ಬೆಂಗಳೂರು: ಉಡುಪಿಯ ಶೀರೂರು ಮಠದ ನೂತನ ಪೀಠಾಧಿಪತಿಯಾಗಿ ಅಪ್ರಾಪ್ತರನ್ನು ನೇಮಕ ಮಾಡಿರುವ ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಈ ತೀರ್ಪು ಕಾಯ್ದಿರಿಸುವ ಮುನ್ನ ವಿಚಾರಣೆ ನಡೆಸಿತು.
ಅಪ್ರಾಪ್ತರ ಮೇಲೆ ಸನ್ಯಾಸ ಹೇರುವುದು ಸಂವಿಧಾನದ ಪರಿಚ್ಛೇದ 21 ಮತ್ತು 39(ಇ) ಮತ್ತು (ಎಫ್) ಉಲ್ಲಂಘನೆ ಎಂದು ಅರ್ಜಿದಾರರು ವಾದಿಸಿದರು. ಈ ಪ್ರಕರಣದಲ್ಲಿ ಪೀಠಕ್ಕೆ ಸಲಹೆ ನೀಡಲು ನೇಮಕವಾಗಿರುವ ವಕೀಲ ಎಸ್.ಎಸ್. ನಾಗಾನಂದ ಅವರು, ‘18 ವರ್ಷಕ್ಕಿಂತ ಕೆಳಗಿನವರಿಗೆ ಸನ್ಯಾಸ ನೀಡಬಾರದು ಎಂಬುದಕ್ಕೆ ಯಾವುದೇ ಶಾಸನ ಇಲ್ಲ ಮತ್ತು ಅದು ಹಾನಿಕಾರಕ ಸಂಪ್ರದಾಯವೂ ಅಲ್ಲ’ ಎಂದು ತಿಳಿಸಿದರು.
‘ಉಡುಪಿಯ ಎಂಟು ಮಠಗಳು ಬ್ರಹ್ಮಚಾರಿಗಳಿಗೆ ಸನ್ಯಾಸ ನೀಡುವ ಸಂಪ್ರದಾಯ ಬೆಳೆಸಿಕೊಂಡು ಬಂದಿವೆ. ಕೌಟುಂಬಿಕ ಹಿನ್ನೆಲೆ, ಶಾಸ್ತ್ರೀಯ ಅಧ್ಯಯನದ ಒಲವು ಸೇರಿ ಹಲವು ವಿಷಯಗಳನ್ನು ಪರಿಗಣಿಸಲಾಗುತ್ತದೆ. ಈ ಪ್ರಕ್ರಿಯೆಗೆ ಒಳಪಡುವ ಬ್ರಹ್ಮಚಾರಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ಅದು ಕೇವಲ ಕಾಕತಾಳೀಯ’ ಎಂದು ಅವರು ಹೇಳಿದರು.
‘ಅರ್ಜಿದಾರರಾದ ಪಿ. ಲಾತವ್ಯ ಆಚಾರ್ಯ ಅವರು ವೈಯಕ್ತಿಕ ಹಿತಾಸಕ್ತಿಯಿಂದ ಈ ಅರ್ಜಿ ಸಲ್ಲಿಸಿದ್ದಾರೆ. ಈಗ ಪೀಠಾಧಿಪತಿ ಆಗಿರುವವರ ರಕ್ತ ಸಂಬಂಧಿಯಾಗಿದ್ದು, ಅವರ ಸಂಬಂಧಿಕರನ್ನು ಧರ್ಮಗುರು ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಸೋದೆ ವಾದಿರಾಜ ಮಠದ ಪರ ವಕೀಲರು ವಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.