ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ಸ್ಥಾಪನೆಗೆ ಭಾರಿ ವಿರೋಧ ವ್ಯಕ್ತವಾಗಿದೆ.
ಕಾರವಾರ ತಾಲ್ಲೂಕಿನ ಕುರ್ನಿಪೇಟೆಯಲ್ಲಿರುವ ಕೈಗಾ ವಸತಿ ಸಂಕೀರ್ಣದ ಆವರಣದಲ್ಲಿಶನಿವಾರ ಆಯೋಜಿಸಿದ್ದ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಭಾಗವಹಿಸಿದ್ದವರು ಈ ಯೋಜನೆಯನ್ನುರದ್ದುಪಡಿಸಲೇಬೇಕು ಎಂದುಆಗ್ರಹಿಸಿದರು.
ಇದೇ ವೇಳೆ, ಕೈಗಾ ಸುತ್ತಮುತ್ತಲಿನ ವಿವಿಧ ಗ್ರಾಮಗಳಒಂದು ಸಾವಿರಕ್ಕೂ ಅಧಿಕಜನರುಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಇದನ್ನು ಬೆಂಬಲಿಸಿದ್ದರು.ಮಲ್ಲಾಪುರದಿಂದ ಹೊರಟ ಪ್ರತಿಭಟನಾಕಾರರು, ವಸತಿ ಸಂಕೀರ್ಣದ ಪ್ರವೇಶದ್ವಾರದವರೆಗೂ ಘೋಷಣೆ ಕೂಗುತ್ತ ಬಂದು ವಿರೋಧ ವ್ಯಕ್ತಪಡಿಸಿದರು.
ರಾಜ್ಯ ಮಾಲಿನ ನಿಯಂತ್ರಣ ಮಂಡಳಿಯು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಧ್ಯಕ್ಷತೆಯಲ್ಲಿ ಈ ಸಭೆಯನ್ನು ಏರ್ಪಡಿಸಿತ್ತು. ಕೇಂದ್ರ ಸರ್ಕಾರಿ ಸ್ವಾಮ್ಯದ ಮೆಕಾನ್ ಸಂಸ್ಥೆ ನೀಡಿದ ವರದಿ ಆಧರಿಸಿ ಈ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಭಾಗವಹಿಸಿದ್ದ ಪರಿಸರ ಬರಹಗಾರ ನಾಗೇಶ ಹೆಗಡೆ ಮಾತನಾಡಿ, ‘ಅಣು ವಿದ್ಯುತ್ ಸ್ಥಾವರದಿಂದ ಉತ್ಪಾದನೆಯಾಗುವ ತ್ಯಾಜ್ಯದ ವಿಲೇವಾರಿ ಹೇಗೆ ಮಾಡಲಾಗುತ್ತದೆ ಎಂಬ ಬಗ್ಗೆ ಪರಿಸರ ಪರಿಣಾಮ ವರದಿಯಲ್ಲಿ ತಿಳಿಸಿಲ್ಲ. ಕಾರ್ಯ ನಿರ್ವಹಣೆಯ ಅವಧಿ ಮುಗಿದಿರುವ 138 ರಿಯಾಕ್ಟರ್‌ಗಳು ವಿಶ್ವದಾದ್ಯಂತ ಇವೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಹೇಗೆ ನಿಭಾಯಿಸಬೇಕು ಎಂದುತಿಳಿದಿಲ್ಲ. ಆದ್ದರಿಂದ ಇಂತಹ ಪರಿಸರ ಮಾರಕ ಯೋಜನೆಗಳು ಬೇಡ’ ಎಂದರು.
‘ಅಣು ವಿದ್ಯುತ್ ಘಟಕದಲ್ಲಿ 20 ಸಾವಿರ ವರ್ಷಗಳವರೆಗೂ ವಿಕಿರಣಗಳ ಪ್ರಭಾವ ಇರುತ್ತದೆ ಎಂದು ವಿಜ್ಞಾನದಿಂದ ತಿಳಿಯುತ್ತದೆ. ಕೈಗಾ
ಅಣು ವಿದ್ಯುತ್ ಘಟಕಗಳ ಆಯಸ್ಸು 2080ರ ವೇಳೆಗೆ ಮುಗಿಯುತ್ತದೆ. ನಂತರ ಮುಂದಿನ ಪೀಳಿಗೆಗೆನಾವೇನು ಕೊಡಲಿದ್ದೇವೆ? ವಿಕಿರಣಗಳ ಅಪಾಯವನ್ನೇಎಂಬ ನೈತಿಕ ಪ್ರಶ್ನೆ ಮುಂದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ‘ಕೈಗಾ ಸುತ್ತಮುತ್ತ ಕ್ಯಾನ್ಸರ್ ಸೇರಿದಂತೆ ವಿವಿಧ ಮಾರಕ ಕಾಯಿಲೆಗಳು ಹೆಚ್ಚುತ್ತಿವೆ. ಇದಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಸುತ್ತಮುತ್ತಲಿನ ಗ್ರಾಮಗಳಿಗೆ ಕಾಳಿನದಿ ನೀರನ್ನು ಪೂರೈಕೆ ಮಾಡದೇಗಂಗಾವಳಿ ನದಿಯಿಂದ ಹರಿಸಲಾಗುತ್ತಿದೆ. ಇಲ್ಲಿ ಕಾಳಿ ನದಿ ನೀರು ಸೇವಿಸಿದರೆ ಏನಾಗುತ್ತದೆ ಎಂದು ಗೊತ್ತಿಲ್ಲ’ ಎಂದು ಅನುಮಾನ ವ್ಯಕ್ತಪಡಿಸಿದರು.
