ADVERTISEMENT

ಕಾಲಾ ಕುಮಾರಸ್ವಾಮಿ ಹೇಳಿಕೆ: ಕ್ಷಮೆ ಯಾಚಿಸಿದ ಸಚಿವ ಜಮೀರ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 10:16 IST
Last Updated 12 ನವೆಂಬರ್ 2024, 10:16 IST
<div class="paragraphs"><p>ಜಮೀರ್ ಅಹಮ್ಮದ್ ಹಾಗೂ ಎಚ್.ಡಿ. ಕುಮಾರಸ್ವಾಮಿ</p></div>

ಜಮೀರ್ ಅಹಮ್ಮದ್ ಹಾಗೂ ಎಚ್.ಡಿ. ಕುಮಾರಸ್ವಾಮಿ

   

ಮೈಸೂರು: ಮೈಸೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ಕರಿಯ’ ಎಂದು ಜರಿದಿದ್ದ ವಸತಿ ಸಚಿವ ಬಿ.ಝಡ್‌. ಜಮೀರ್ ಅಹಮದ್‌ ಖಾನ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದರು.

ADVERTISEMENT

‘ನಾವಿಬ್ಬರೂ ಬಹಳ ಆತ್ಮೀಯರಾಗಿದ್ದು, ದಿನದ 24 ಗಂಟೆಯಲ್ಲಿ 14 ಗಂಟೆ ಜೊತೆಯಾಗಿಯೇ ಇರುತ್ತಿದ್ದೆವು. ಅವರನ್ನು ಕರಿಯಣ್ಣ ಎಂದು ಕರೆದದ್ದು ಇದೇ ಮೊದಲೇನಲ್ಲ. ಪ್ರೀತಿಯಿಂದ ಹಲವು ಸಲ ಕರೆದಿದ್ದೇನೆ. ಅವರೂ ನನ್ನನ್ನು ಕುಳ್ಳ ಎಂದು ಕರೆದಿದ್ದಾರೆ. ಆದರೆ ಚುನಾವಣೆ ಕಾರಣಕ್ಕೆ ಇದನ್ನು ವಿವಾದ ಮಾಡಲಾಗುತ್ತಿದೆ' ಎಂದರು.

'ಎಚ್‌.ಡಿ.ದೇವೇಗೌಡರನ್ನು ಹಣದಿಂದ ಕೊಂಡುಕೊಳ್ಳುತ್ತೇನೆ' ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ‘ದೇವೇಗೌಡರ ಕುಟುಂಬವನ್ನು ಯಾರಾದರೂ ಕೊಂಡುಕೊಳ್ಳಲು ಸಾಧ್ಯವೇ? ನನಗೆ ದೇವೇಗೌಡರ ಮೇಲೆ ಅಪಾರ ಗೌರವವಿದೆ. ಈ ಹಿಂದೆ ಚುನಾವಣೆಯಲ್ಲಿ ಕುಮಾರಸ್ವಾಮಿ, ನನಗೆ ಮುಸ್ಲಿಮರ ಮತಗಳು ಬೇಡ ಎಂದಿದ್ದರು. ಈಗ ದುಡ್ಡು ಕೊಟ್ಟು ಮತ ಖರೀದಿಗೆ ಮುಂದಾಗಿದ್ದಾರೆ. ಅದನ್ನು ಉಲ್ಲೇಖಿಸಿ ನಾನು ಹಾಗೆ ಹೇಳಿದ್ದೆ' ಎಂದು ಸ್ಪಷ್ಟನೆ ನೀಡಿದರು.

'ಬೇರೆ ರಾಜ್ಯಗಳ ಚುನಾವಣೆಗಾಗಿ ಕರ್ನಾಟಕದಲ್ಲಿ ‌ಕಾಂಗ್ರೆಸ್ ಹಣ ಸಂಗ್ರಹಿಸುತ್ತಿದೆ’ ಎಂಬ ಆರ್. ಅಶೋಕ
ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರಿಗೆ ಚುನಾವಣೆಯಲ್ಲಿ ಖರ್ಚು ಮಾಡಿ ಅಭ್ಯಾಸವಾಗಿದೆ. ಅದಕ್ಕಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಏನಾದರೂ ದಾಖಲೆ ಇದೆಯೇ’ ಎಂದು ಪ್ರಶ್ನಿಸಿದರು.

