ADVERTISEMENT

ಪ್ರಲ್ಹಾದ ಜೋಶಿ, ಬೊಮ್ಮಾಯಿ ಗೋಪ್ಯ ಚರ್ಚೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 19:40 IST
Last Updated 24 ಜುಲೈ 2021, 19:40 IST
   

ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಶನಿವಾರ ರಾತ್ರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇಬ್ಬರೇ ಪ್ರತ್ಯೇಕವಾಗಿ ಗೋಪ್ಯ ಚರ್ಚೆ ನಡೆಸಿದ್ದಾರೆ.

ಮುಖ್ಯಮಂತ್ರಿ ಬದಲಾದರೆ, ಆ ಸ್ಥಾನಕ್ಕೆ ಪ್ರಲ್ಹಾದ ಜೋಶಿ ಹಾಗೂ ಬಸವರಾಜ ಬೊಮ್ಮಾಯಿ ಅವರ ಹೆಸರು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಇಬ್ಬರೂ ನಾಯಕರು 30 ನಿಮಿಷಗಳ ಕಾಲ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇಬ್ಬರೂ ನಾಯಕರು ಆಗಾಗ ಹುಬ್ಬಳ್ಳಿಗೆ ಬರುತ್ತಾರೆ. ಆದರೆ, ಇಬ್ಬರೂ ಭೇಟಿಯಾಗಿ ಚರ್ಚೆ ನಡೆಸುವುದಿಲ್ಲ. ಸಭೆಗಳಲ್ಲಿ ಮಾತ್ರ ಭೇಟಿಯಾದರೆ, ಕುಶಲೋಪರಿ ವಿಚಾರಿಸುತ್ತಾರೆಯೇ ಹೊರತು, ಗೋಪ್ಯವಾಗಿ ಚರ್ಚೆ ನಡೆಸಿರುವುದು ರಾಜಕೀಯ ಬದಲಾವಣೆಯ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ADVERTISEMENT

‘ರಾಜಕೀಯವಾಗಿ ಯಾವುದೇ ಚರ್ಚೆ ಮಾಡಲು ಸಚಿವ ಜೋಶಿ ಅವರನ್ನು ಭೇಟಿ ಮಾಡಿಲ್ಲ. ಅವರು ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿಗ್ಗಾವಿಯೂ ಸೇರಿರುವುದರಿಂದ ಅಲ್ಲಿನ ಕೆಲವು ಕಾಮಗಾರಿ ಕುರಿತು ಚರ್ಚಿಸಿದ್ದೇನೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.