಾವದ ಕುರಿತು ಮರು ಪರಿಶೀಲನೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೆಪ್ಟೆಂಬರ್ 24ರಂದು ಪಿಸಿಸಿಎಫ್‌ಗೆ ಪತ್ರ ಬರೆದಿದ್ದರು. 2021ರ ಅಕ್ಟೋಬರ್ 4ರಂದು ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿರುವ ಪಿಸಿಸಿಎಫ್, ಆಕ್ಷೇಪಣೆಯಲ್ಲಿರುವ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ವನ್ಯಜೀವಿ ಮಂಡಳಿ ಒಪ್ಪಿಗೆಯೂ ಬೇಕು: ‘ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ಗುರುತಿಸಿರುವ ಜಮೀನು ಜೋಗ ರಾಜ್ಯ ಅರಣ್ಯ ಪ್ರದೇಶದಲ್ಲಿದೆ. ಅದು ಶರಾವತಿ ಸಿಂಗಳೀಕ ವನ್ಯಧಾಮದ ಗಡಿಯಿಂದ 27 ಕಿ.ಮೀ. ದೂರದಲ್ಲಿದೆ. ಆದ್ದರಿಂದ ಈ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ರಾಜ್ಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಇಲ್ಲದೇ ಮುಂದುವರಿಯುವಂತಿಲ್ಲ’ ಎಂದು ಗಿರಿಧರ್ ರಾಜ್ಯದ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಪ್ರತ್ಯೇಕ ಆಕ್ಷೇಪಣೆ ಸಲ್ಲಿಸಿದ್ದರು.
ಈ ಆಕ್ಷೇಪಣೆಯನ್ನೂ ಪುರಸ್ಕರಿಸಿರುವ ಮುಖ್ಯ ವನ್ಯಜೀವಿ ಪರಿಪಾಲಕರು, ‘ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ರಾಜ್ಯ ವನ್ಯಜೀವಿ ಮಂಡಳಿಗಳ ಒಪ್ಪಿಗೆಯೂ ಅಗತ್ಯ. ಆದ್ದರಿಂದ ಎರಡೂ ಮಂಡಳಿಗಳ ಅನುಮೋದನೆ ಪಡೆಯಲು ಅರ್ಜಿ ಸಲ್ಲಿಸುವಂತೆ ಉಪಯೋಗಿ ಸಂಸ್ಥೆಗೆ (ಪ್ರವಾಸೋದ್ಯಮ ಇಲಾಖೆ) ಸೂಚಿಸಿ’ ಎಂದು 2021ರ ಅಕ್ಟೋಬರ್ 29ರಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಬರೆದ ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.