ADVERTISEMENT

ನರೀಮನ್‌: ಧರೆಗುರುಳಿದ ಮತ್ತೊಂದು ಮರ– ನ್ಯಾ. ಕೃಷ್ಣ ಎಸ್‌.ದೀಕ್ಷಿತ್‌ ನುಡಿನಮನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 23:44 IST
Last Updated 21 ಫೆಬ್ರುವರಿ 2024, 23:44 IST
<div class="paragraphs"><p>ಹಿರಿಯ ವಕೀಲ ಫಾಲಿ ಎಸ್. ನರೀಮನ್‌</p></div>

ಹಿರಿಯ ವಕೀಲ ಫಾಲಿ ಎಸ್. ನರೀಮನ್‌

   

ಅಂತರರಾಷ್ಟ್ರೀಯ ಆರ್ಬಿಟ್ರೇಶನ್‌ಗಳಲ್ಲಿ ಹೆಸರುವಾಸಿಯಾಗಿದ್ದ ಭಾರತ ನ್ಯಾಯಾಂಗ ವ್ಯವಸ್ಥೆಯ ಧ್ರುವತಾರೆ, ಸಂವಿಧಾನ ತಜ್ಞ, ಪ್ರಖ್ಯಾತ ಹಿರಿಯ ವಕೀಲ ಫಾಲಿ ಎಸ್.ನರೀಮನ್‌ ಬುಧವಾರವಷ್ಟೇ ಶಿಶಿರ ಋತುವಿನ ಮುಂಜಾವಿನಲ್ಲಿ ಕೊನೆಯುಸಿರು ಎಳೆದಿದ್ದಾರೆ. ಕಾವೇರಿ ನದಿ ಮತ್ತು ಬೆಂಗಳೂರನ್ನು ಬಹುವಾಗಿ ಪ್ರೀತಿಸುತ್ತಿದ್ದ ಈ ಜೀವ ಪ್ರಸಿದ್ಧ ವಕೀಲ ಜೆಮ್‌ಶೆಡ್‌ಜಿ ಕಾಂಗ ಗರಡಿಯಲ್ಲಿ ತಯಾರಾಗಿದ್ದ ಪಟು.

‘ನರೀಮನ್‌’ ಎಂದರೆ ಪರ್ಶಿಯನ್ ಭಾಷೆಯಲ್ಲಿ ನಂಬಿಕೆ, ಹೊಳಪು ಎಂದರ್ಥ. ಮ್ಯಾನ್ಮಾರ್‌ನ ರಾಜಧಾನಿ ರಂಗೂನ್‌ನಲ್ಲಿ 1919ರ ಜನವರಿ 10ರಂದು ಪಾರ್ಸಿ ಕುಟುಂಬದಲ್ಲಿ ಜನನ. ದೇಶದ ಬಹುತೇಕ ಹೈಕೋರ್ಟ್‌ಗಳಲ್ಲಿ ಪ್ರಖರ ವಾದ ಮಂಡಿಸಿದ ಕೀರ್ತಿಪುರುಷ. ಗಂಗೆಯಲ್ಲಿ ಮಿಂದೆದ್ದು ಬಂದ ವಟುವಿನಂತಹ ವ್ಯಕ್ತಿತ್ವ. ‘ಪದ್ಮಭೂಷಣ’ ಮತ್ತು ‘ಪದ್ಮವಿಭೂಷಣ’ ಗರಿಮೆಗೆ ಭಾಜನರಾಗಿದ್ದವರು. ಬಾಂಬೆ ಹೈಕೋರ್ಟ್‌ನಲ್ಲಿ 1950ರಲ್ಲಿ ವಕೀಲಿಕೆ ಆರಂಭ. ಶಿಸ್ತಿನ ವೃತ್ತಿಯನ್ನು ಏಳು ದಶಕಕ್ಕೂ ಹೆಚ್ಚು ಕಾಲ ನರ್ಮದೆಯಂತೆ ಹರಿಸಿದ ಪರಿ ಅನನ್ಯ. 

