ADVERTISEMENT

ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ಸೇರಿದ್ದೇನೆ: ಸಿ.ಪಿ. ಯೋಗೇಶ್ವರ್

ಚನ್ನಪಟ್ಟಣ ಕ್ಷೇತ್ರದಿಂದ ಯೋಗೇಶ್ವರ್ ಕಣಕ್ಕೆ?

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 7:22 IST
Last Updated 23 ಅಕ್ಟೋಬರ್ 2024, 7:22 IST
<div class="paragraphs"><p>ಸಿ.ಪಿ. ಯೋಗೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್</p></div>

ಸಿ.ಪಿ. ಯೋಗೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

   

ಬೆಂಗಳೂರು: 'ಡಿ.ಕೆ. ಸುರೇಶ್ ಅವರು ನನ್ನನ್ನು ಕಾಂಗ್ರೆಸ್‌ಗೆ ಕರೆ ತರುವ ಪ್ರಯತ್ನ ನಡೆಸಿದ್ದರು. ನಾವೆಲ್ಲ ಬಹಳ ವರ್ಷದಿಂದ ಕಾಂಗ್ರೆಸ್‌ನಲ್ಲೇ ಇದ್ದವರು' ಎಂದು 'ಕೈ' ಹಿಡಿದ ಬಳಿಕ ಸಿ.ಪಿ. ಯೋಗೇಶ್ವರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, 'ನನ್ನ ರಾಜಕೀಯ ಜೀವನವನ್ನು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಆರಂಭಿಸಿದೆ. ಹಲವು ದಿನಗಳಿಂದ ರಾಜಕೀಯ ಬೆಳವಣಿಗೆಗಳನ್ನು ನೋಡಿದೆ. ನಾವು ಕಟ್ಟಿದ ಮನೆಯಲ್ಲಿ ನಾವು ವಾಸ ಮಾಡಲು ಆಗುವುದಿಲ್ಲ. ಜೆಡಿಎಸ್ ಜೊತೆ ಮೈತ್ರಿಯಾದ ಬಳಿಕ ನನ್ನ ಬೆಳವಣಿಗೆಗೆ ಪೂರಕವಾಗಿಲ್ಲ ಅಂದುಕೊಂಡೆ. ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ಸೇರಿದ್ದೇನೆ' ಎಂದರು.

ADVERTISEMENT

'ಡಿ.ಕೆ. ಶಿವಕುಮಾರ್ ಅವರನ್ನು ಮಂಗಳವಾರ ರಾತ್ರಿ ಭೇಟಿಯಾಗಿ ಚರ್ಚಿಸಿದೆ ಎಂಬುದೆಲ್ಲಾ ಸುಳ್ಳು. ಬೆಳಿಗ್ಗೆ ನೇರವಾಗಿ ಶಿವಕುಮಾರ್ ನಿವಾಸಕ್ಕೆ ತೆರಳಿದೆ. ನಂತರ ಮುಖ್ಯಮಂತ್ರಿ ನಿವಾಸಕ್ಕೂ ಹೋಗಿದ್ದೆ. ಆ ಮೂಲಕ, ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಬಂದಿದ್ದೇನೆ. ನಮ್ಮ ಜಿಲ್ಲೆಯನ್ನು (ರಾಮನಗರ) ಅಭಿವೃದ್ಧಿ ಮಾಡುವುದೇ ಉದ್ದೇಶ. ಡಿ.ಕೆ ಶಿವಕುಮಾರ್, ರಾಮಲಿಂಗಾ ರೆಡ್ಡಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ಪಾಲುದಾರನಾಗಬೇಕೆಂದು ಈ ನಿರ್ಧಾರ ಮಾಡಿದೆ' ಎಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಸಮರ್ಥನೆ ‌ನೀಡಿದರು.

'ಯಾವ ಪಕ್ಷದಲ್ಲಿ ಎಷ್ಟು ದಿವಸ ಇರುತ್ತಿನೊ ಅಷ್ಟು ದಿವಸ ನಿಷ್ಠೆಯಿಂದ ಕೆಲಸ ಮಾಡುತ್ತೇನೆ' ಎಂದು ಯೋಗೇಶ್ವರ್ ಹೇಳಿದಾಗ ಕಾಂಗ್ರೆಸ್ ನಾಯಕರ ಮುಖದಲ್ಲಿ ನಗು ಕಾಣಿಸಿತು.

ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, 'ಯೋಗೇಶ್ವರ್ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್‌ ಮೇಲೆ ಒಳ್ಳೆಯ ಅಭಿಪ್ರಾಯ ಇದೆ. ಚುನಾವಣೆ ಗೆಲ್ಲಲು ಅನಕೂಲವಾಗುತ್ತದೆ' ಎಂದರು.

ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, 'ಇವತ್ತು ಬಹಳ ಸಂತೋಷ ಆಗಿದೆ. ಯೋಗೇಶ್ವರ್ ಮೊದಲು ಕಾಂಗ್ರೆಸ್‌ನಲ್ಲಿ ಇದ್ದರು. ಅವರ ಸೇರ್ಪಡೆಯಿಂದ ಆನೆ ಬಲ ಬಂದಿದೆ. ಕಾರ್ಯಕರ್ತರು ಕೂಡ ಇದನ್ನು ಬಯಸುತ್ತಾ ಇದ್ದರು ಎಂದರು.

ಇಂದೇ ಅಭ್ಯರ್ಥಿ ಘೋಷಣೆ: 'ಇಂದು ಸಂಜೆಯೊಳಗೆ ಮೂರು ಕ್ಷೇತ್ರದ ಟಿಕೆಟ್ ಘೋಷಣೆ ಆಗಲಿದೆ. ಅಭ್ಯರ್ಥಿಗಳು ಗುರುವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸಲಿದ್ದಾರೆ' ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

'ಯೋಗೇಶ್ವರ್ ಅರ್ಜಿ ಕೊಟ್ಟಿದ್ದಾರೆ. ನಾನು ದೆಹಲಿಗೆ ಎರಡು ಹೆಸರು ಕಳುಹಿಸುತ್ತೇನೆ. ಹೈಕಮಾಂಡ್ ಟಿಕೆಟ್ ಅಂತಿಮ ಮಾಡುತ್ತದೆ ಎಂದರು.

ಯೋಗೇಶ್ವರ್ ಸೆಳೆಯುವಲ್ಲಿ ಯಶಸ್ವಿಯಾದ ಡಿಕೆಶಿ: ಕಾಂಗ್ರೆಸ್‌ಗೆ ಸಿ.ಪಿ. ಯೋಗೇಶ್ವರ್ ಅವರನ್ನು ಕರೆತರಲು ಮದ್ದೂರು ಶಾಸಕ ಉದಯ್ ಮತ್ತು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಉದಯ್ ಮೂಲಕ ಯೋಗೇಶ್ವರ್ ಅವರನ್ನು ಸೆಳೆಯುವಲ್ಲಿ ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ವಿಶ್ಲೇಷಿಸಲಾಗಿದೆ.

ಈ ಹಿಂದೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಪತನದಲ್ಲಿ ಯೋಗೇಶ್ವರ್ ಮತ್ತು ಉದಯ್ ಪ್ರಮುಖ ಪಾತ್ರ ವಹಿಸಿದ್ದರು. ಮೊದಲಿನಿಂದಲೂ ಯೋಗೇಶ್ವರ್- ಉದಯ್ ನಡುವೆ ಬಾಂಧವ್ಯ ಇತ್ತು. ಅದೇ ಬಾಂಧವ್ಯದಲ್ಲೇ ಉದಯ್ ಮೂಲಕ ಯೋಗೇಶ್ವರ್ ಅವರನ್ನು ಡಿ.ಕೆ. ಶಿವಕುಮಾರ್ ಸೆಳೆದಿದ್ದಾರೆ.

ಮದ್ದೂರು ಶಾಸಕರ ಜೊತೆ ಯೋಗೇಶ್ವರ್ ಸಂಪರ್ಕದಲ್ಲಿ ಇದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಆದರೆ, ಅದನ್ನು ಡಿ.ಕೆ. ಶಿವಕುಮಾರ್ ನಿರಾಕರಿಸುತ್ತಲೇ ಬಂದಿದ್ದರು.

ಬಿಜೆಪಿ- ಜೆಡಿಎಸ್ ಮೈತ್ರಿಗೆ ಠಕ್ಕರ್ ನೀಡುವ ಮೂಲಕ ಯೋಗೇಶ್ವರ್ ದೊಡ್ಡ ಆಘಾತ ನೀಡಿದ್ದಾರೆ. ಚನ್ನಪಟ್ಟಣ ಕ್ಷೇತ್ರದಿಂದ ಯೋಗೇಶ್ವರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸಲಿದ್ದಾರೆ. ಯೋಗೇಶ್ವರ್ ಮುಂದೆ ಮೈತ್ರಿ ಅಭ್ಯರ್ಥಿ ಯಾರು ಎಂಬ ಸವಾಲು ಬಿಜೆಪಿ- ಜೆಡಿಎಸ್ ನಾಯಕರಿಗೆ ಎದುರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.