ADVERTISEMENT

ತಮಿಳಿನ ಅನುವಾದಿತ ಕೃತಿಗಳ ಬಿಡುಗಡೆ ಜೂನ್ 18ಕ್ಕೆ

ತಮಿಳು ಭಾಷೆ ಮತ್ತು ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದ ಯೋಜನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 3:56 IST
Last Updated 16 ಜೂನ್ 2022, 3:56 IST
   

ಬೆಂಗಳೂರು: ಕೆ.ನಲ್ಲತಂಬಿ ಅವರ ಮೂರು ತಮಿಳು ಕೃತಿಗಳ ಕನ್ನಡದ ಅನುವಾದಪುಸ್ತಕಗಳಾದ ‘ಬಾಪು ಹೆಜ್ಜೆಗಳಲ್ಲಿ’, ‘ಮತ್ತೊಂದು ರಾತ್ರಿ’, ‘ಗುಡಿ–ಗಂಟೆ ಮತ್ತು ಇತರೆ ಕಥೆಗಳು’ ಜೂನ್.18ರಂದು ಶನಿವಾರ ಶೇಷಾದ್ರಿಪುರಂನ ಗಾಂಧಿಭವನದಲ್ಲಿ ಬಿಡುಗಡೆಯಾಗಲಿವೆ ಎಂದು ವಿ.ಎಸ್.ಶ್ರೀಧರ ತಿಳಿಸಿದ್ದಾರೆ.

ತಮಿಳುನಾಡು ಸರ್ಕಾರ ಹಾಗೂ ತಮಿಳ್ ವಳರ್ಚಿ ಕಳಗಂ (ತಮಿಳನಾಡು ಪಠ್ಯಪುಸ್ತಕ ಸೇವಾ ನಿಗಮ) ತಮಿಳು ಭಾಷೆ ಮತ್ತು ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಅನುವಾದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಪ್ರತಿ ಭಾಷೆಗೆ ಅನುವಾದ ಮಾಡಿಸಲು ಒಬ್ಬ ಸಂಯೋಜಕರನ್ನು ನೇಮಿಸಲಾಗಿದೆ. ವಿ.ಎಸ್. ಶ್ರೀಧರ ಅವರು ತಮಿಳು–ಕನ್ನಡ ಅನುವಾದ ಮಾಲಿಕೆಯ ಸಂಯೋಜಕರು.

ಯೋಜನೆ ಅಂಗವಾಗಿ ಮೊದಲ ಹಂತದಲ್ಲಿ ತಮಿಳಿನ ಮೂರು ಕೃತಿಗಳು ಪ್ರಕಟವಾಗುತ್ತಿವೆ.ಗಾಂಧೀಜಿ ಪ್ರಭಾವಕ್ಕೆ ಒಳಗಾಗಿ ತಮಿಳುನಾಡಿನ ಗ್ರಾಮಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿಮತ್ತು ಸಮಾಜ ಸುಧಾರಣೆಯಲ್ಲಿ ನಿಸ್ವಾರ್ಥದಿಂದ ತೊಡಗಿಸಿಕೊಂಡು, ತಮ್ಮಬಾಳನ್ನೆ ಬದಲಿಸಿಕೊಂಡ 15 ಮಹನೀಯರ ಕುರಿತ ಪ್ರಬಂಧಗಳ ಸಂಕಲನ ‘ಬಾಪೂಹೆಜ್ಜೆಗಳಲ್ಲಿ’ (ಲೇ: ಪಾವಣ್ಣನ್, ಪಲ್ಲವ ಪ್ರಕಾಶನ, ಹೊಸಪೇಟೆ). ಇದರಲ್ಲಿ ಪ್ರಸಿದ್ಧರಾದರಾಜಾಜಿ, ಕೆ.ಸ್ವಾಮಿನಾಥನ್‌, ಜೆ.ಸಿ. ಕುಮರಪ್ಪ, ಲಕ್ಷ್ಮಣ ಅಯ್ಯರ್‌ ಅಂಥವರಲ್ಲದೆ, ಅಜ್ಞಾತರಾಗಿಸೇವೆ ಸಲ್ಲಿಸಿದ ಅಂಬುಜಮ್ಮಾಳ್‌, ಗೋದೈ ಅಮ್ಮಾಳ್‌, ಶ್ರೀಲಂಕಾದ ರಾಜಗೋಪಾಲಮುಂತಾದವರ ಕುರಿತ ಪರಿಚಯವಿದೆ.

ADVERTISEMENT

‘ಮತ್ತೊಂದು ರಾತ್ರಿ’ (ಗಾಂಧೀಜಿ ಬದುಕಿನ ಕುರಿತ ವಿವಿಧ ತಮಿಳು ಕತೆಗಳ ಸಂಗ್ರಹ–ಅಭಿರುಚಿ ಪ್ರಕಾ ಶನ, ಮೈಸೂರು) ಕೃತಿಯಲ್ಲಿ ದೇವಿ ಭಾರತಿ, ಜಯಮೋಹನ್‌, ಶರವಣನ್‌ ಕಾರ್ತಿಕೇಯನ್, ಕಲೈಸೆಲವಿ , ಎಸ್.‌ರಾಮಕೃಷ್ಣ, ನಾಗರಾಜನ್‌ ಮುಂತಾದವರ 11 ಕತೆಗಳಿವೆ. ‘ಗುಡಿ -ಗಂಟೆ ಮತ್ತು ಇತರ ಕತೆಗಳು’ (ಲೇ. ಜಾನಕೀರಾಮನ್‌, ಲಡಾಯಿ ಪ್ರಕಾಶನ, ಗದಗ)–ಇದು ತಮಿಳಿನ ಪ್ರಸಿದ್ಧ ಕತೆಗಾರ ಜಾನಕೀರಾಮನ್‌ ಅವರು 1950ರಿಂದ 70ರ ವರೆಗೆ ಬರೆದ 17 ಕತೆಗಳ ಸಂಕಲನ ಎಂದು ವಿ.ಎಸ್.ಶ್ರೀಧರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.