ಬೆಂಗಳೂರು: ಪ್ರಕರಣಗಳ ತ್ವರಿತ ವಿಲೇವಾರಿಗೆ ಹೆಸರುವಾಸಿಯಾಗಿರುವ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತೆರೆದ ನ್ಯಾಯಾಲಯದ ಅಮೂಲ್ಯ ಸಮಯವನ್ನು ಉಳಿಸುವ ನಿಟ್ಟಿನಲ್ಲಿ ಇದೀಗ ಮತ್ತೊಂದು ಹೆಜ್ಜೆ ಇರಿಸಿದ್ದಾರೆ.
‘ಪ್ರಕರಣಗಳಲ್ಲಿ ದೀರ್ಘವಾದ ತೀರ್ಪುಗಳ ಬಗ್ಗೆ ತೆರೆದ ನ್ಯಾಯಾಲಯದಲ್ಲಿ ಉಕ್ತ ಲೇಖನ ನೀಡದೇ ಇರುವ ಬಗ್ಗೆ ತೀರ್ಮಾನ ಕೈಗೊಂಡಿದ್ದೇನೆ’ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಗುರುವಾರ ಮುಕ್ತ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ಮೌಖಿಕವಾಗಿ ಪ್ರಕಟಿಸಿದರು.
‘ಮುಕ್ತ ನ್ಯಾಯಾಲಯದಲ್ಲಿ ದೀರ್ಘವಾದ ತೀರ್ಪುಗಳಿಗೆ ಉಕ್ತಲೇಖನ ನೀಡುವುದನ್ನು ತಪ್ಪಿಸಿ’ ಎಂದು ಸುಪ್ರೀಂ ಕೋರ್ಟ್ ನೀಡಿರುವ ಸಲಹೆಯ ಪಾಲನೆಗೆ ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ’ ಎಂದು ಅವರು ಇದಕ್ಕೆ ಸ್ಪಷ್ಟನೆ ನೀಡಿದರು.
‘ನ್ಯಾಯಾಂಗದ ಮತ್ತು ಕೋರ್ಟ್‌ನ ಸಮಯ ಉಳಿಸಲು ದೀರ್ಘವಾದ ತೀರ್ಪುಗಳ ಉಕ್ತಲೇಖನವನ್ನು ತೆರೆದ ನ್ಯಾಯಾಲಯದಲ್ಲಿ ನೀಡದಂತೆ ಸುಪ್ರೀಂ ಕೋರ್ಟ್ ಮೊನ್ನೆಯಷ್ಟೇ ಆದೇಶಿಸಿದೆ. ಹೀಗಾಗಿ, ಇನ್ನು ಮುಂದೆ ದೀರ್ಘವಾದ ತೀರ್ಪುಗಳ ಉಕ್ತಲೇಖನವನ್ನು ತೆರೆದ ನ್ಯಾಯಾಲಯದಲ್ಲಿ ನೀಡುವುದಿಲ್ಲ. ಬದಲಿಗೆ ಕಚೇರಿಯಲ್ಲಿ ನೀಡಲಾಗುವುದು’ ಎಂದು ತಿಳಿಸಿದರು.
ಮಹತ್ವದ ಪ್ರಕರಣಗಳು ಅದರಲ್ಲೂ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿರುವ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕಳೆದ ತಿಂಗಳಲ್ಲಿ 550ಕ್ಕೂ ಹೆಚ್ಚು ಪ್ರಕರಣಗಳನ್ನು ಒಂದೇ ದಿನದಲ್ಲಿ ವಿಚಾರಣೆ ನಡೆಸಿದ್ದರು. ಅಂತೆಯೇ, ಈ ಹಿಂದೆ ಇದೇ ರೀತಿ ದಿನವೊಂದರಲ್ಲಿ 600ಕ್ಕೂ ಹೆಚ್ಚು ಪ್ರಕರಣಗಳನ್ನು ವಿಚಾರಣೆ ನಡೆಸಿದ್ದಾರೆ. ಇವರಿಗೂ ಮೊದಲು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಏಕಸದಸ್ಯ ನ್ಯಾಯಪೀಠದಲ್ಲಿದ್ದಾಗ ಇದೇ ರೀತಿ ಅತಿ ಹೆಚ್ಚು ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.