ADVERTISEMENT

ವೃತ್ತಿಯ ಕೇಂದ್ರವನ್ನು ಮುಂಬೈನಿಂದ ದೆಹಲಿಗೆ ಪಲ್ಲಟಗೊಳಿಸುವ ಮೂಲಕ ಪ್ರಮುಖ ಸಾಂವಿಧಾನಿಕ ಮೊಕದ್ದಮೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಬ್ಯಾಂಕ್ ರಾಷ್ಟ್ರೀಕರಣ, ಕೇಶವಾನಂದ ಭಾರತೀ ಪ್ರಕರಣ, ಎಲ್‌ಐಸಿ v/s ಎಸ್ಕಾರ್ಟ್ಸ್ ಲಿ., ಎನ್‌ಜೆಎಸಿ (ಕೊಲಿಜಿಯಂ ಪದ್ಧತಿ) ಮುಂತಾದ ಪ್ರಮುಖ ಪ್ರಕರಣಗಳಲ್ಲಿ ಘನ ವಾದ ಮಂಡನೆ. ಕಲಾಪಗಳಲ್ಲಿ ತಮ್ಮದೇ ಆದ ಧೀರಗಂಭೀರ ಗತಿ ಹೊಂದಿದ್ದವರು. ಚೊಕ್ಕವಾದ ಇಂಗ್ಲಿಷ್‌ ಭಾಷೆ, ಚುಚ್ಚು ವ್ಯಂಗ್ಯ, ದಿಟ್ಟ ಪ್ರತಿಪಾದನೆ. ದಾಕ್ಷಿಣ್ಯವಿಲ್ಲ, ಸಂಕೋಚವೂ ಇಲ್ಲ, ಹೇಳುವುದನ್ನು ಹೇಳಿಯೇ ತೀರಬೇಕು ಎಂಬ ಹಟವಾದಿಯಾಗಿದ್ದ ನರೀಮನ್‌, ಕಾವೇರಿ ಜಲವಿವಾದದಲ್ಲಿ ತಮಿಳುನಾಡಿನ ಆರ್ಭಟಗಳನ್ನು ಎಗ್ಗಿಲ್ಲದೆ ಮಣಿಸಿದ್ದರು. ಕರ್ನಾಟಕದ ಪರವಾಗಿ ಸದಾ ತುಡಿಯುತ್ತಿದ್ದ ವಿಶುದ್ಧ ತಜ್ಞರಾಗಿದ್ದರು. ಒಂದೊಮ್ಮೆ ಸುಪ್ರೀಂ ಕೋರ್ಟ್‌ ‘ಕರ್ನಾಟಕ 205 ಟಿಎಂಸಿ ಅಡಿ ನೀರನ್ನು ಬಿಡಬೇಕು’ ಎಂದು ಆದೇಶಿಸಿದಾಗ ಇವರ ಮನೆಯ ಮುಂದೆ ದಾಂದಲೆ ಉಂಟಾಗಿತ್ತು. ಸಿಡಿಮಿಡಿಗೊಂಡ ನರೀಮನ್‌, ‘ನೀವೂ ಬೇಡ ನಿಮ್ಮ ಫೀಸೂ ಬೇಡ ತಗೊಂಡ್ ಹೋಗಿ’ ಎಂದು ದೂರ್ವಾಸರಾಗಿದ್ದರು. ಆದರೆ, ಅಂದಿನ ಕರ್ನಾಟಕ ಜಲಸಂಪನ್ಮೂಲ ಸಚಿವರ ಮನವಿ ಮೇರೆಗೆ ಮತ್ತೆ ಕರ್ನಾಟಕದ ಪರ ತಮ್ಮ ವಾದ ಮುಂದುವರಿಸಿದ್ದರು. 

ರಾಜನಾರಾಯಣ್‌ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ತೀರ್ಪು ನೀಡಿದಾಗ ಇದರ ಮೇಲ್ಮನವಿಯ ಡ್ರಾಫ್ಟ್‌ ಅನ್ನು ಇಂದಿರಾಜಿ ಖುದ್ದು ನರೀಮನ್‌ ಅವರಿಂದಲೇ ಸಿದ್ಧಪಡಿಸಿದ್ದರು. ಆದರೆ, 1975ರಲ್ಲಿ ದೇಶಕ್ಕೆ ಎರಗಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಮುಲಾಜಿಲ್ಲದೆ ತಮ್ಮ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಹುದ್ದೆಗೆ ರಾಜೀನಾಮೆ ನೀಡಿದರು. ಈ ದುರ್ದಿನಗಳಲ್ಲಿ ಕರಿ ಕೋಟು ತೊಟ್ಟ ಉದ್ಧಾಮರೆಲ್ಲರೂ ಬಾಲ ಮುದುರಿಕೊಂಡಿದ್ದಾಗ ನ್ಯಾಯಪಂಡಿತ ಉಪೇಂದ್ರ ಬಕ್ಸಿ ಸೇರಿದಂತೆ ಅನೇಕರನ್ನು ಕಟುವಾಗಿ ಟೀಕಿಸಿದ್ದರು. ಯೂನಿಯನ್‌ ಕಾರ್ಬೈಡ್‌ ಪ್ರಕರಣದಲ್ಲಿ ಕಂಪನಿ ಪರವಾಗಿ ವಾದ ಮಂಡಿಸಿ ಗೆಲುವಿನ ಬುತ್ತಿಯನ್ನು ಕಂಪನಿಯ ಕೈಗಿತ್ತಿದ್ದರು. ನಂತರದ ದಿನಗಳಲ್ಲಿ ಈ ಪ್ರಕರಣ ನಡೆಸಿದ್ದರ ಬಗ್ಗೆ ನೊಂದುಕೊಂಡಿದ್ದರು.

