ರಾಯಚೂರು: ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಡ್ಜ್ ಹತ್ತಿರದ ಕಾಗಿನೆಲೆ ಕನಕಗುರು ಪೀಠದಲ್ಲಿ ಮೂರು ದಿನಗಳ ‘ಹಾಲುಮತ ಸಂಸ್ಕೃತಿ ವೈಭವ–2021’ಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಡೊಳ್ಳು ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಹಾಲುಮತ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಹೆಗಲ ಮೇಲೆ ಕಂಬಳಿ ಹಾಕಿಕೊಂಡು ಶ್ವೇತ ವರ್ಣದ ಮುಂಡಾಸು ಸುತ್ತಿದ್ದ ಅನೇಕರು, ಭಕ್ತಿಭಾವದಿಂದ ಹಣೆಗೆ ಅರಿಸಿನ ಬಳಿದು
ಕೊಂಡು ಸಂಭ್ರಮಿಸಿದರು. ಮಹಿಳೆಯರು ಪೂರ್ಣಕುಂಭ ಹೊತ್ತು ಆರತಿಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದರು. ಬೀರದೇವರು ಮತ್ತು ಕನಕದಾಸ ಪರ ಜಯಘೋಷಗಳು ಮೊಳಗಿದವು.
‘ನಾನು ಬೀರದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ಎಸ್.ಟಿ. ಮೀಸಲಾತಿ ಹೋರಾಟಕ್ಕೆ ನನ್ನ ವಿರೋಧವಿಲ್ಲ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
‘ಸಿದ್ದರಾಮಯ್ಯ ಅವರ ವಿರುದ್ಧ ಈಶ್ವರಪ್ಪ ಅವರು ಹಗುರವಾಗಿ ಮಾತನಾಡಬಾರದು. ಕುರುಬ ಸಮಾಜವನ್ನು ಒಡೆಯುವ ಯತ್ನ ಮಾಡುತ್ತಿರುವ ಈಶ್ವರಪ್ಪ ವಿರುದ್ಧ ಕುರುಬ ಸಮಾಜವೇ ಹೋರಾಡಬೇಕಾಗುತ್ತದೆ’ ಎಂದು ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ ಎಚ್ಚರಿಕೆ ನೀಡಿದರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಸಹ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಕನಕಗುರು ಪೀಠದ ಪೀಠಾಧಿಪತಿ ಸಿದ್ದರಾಮಾನಂದಪುರಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹಾಲವರ್ತಿಯ ಜಡೇಶ್ವರ ಸಂಸ್ಥಾನ ಮಠದ ಶಿವಸಿದ್ದೇಶ್ವರ ಸ್ವಾಮೀಜಿ, ತಿಂಥಣಿ ಬ್ರಿಡ್ಜ್ ನ ಲಿಂಗಬೀರದೇವ ಸ್ವಾಮೀಜಿ, ಬಸವ ಕಲ್ಯಾಣ ತಾಲ್ಲೂಕಿನ ಗೌರ ಬೀರದೇವರ ಮಠದ ಬೀರಪ್ಪ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಜ.13ರಂದು ಟಗರ ಜೋಗಿಗಳ, ಹೆಳವರ, ಕಾಡುಸಿದ್ದರ ಸಮಾವೇಶ, 14ರಂದು ಬೊಮಗೊಂಡೇಶ್ವರ, ಸಿದ್ಧರಾಮೇಶ್ವರ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.