ಹುಬ್ಬಳ್ಳಿ: ಅರ್ಕಾವತಿ ಬಡಾವಣೆ ‘ರೀಡೂ’ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ಕೇಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಅವರ ಮೇಲೆ ಹಲವಾರು ಭ್ರಷ್ಟಾಚಾರದ ಆರೋಪಗಳಿವೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಇದ್ದಿಲು ಮಸಿಗೆ ಬುದ್ಧಿ ಹೇಳಿದಂತೆ. ಕಾಂಗ್ರೆಸ್ ಸರ್ಕಾರದ ಅವಧಿಯ 59 ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗುವುದು. ಅವುಗಳಲ್ಲಿ ಕೆಲವನ್ನು ಈಗಾಗಲೇ ತನಿಖೆಗೆ ಒಪ್ಪಿಸಲಾಗಿದೆ ಎಂದರು.
ರಾಹುಲ್ ಗಾಂಧಿ ಅವರು ವಿದೇಶದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ ನಂತರ ರಾಜ್ಯ ಮತ್ತು ದೇಶದಲ್ಲಿ ಅದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಚುನಾವಣೆ ಸಂದರ್ಭದಲ್ಲಿ ಅವರು ಬೋಗಸ್ ಘೋಷಣೆ ಮಾಡುತ್ತಿದ್ದಾರೆ. ಅವರದ್ದು ವಿಸಿಟಿಂಗ್ ಕಾರ್ಡ್ ಮಾತ್ರ, ಗ್ಯಾರಂಟಿ ಕಾರ್ಡ್ ಅಲ್ಲ. ರಾಜಸ್ಥಾನ ಮತ್ತು ಛತ್ತೀಸ್‌ಗಡದಲ್ಲಿ ನೀಡಿದ ಭರವಸೆಗಳನ್ನು ಅವರು ಈಡೇರಿಸಿಲ್ಲ. ಪ್ರತಿ ಮನೆಗೆ ₹1 ಸಾವಿರ ನೀಡುವುದಾಗಿ ಛತ್ತೀಸ್‌ಗಡ ಜನರಿಗೆ ನೀಡಿದ್ದ ಭರವಸೆಯನ್ನು ನಾಲ್ಕು ವರ್ಷ ಈಡೇರಿಸಿಲ್ಲ, ಈಗ ಚುನಾವಣೆ ಹತ್ತಿರ ಇರುವ ಸಂದರ್ಭದಲ್ಲಿ ನೀಡಲು ಮುಂದಾಗಿದ್ದಾರೆ ಎಂದರು.
ಉರಿಗೌಡ– ನಂಜೇಗೌಡ ಪ್ರಕರಣದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉರಿಗೌಡ– ನಂಜೇಗೌಡ ಪ್ರಕರಣದ ಬಗ್ಗೆ ಹೇಳುತ್ತಿಲ್ಲ. ಆದರೆ ಇತಿಹಾಸವನ್ನು ತಿರುಚಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದ್ದು, ಸತ್ಯ ಹೇಳಿದರೆ ಕೆಲವರು ತಡೆದುಕೊಳ್ಳುವುದಿಲ್ಲ. ಸಂಶೋಧನೆ ನಡೆದ ನಂತರ ಸತ್ಯ ಹೊರಗೆ ಬರಲಿದೆ ಎಂದರು.
ಕಾಂಗ್ರೆಸ್‌ನಲ್ಲಿದ್ದ ಬಾಬುರಾವ್ ಚಿಂಚನಸೂರ್ ಅವರು ಮತ್ತೆ ಅದೇ ಪಕ್ಷಕ್ಕೆ ಹೋಗಿದ್ದಾರೆ. ಅವರು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಯಾವುದೇ ಪರಿಣಾಮ ಬೀರುವುದಿಲ್ಲ. ಗುರುಮಿಠಕಲ್ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಬಲವಾಗಿದೆ ಎಂದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 24 ಮತ್ತು 26ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ತಮ್ಮ ಬೇಡಿಕೆ ಈಡೇರಿದಕ್ಕೆ ಸಾರಿಗೆ ನೌಕರರ ಪ್ರಮುಖ ಎರಡು ಸಂಘಟನೆಗಳು ಮುಷ್ಕರ ವಾಪಸ್ ಪಡೆದಿವೆ. ಅವರು ನನ್ನನ್ನು ಅಭಿನಂದಿಸಿದ್ದಾರೆ. ಆದ್ದರಿಂದ ಸಾರಿಗೆ ಮುಷ್ಕರ ಇಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.