ಸಾಂವಿಧಾನಿಕ ಹಕ್ಕುಗಳು, ತಕರಾರುಗಳು, ಉಪದ್ವ್ಯಾಪಗಳು ತಲೆದೋರಿದ ಸಂದರ್ಭಗಳಲ್ಲೆಲ್ಲಾ ನರೀಮನ್‌ ನಾಗರಿಕರ ಹಕ್ಕು ಮತ್ತು ಕಲ್ಯಾಣಕ್ಕಾಗಿ ಸಿಡಿಲ ಮರಿಯಂತೆ ಅಬ್ಬರಿಸಿದವರು. ತುರ್ತುಪರಿಸ್ಥಿತಿಯಲ್ಲಿ ಹೇಳದೇ ಕೇಳದೇ ಯಾರನ್ನೂ ಬೇಕಾದರೂ ಬಂಧಿಸಬಹುದು ಎಂಬ ಸರ್ಕಾರದ ಅಸಾಂವಿಧಾನಿಕ ನಿಲುವಿಗೆ ಸಮ್ಮತಿಯ ಮುದ್ರೆಯೊತ್ತಿದ್ದ ಎಡಿಎಂ ಜಬಲ್‌ಪುರ ಮೊಕದ್ದಮೆಯಲ್ಲಿನ ಸಾಂವಿಧಾನಿಕ ಪೀಠದ ತೀರ್ಪನ್ನು ಖಡಾಖಡಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು. ಈ ಪೀಠದಲ್ಲಿದ್ದ ನ್ಯಾಯಮೂರ್ತಿ ಎಚ್‌.ಆರ್‌.ಖನ್ನಾ ಅವರು ತಾಳಿದ್ದ ವಿರುದ್ಧ ನಿಲುವನ್ನು ಮನದುಂಬಿ ಸ್ವಾಗತಿಸಿದ್ದರು. ‘ಸಂವಿಧಾನದ 9ನೇ ಷೆಡ್ಯೂಲ್‌ಗೆ ಟ್ಯೂಬೆಕ್ಟಮಿ (ಮಹಿಳೆಯರಿಗೆ ನಡೆಸುವ ಗರ್ಭನಿರೋಧಕ ವಿಧಾನ) ಮಾಡಬೇಕಾದ ಅಗತ್ಯವಿದೆ’ ಎಂದು ಕುಟುಕಿದ್ದರು.

ಕಂಚಿ ಕಾಮಕೋಟಿ ಪೀಠದ ಶಂಕರರಾಮನ್‌ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ವಿರುದ್ಧದ ಪ್ರಕರಣದಲ್ಲಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ಸ್ವಾಮೀಜಿ ಪರ ವಾದ ಮಂಡಿಸಿದ್ದ ರಾಂ ಜೇಠ್ಮಲಾನಿ ಸೋಲುಂಡಿದ್ದರು. ಆದರೆ, ನರೀಮನ್‌ ಸುಪ್ರೀಂ ಕೋರ್ಟ್‌ನಲ್ಲಿ ಒಂದೇ ಒಂದು ರೂಪಾಯಿ ಶುಲ್ಕ ಪಡೆಯದೆ ವಾದ ಮಂಡಿಸಿ ವಿಜಯದ ಕಿರುನಗೆ ಬೀರಿದ್ದರು. ‘ಇಂದಿರಾ ಗಾಂಧಿ ಆಡಳಿತದಲ್ಲಿ ಸಂವಿಧಾನದ 356 ಮತ್ತು 368ನೇ ವಿಧಿಗಳು ಅತ್ಯಂತ ದೌರ್ಜನ್ಯಕ್ಕೆ ಒಳಗಾದ ವಿಧಿಗಳು’ ಎಂದು ಮೂದಲಿಸಿದ್ದರು. ‘ಇವತ್ತಿನ ವ್ಯವಸ್ಥೆಯನ್ನು ನೋಡುತ್ತಿದ್ದರೆ ನ್ಯಾಯಾಲಯಗಳನ್ನೂ ಒಳಗೊಂಡಂತೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಶ್ರೀಸಾಮಾನ್ಯನಿಗೆ ನಂಬಿಕೆ ಬರಲು ಮತ್ತು ಇರಿಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ ತನ್ನ ನಿರೀಕ್ಷೆಗಳನ್ನು ಕಳೆದುಕೊಂಡು ಕೊಸರಾಡುತ್ತಿದೆ’ ಎಂದು ಹೀಗಳೆದಿದ್ದರು. 

