ಬೆಳಗಾವಿ: ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅದಲು–ಬದಲು ಆಗಿರುವುದರಿಂದಾಗಿ ಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಗಮನಸೆಳೆದಿದೆ.
2018ರ ಮೇ ತಿಂಗಳಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶ್ರೀಮಂತ ಪಾಟೀಲ ಬಿಜೆಪಿಯ ಭರಮಗೌಡ (ರಾಜು) ಕಾಗೆ ವಿರುದ್ಧ ಗೆದ್ದಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಭರಮಗೌಡ ಕಾಂಗ್ರೆಸ್‌ನಿಂದ ಹಾಗೂ ಶ್ರೀಮಂತ ಬಿಜೆಪಿಯಿಂದ ಅಖಾಡಕ್ಕಿಳಿದಿದ್ದಾರೆ.
ಜೆಡಿಎಸ್‌ನಿಂದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶ್ರೀಶೈಲ ತುಗಶೆಟ್ಟಿ ಕಣದಲ್ಲಿದ್ದಾರೆ. ಅವರ ಪತ್ನಿ ಪುಟ್ಟರಾಜಮ್ಮ ಜಿಲ್ಲಾ ಪಂಚಾಯ್ತಿ ಕಾಂಗ್ರೆಸ್ ಸದಸ್ಯೆ!
ಇಲ್ಲಿ ಮೇಲ್ನೋಟಕ್ಕೆ ತ್ರಿಕೋನ ಪೈಪೋಟಿ ಇದ್ದರೂ, ಕಾಂಗ್ರೆಸ್–ಬಿಜೆಪಿ ನಡುವೆ ತೀವ್ರ ಹಣಾಹಣಿ ಕಂಡುಬಂದಿದೆ.
ಉಪ ಚುನಾವಣೆ ಮೂಲಕವೇ: ಕ್ಷೇತ್ರ ಮತ್ತು ಅಭ್ಯರ್ಥಿ ಭರಮಗೌಡ ಅವರಿಗೆ ಈ ಬಾರಿಯದು 2ನೇ ಉಪ ಚುನಾವಣೆ. 1967ರಿಂದ ಈವರೆಗೆ 12 ಸಾರ್ವತ್ರಿಕ ಚುನಾವಣೆಗಳು ಮತ್ತು ಒಮ್ಮೆ ಉಪಚುನಾವಣೆ ನಡೆದಿದೆ. 1999ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕಾಗೆ ಸೋತಿದ್ದರು. ಆಗ, ಕಾಂಗ್ರೆಸ್‌ನ ಪಾಸಗೌಡ ಪಾಟೀಲ 31,462 ಮತಗಳಿಂದ ಗೆದ್ದಿದ್ದರು. ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ 2,000ನೇ ಇಸವಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿದ್ದ ಭರಮಗೌಡ ವಿಧಾನಸಭೆ ಪ್ರವೇಶಿಸಿದ್ದರು. ಬಳಿಕ ‘ಹ್ಯಾಟ್ರಿಕ್’ ಜಯ ದಾಖಲಿಸಿ ‘ಕಮಲ’ ಅರಳಿಸಿ, ವರ್ಚಸ್ಸು ವೃದ್ಧಿಸಿಕೊಂಡಿದ್ದರು. ಉಪ ಚುನಾವಣೆ ಮೂಲಕವೇ ಶಾಸಕರಾಗಿದ್ದ ಅವರು, ಈ ಬಾರಿ ಉಪ ಚುನಾವಣೆಯಲ್ಲಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ.
2008ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೇ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶ್ರೀಮಂತ ಪಾಟೀಲ, 2013ರಲ್ಲೂ ಜೆಡಿಎಸ್‌ನಿಂದಲೇ ಕಣಕ್ಕಿಳಿದು ಕಾಗೆ ವಿರುದ್ಧ ಸೋತಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ‘ಸಾಂಪ್ರದಾಯಿಕ ಎದುರಾಳಿ’ ವಿರುದ್ಧ ಗೆದ್ದಿದ್ದರು. ಒಂದೂವರೆ ವರ್ಷದಲ್ಲಿ ‘ಸಮೀಕರಣ’ವೇ ಬದಲಾಗಿದೆ.
ವೈಯಕ್ತಿಕ ವರ್ಚಸ್ಸಿಗೆ: 7ನೇ ಬಾರಿಗೆ ಚುನಾವಣೆ ಎದುರಿಸುತ್ತಿರುವ ಕಾಗೆ ಕೂಡ ಪಕ್ಷಾಂತರ ಮಾಡಿದ ವರೇ. 2 ಪಕ್ಷಗಳಿಂದ (ಜೆಡಿಯು, ಬಿಜೆಪಿ) ಗೆದ್ದಿದ್ದರು. ಈಗ ‘ಕೈ’ ಆಸರೆ ಪಡೆದಿದ್ದಾರೆ. ಉಪ ಚುನಾವಣೆ ಸೇರಿ 13 ಚುನಾವಣೆಗಳಿಗೆ ಸಾಕ್ಷಿಯಾದ ಈ ಕ್ಷೇತ್ರ ದಲ್ಲಿ ಒಟ್ಟು ಕಾಂಗ್ರೆಸ್ 6 ಬಾರಿ ಗೆದ್ದಿದೆ. ಪಕ್ಷಕ್ಕಿಂತ ವೈಯ ಕ್ತಿಕ ವರ್ಚಸ್ಸಿಗೆ ಮತದಾರರು ‘ಮಣೆ’ ಹಾಕಿದ ಇತಿಹಾಸವಿದೆ.