ಪರಿಸರ ಧಾರಣಾಸಾಮರ್ಥ್ಯದ ಅಧ್ಯಯನಕ್ಕೆ ಮೆಕಾನ್ ಸಂಸ್ಥೆಗೆ ಅರ್ಹತೆಯಿಲ್ಲ ಎಂದುಹೇಳಿ, ಅದು ನೀಡಿದ ವರದಿಯನ್ನು ಹರಿದು
ಹಾಕಿ ಪ್ರತಿಭಟನೆ ದಾಖಲಿಸಿದರು.
ಪರಿಸರ ತಜ್ಞ ಡಾ.ಕೇಶವ ಕೊರ್ಸೆ ಮಾತನಾಡಿ, ‘ಕೈಗಾದನಾಲ್ಕುಘಟಕಗಳ ವಿಕಿರಣದಿಂದ 25 ವರ್ಷಗಳಲ್ಲಿ ಪರಿಸರದ ಮೇಲೆ ಉಂಟಾದ ಪರಿಣಾಮದ ವರದಿ ನೀಡಿಲ್ಲ. ಮೆಕಾನ್ ಸಂಸ್ಥೆ ನಡೆಸಿದ ಅಧ್ಯಯನ ವರದಿಯಲ್ಲೂ ಈ ಅಂಶಗಳನ್ನು ಉಲ್ಲೇಖಿಸಿಲ್ಲ’ ಎಂದು ಆಕ್ಷೇಪಿಸಿದರು.
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಕೈಗಾದಲ್ಲಿ ಮೊದಲ ನಾಲ್ಕು ಘಟಕಗಳ ಸ್ಥಾಪನೆ ಸಂದರ್ಭದಲ್ಲಿ ಹೇಳಿದಂತೆ ಮೂಲ ಸೌಕರ್ಯಗಳನ್ನು ನೀಡಿಲ್ಲ. ಆದ್ದರಿಂದ ಐದು ಮತ್ತು ಆರನೇ ಘಟಕಗಳ ಸ್ಥಾಪನೆ ಬೇಡ’ ಎಂದರು.
ಇದೇ ರೀತಿ, ಹತ್ತಾರು ಮಂದಿ ತಮ್ಮ ಅಭಿಪ್ರಾಯ ಹಾಗೂ ವಿರೋಧವನ್ನು ವ್ಯಕ್ತಪಡಿಸಿದರು.
ಆಲಿಕೆ ಸಭೆಗೆ ಬಹಿಷ್ಕಾರ
ಸಾರ್ವಜನಿಕ ಆಲಿಕೆ ಸಭೆಗೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಲ್ಲಿ ಆಸನ, ಪೆಂಡಾಲ್ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸಭೆಯಲ್ಲಿ ಸುಮಾರು 100 ಜನರಷ್ಟೇ ಭಾಗವಹಿಸಿದ್ದರು.
ಈ ಸಭೆಗೆಹೋಗುವ ವಿಚಾರವು ರಾಜಕೀಯ ಮುಖಂಡರ ವಾಕ್ಸಮರಕ್ಕೂಕಾರಣವಾಯಿತು. ಆಲಿಕೆ ಸಭೆಯು ತಟಸ್ಥ ಸ್ಥಳದಲ್ಲೇ ನಡೆಸಬೇಕು ಎಂದು ಕಾಂಗ್ರೆಸ್, ಜೆಡಿಎಸ್ ಮುಖಂಡರು ಒಂದಾಗಿ ಬಂದು ಕೈಗಾ ವಸತಿ ಸಂಕೀರ್ಣದ ಸಮೀಪ ರಸ್ತೆಯಲ್ಲಿ ಧರಣಿ ಕುಳಿತಿದ್ದರು. ಅವರೊಂದಿಗೆ ನೂರಾರು ಗ್ರಾಮಸ್ಥರೂಅಲ್ಲೇ ಉಳಿದು ಸಭೆಗೆ ಬಹಿಷ್ಕಾರ ಹಾಕಿದರು.
ಸ್ಥಳಕ್ಕೆ ಬಂದ ಶಾಸಕಿ ರೂಪಾಲಿ ನಾಯ್ಕ, ಅಲ್ಲಿದ್ದವರನ್ನು ಸಭೆಗೆ ಬರುವಂತೆ ಹೇಳಿದರು. ಸಭೆಯನ್ನು ಕೈಗಾ ವಸತಿ ಸಂಕೀರ್ಣದ ಆವರಣದಲ್ಲಿ ಹಮ್ಮಿಕೊಂಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಧರಣಿ ನಿರತರು, ‘ಸಭೆಯು ತಟಸ್ಥ ಸ್ಥಳದಲ್ಲೇ ನಡೆಯಬೇಕು’ ಎಂದು ಪಟ್ಟುಹಿಡಿದರು. ಇದು, ಎರಡೂ ತಂಡಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು.ಅಲ್ಲಿದ್ದಕೆಲವರುಶಾಸಕಿಗೆ ಧಿಕ್ಕಾರ ಕೂಗಿದರು. ಕೆಲ ಸಮಯದ ಬಳಿಕ ಶಾಸಕಿ ಸಭೆಗೆ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.