ಅದೊಮ್ಮೆ ನರೀಮನ್‌ ಇಂಗ್ಲೆಂಡ್‌ ಪ್ರವಾಸದಲ್ಲಿದ್ದರು. ಆಗವರು ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ. ಅಂದು ಇಂಗ್ಲೆಂಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರನ್ನು ಪರಿಚಯಿಸಿದ ವ್ಯಕ್ತಿ; ಬ್ರಿಟನ್‌ಗೆ ಆ್ಯಂಗ್ಲೊ ಸ್ಯಾಕ್ಸನ್ನರು ಎಂದು ಕಾಲಿಟ್ಟರೋ ಅಂದಿನಿಂದಲೂ ನರೀಮನ್ ಭಾರತದ ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಭಿಕರಿಗೆ ಪರಿಚಯಿಸಿದ್ದರು! ಈ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ ನರೀಮನ್‌ ತಾನು ಇಷ್ಟೊಂದು ದೀರ್ಘಕಾಲ ಅಧ್ಯಕ್ಷನಾಗಿರುವುದು ಸಮುಚಿತವಲ್ಲ ಎಂಬ ಭಾವನೆಯೊಂದಿಗೆ ಅಂದೇ ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಭಾರತದ ಸುಪ್ರೀಂ ಕೋರ್ಟ್‌ಗೆ ಐವತ್ತರ ಹರೆಯ ತುಂಬಿದ ಸಮಾರಂಭದಲ್ಲಿ, ‘ನ್ಯಾಯಾಂಗದಲ್ಲಿ‌ ಶೇ 20ರಷ್ಟು ಭ್ರಷ್ಟಾಚಾರ ಇದೆ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್.ಪಿ‌.ಭರೂಚಾ ಹೇಳಿದಾಗ, ಅವರ ಬೆನ್ನಿಗೆ ನಿಂತವರು ನರೀಮನ್‌. ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿ ಆಗುವ ಮುನ್ನ ಸರ್ಕಾರ ರಚನೆಯಲ್ಲಿ ಸಾಂವಿಧಾನಿಕ ತೊಡಕು ಉಂಟಾದಾಗ ರಾಷ್ಟ್ರಪತಿ ಅಬ್ದುಲ್‌ ಕಲಾಂ ನರಿಮನ್‌ ಅವರನ್ನು ಕರೆಯಿಸಿಕೊಂಡು ಸಲಹೆ ಪಡೆದಿದ್ದರು.

ಪಾರ್ಸಿ ಧಾರ್ಮಿಕ ಪದವಿಯಲ್ಲಿದ್ದ ಮಗ ರೋಹಿಂಟನ್‌ ನರೀಮನ್‌ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ಆಗಿದ್ದಾಗ ಇವರೂ ಅಲ್ಲೇ ಪ್ರ್ಯಾಕ್ಟೀಸ್ ಮಾಡುತ್ತಿದ್ದರು! ಆದರೆ, ‘ಸನ್ಯಾಸಿ ಯೋಗಿ ಆದಿತ್ಯಾನಾಥ್‌ ಅಂತಹವರು ಮುಖ್ಯಮಂತ್ರಿ ಆಗುವುದು ತರವಲ್ಲ’ ಎಂಬ ಇಬ್ಬಗೆಯ ಧೋರಣೆ ಹೊಂದಿದ್ದರು!! ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರೂ ಆಗಿದ್ದ ನರೀಮನ್‌ ಅವರ ಆತ್ಮಕಥನ ‘ಬಿಫೋರ್ ಮೆಮೊರಿ ಫೇಡ್ಸ್‌’ ಅತ್ಯಂತ ಪ್ರಸಿದ್ಧ ಕೃತಿ. ‘ದಿ ಸ್ಟೇಟ್ ಆಫ್ ನೇಷನ್’, ‘ಗಾಡ್ ಸೇವ್ ದಿ ಆನರಬಲ್‌ ಸುಪ್ರೀಂ ಕೋರ್ಟ್’ ಅವರ ಪ್ರಮುಖ ಹೊತ್ತಗೆಗಳು. ಇಂಥವರು ನಮ್ಮಿಂದ ದೈಹಿಕವಾಗಿ ಕಣ್ಮರೆಯಾದರೂ ನಾಗರಿಕ ಸಮಾಜದಲ್ಲಿ ಅನಂತಕಾಲ ಬದುಕಿರುತ್ತಾರೆ. He was the last Mogul of constitutional Law.

ಲೇಖಕ: ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.