ಅಭ್ಯರ್ಥಿಗಳ ಪಕ್ಷಾಂತರ ಪರಿಣಾಮ, ಮುಖಂಡರು– ಹಿಂಬಾಲಕರ ಮೇಲೂ ಬೀರಿದೆ. ಈ ಭಾಗದ ಪ್ರಮುಖ
ಕೃಷ್ಣಾ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಜ್ಯೋತಗೌಡ ಪಾಟೀಲ, ನಿರ್ದೇಶಕ ಗೂಳಪ್ಪ ಜತ್ತಿ ಮೊದಲಾದ ಮುಖಂಡರು ಕಾಗೆ ಜೊತೆಗಿದ್ದಾರೆ. ಅಂತೆಯೇ, ಶ್ರೀಮಂತ ಪರವಾಗಿಯೂ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಬಂದಿದ್ದಾರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿ ಹಲವು ಮುಖಂಡರಿಗೆ ಬಿಜೆಪಿ ಉಸ್ತುವಾರಿ ಕೊಟ್ಟಿದೆ.
ಚಿಕ್ಕೋಡಿ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಪ್ರಕಾಶ ಹುಕ್ಕೇರಿ ಈವರೆಗೂ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ.
ಬೇಡಿಕೆ ಬಗ್ಗೆ ಪ್ರಸ್ತಾಪವಿಲ್ಲ: ಅಭ್ಯರ್ಥಿಗಳು ಅರ್ಹ–ಅನರ್ಹರ ಚರ್ಚೆ, ಸ್ವಾಭಿಮಾನ, ಚಿಹ್ನೆಗಳ ಅರಿವು ಮೂಡಿಸುವುದು, ಆರೋಪ–ಪ್ರತ್ಯಾರೋಪದಲ್ಲಿ ತೊಡಗಿರುವುದು ಸಾಮಾನ್ಯವಾಗಿದೆ. ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸುತ್ತಿಲ್ಲ. ಕಬ್ಬು ಬೆಳೆಗೆ ಹೆಸರಾದ ಇಲ್ಲಿ ಬೆಳೆಗಾರರಿಗೆ ಬರಬೇಕಾದ ಬಾಕಿ ಮೊದಲಾದ ವಿಷಯಗಳು ‘ಗೌಣ’ವಾಗಿವೆ. ಕೃಷ್ಣಾ ನದಿ ನೆರೆಯಿಂದ ಸಂತ್ರಸ್ತರಾಗಿ ಸಂಕಷ್ಟದಲ್ಲಿದ್ದಾಗ
ಹಿಂದಿನ ಜನಪ್ರತಿನಿಧಿ ಸ್ಪಂದಿಸಲಿಲ್ಲ; ಕ್ಷೇತ್ರದಲ್ಲಿ ಸಂಚರಿಸಲಿಲ್ಲ ಎನ್ನುವ ‘ಸಿಟ್ಟು’ ಗುಪ್ತಗಾಮಿನಿಯಂತೆ ಹರಿಯುತ್ತಿದೆ! ಹಿಂದಿನ
ಸರ್ಕಾರದಲ್ಲಿ ಪ್ರಾರಂಭವಾಗಿ ಈಗ ಸ್ಥಗಿತವಾಗಿರುವ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು. ನಾಲೆ ನಿರ್ಮಿಸಲು ಜಮೀನು ಕೊಟ್ಟವರಿಗೆ ಸಮರ್ಪಕ ಪರಿಹಾರ ನೀಡಬೇಕು ಎನ್ನುವುದು ಪ್ರಮುಖ ಬೇಡಿಕೆಗಳಾಗಿವೆ.
ಜಾತಿವಾರು ಮತ ಬೇಟೆ ನಡೆಯುತ್ತಿದೆ. ವೀರಶೈವ–ಲಿಂಗಾಯತರು ನಿರ್ಣಾಯಕರಾಗಿದ್ದಾರೆ. ಜೈನರು, ಪರಿಶಿಷ್ಟ ಜಾತಿ, ಪಂಗಡ, ಕುರುಬರು, ಮುಸ್ಲಿಮರು, ಮರಾಠರು ನಂತರದ ಸ್ಥಾನದಲ್ಲಿದ್ದಾರೆ.
2018ರ ಚುನಾವಣಾ ಫಲಿತಾಂಶ
ಅಭ್ಯರ್ಥಿ;ಪಕ್ಷ;ಪಡೆದ ಮತಗಳು
ಶ್ರೀಮಂತ ಪಾಟೀಲ;ಕಾಂಗ್ರೆಸ್;83,060
ಭರಮಗೌಡ ಕಾಗೆ;ಬಿಜೆಪಿ;50,118
ಕಲ್ಲಪ್ಪ ಮಗೆಣ್ಣವರ;ಜೆಡಿಎಸ್;7,337
ಮತದಾರರ ವಿವರ
ಪುರುಷರು:9,57,86
ಮಹಿಳೆಯರು:89,657
ಒಟ್ಟು:1,85,443
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.