ಬೆಂಗಳೂರು: ರೈತರ ಸಾಲ ಮನ್ನಾ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಸಿ.ಟಿ. ರವಿ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಬರ–ನೆರೆ ಮತ್ತಿತರ ಸಂಕಷ್ಟದ ಸಮಯದಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡಿದೆ. ಆದರೆ, ಒಂದು ದಶಕದಿಂದ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಸಾಲ ಮನ್ನಾ ಮಾಡಲು ಸಿದ್ಧವಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಿಸಲು ಸಾಧ್ಯವಾಗದ ಬಿಜೆಪಿ ಸದಸ್ಯರು, ರೈತರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಭೂಮಿ ಹೊಂದಿರುವ 63 ಲಕ್ಷ ರೈತರಲ್ಲಿ 35 ಲಕ್ಷ ರೈತರಿಗೆ ಸಹಕಾರ ಸಂಘಗಳ ಮೂಲಕ ಸಾಲ ವಿತರಿಸಲಾಗಿದೆ. ಸಂಘದ ಸದಸ್ಯರಾದವರಿಗಷ್ಟೇ ಸೌಲಭ್ಯ ಸಿಗುತ್ತದೆ. ಉಳಿದ ರೈತರು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದಾರೆ. ಸಿ.ಟಿ. ರವಿ ಆರೋಪಿಸಿದಂತೆ ಕಿಟಕಿಯಿಂದ ವ್ಯವಹಾರ ನಡೆಯುತ್ತಿಲ್ಲ. ಅಂತಹ ವ್ಯವಹಾರ ಅವರಿಗಷ್ಟೇ ಗೊತ್ತು ಎಂದರು.
ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ:
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದ್ದ ಅವ್ಯವಹಾರ ಪ್ರಕರಣ ಕುರಿತು ಕಲಬುರಗಿ ಪ್ರಾದೇಶಿಕ ಆಯುಕ್ತರು ತನಿಖೆ ನಡೆಸಿ, ವರದಿ ನೀಡಿದ್ದಾರೆ. ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ. ಅಲ್ಲಿನ ಎಸ್‌ಪಿಗೂ ಪತ್ರ ಬರೆಯಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾಹಿತಿ ನೀಡಿದರು.
ವಂದೇ ಭಾರತ್ ರೈಲು ಬೆಳಗಾವಿಗೆ ವಿಸ್ತರಣೆ:
ಬೆಂಗಳೂರು–ಧಾರವಾಡ ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಲು ಮಾತುಕತೆ ನಡೆದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿಸ್ತರಣೆಗೆ ಮೂಲ ಸೌಕರ್ಯ, ತಾಂತ್ರಿಕ ಸಮಸ್ಯೆಗಳಿವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದರು. ಈಗ ಪರಿಶೀಲನೆ ನಡೆಸಲಾಗಿದ್ದು, ಶೀಘ್ರವೇ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.