ಬೆಂಗಳೂರು: ‘ಕಬ್ಬಲಿಗ ಜಾತಿಯ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ನಂತರ ಪರಿವಾರ ನಾಯಕ ಜಾತಿ ಪ್ರಮಾಣ ಪಡೆದುಕೊಂಡಿರುವ ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ಒಟ್ಟು 30 ಮಂದಿಗೆ ಆಯಾ ಜಿಲ್ಲಾಧಿಕಾರಿಗಳ ಮುಖಾಂತರ ನೋಟಿಸ್ ಜಾರಿಗೊಳಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಯಾದಗಿರಿ ಜಿಲ್ಲೆಯ ‘ರಾಜ್ಯ ಎಸ್‌ಸಿ–ಎಸ್‌ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿ’ ಪ್ರಧಾನ ಕಾರ್ಯದರ್ಶಿ ಮಾರಪ್ಪ ನಾಯಕ ಸೇರಿದಂತೆ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಿಶೇಷ ವಕೀಲ ಸಿ.ಜಗದೀಶ್, ‘ಹೈಕೋರ್ಟ್ ನಿರ್ದೇಶನದ ಅನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲೆ ಓ.ಅಶ್ವಿನಿ, ‘ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡಿರುವ 6–7 ಸಾವಿರ ಜನರ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಇವರೆಲ್ಲರ ವಿರುದ್ಧ ಕ್ರಮದ ಅಗತ್ಯವಿದೆ’ ಎಂದು ವಿವರಿಸಿದರು.
ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಸ್ಥಳೀಯ ತಹಶೀಲ್ದಾರ್‌ಗಳಿಗೆ ನೀಡಿರುವ ಮನವಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ‘ಮಾಹಿತಿಯನ್ನು ನಮಗೆ ಹಂಚಿಕೊಂಡರೆ, ಆ ಬಗ್ಗೆ ಕ್ರಮ ಜರುಗಿಸಲಾಗುವುದು’ ಎಂದು ಜಗದೀಶ್ ನ್ಯಾಯಪೀಠಕ್ಕೆ ಭರವಸೆ ನೀಡಿದರು.
‘ನಕಲಿ ಜಾತಿ ಪ್ರಮಾಣ ಪಡೆದುಕೊಂಡಿರುವವರ ವಿರುದ್ಧ ಮುಂದಿನ 3 ವಾರಗಳಲ್ಲಿ ಕ್ರಮ ಕೈಗೊಳ್ಳಿ’ ಎಂದು ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜೂನ್ 11ಕ್ಕೆ ಮುಂದೂಡಿತು.
ಏನಿದು ಅರ್ಜಿ?: ‘ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ; ಪ್ರವರ್ಗ ಒಂದರಲ್ಲಿ ಬರುವ ಬೆಸ್ತರ ಉಪ ಜಾತಿಯಾದ ಪರಿವಾರ ಹಾಗೂ ತಳವಾರ ಬೋಯಿ ಉಪ ಪಂಗಡದವರಿಗೂ ಪರಿಶಿಷ್ಟ ಪಂಗಡದ (ಎಸ್‌ಟಿ) ನಕಲಿ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿದೆ’ ಎಂಬುದು ಅರ್ಜಿದಾರರ ಆರೋಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.