‘ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಕಚೇರಿಯು ಸ್ಪಷ್ಟನೆ ನೀಡಿದೆ’ ಎಂದರು.

ವಕ್ಫ್ ಕಮಿಟಿ ಮತದಾರರ ಸಭೆ- ಚುನಾವಣೆ ಚರ್ಚೆ

ಮೈಸೂರು: ರಾಜ್ಯ ವಕ್ಫ್‌ ಕಮಿಟಿ ಅಧ್ಯಕ್ಷ– ಉಪಾಧ್ಯಕ್ಷರ ಚುನಾವಣೆಯ ಸಲುವಾಗಿ, ವಸತಿ
ಸಚಿವ ಬಿ.ಝಡ್‌. ಜಮೀರ್ ಅಹಮದ್‌ ಖಾನ್ ನೇತೃತ್ವದಲ್ಲಿ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಕಮಿಟಿ ಮತದಾರರ ಸಭೆ ನಡೆಯಿತು.

ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಸೇರಿದಂತೆ ಸಮುದಾಯದ ಮುಖಂಡರು ನೇತೃತ್ವ ವಹಿಸಿದ್ದರು.

ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಮೈಸೂರು, ಮಂಡ್ಯ, ರಾಮನಗರ, ಮಡಿಕೇರಿ, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವಕ್ಫ್‌ ಮತದಾರರು ಪಾಲ್ಗೊಂಡಿದ್ದರು.

ಸಭೆ ಬಳಿಕ ಪ್ರತಿಕ್ರಿಯಿಸಿದ ಸಚಿವರು, ‘ನವೆಂಬರ್ 19ರಂದು ನಡೆಯಲಿರುವ ಚುನಾವಣೆ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಚುನಾವಣೆ ಬಗ್ಗೆ ಮಾತ್ರ ಪ್ರಚಾರ ಮಾಡುತ್ತಿದ್ದೇವೆ. ವಕ್ಫ್‌ ವಿವಾದದ ಕುರಿತು ಚರ್ಚೆ ನಡೆದಿಲ್ಲ’ ಎಂದರು.

ಜಮೀರ್‌ ವಜಾಕ್ಕೆ ಒಕ್ಕಲಿಗರ ಸಂಘ, ಸಭಾ ಒತ್ತಾಯ

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ನಿಂದಿಸಿರುವ  ವಸತಿ ಸಚಿವ ಜಮೀರ್‌ ಅಹ್ಮದ್‌ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘ, ಒಕ್ಕಲಿಗರ ಮಹಾಸಭಾ ಖಂಡಿಸಿವೆ.

‘ಕುಮಾರಸ್ವಾಮಿ ಅವರ ಬಣ್ಣದ ಬಗ್ಗೆ ಜಮೀರ್‌ ಅವರು ಆಡಿರುವ ಮಾತು ಅದು ಇಡೀ ಒಕ್ಕಲಿಗ ಜನಾಂಗಕ್ಕೆ, ರಾಜ್ಯದ ಜನರಿಗೆ ಮಾಡಿರುವ ಅವಹೇಳನ. ಇಂತಹ ಮಾತುಗಳು ಶೋಭೆ ತರುವುದಿಲ್ಲ. ಸಭ್ಯತೆಯ ಎಲ್ಲೆ ಮೀರಿ ಮಾತನಾಡುವ ವ್ಯಕ್ತಿ ಸಚಿವ ಸ್ಥಾನದಲ್ಲಿ ಮುಂದುವರಿಯಬಾರದು’ ಎಂದು ಸಂಘ ಹಾಗೂ ಸಭಾದ ಪದಾಧಿಕಾರಿಗಳು’ ಹೇಳಿದ್ದಾರೆ. 

‘ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಬಗ್ಗೆಯೂ ಲಘುವಾಗಿ ಮಾತನಾಡಿದ್ದಾರೆ. ರಾಜಕೀಯವಾಗಿ ಯಾರಿಗೂ ನೋವಾಗದಂತೆ ಟೀಕೆ-ಟಿಪ್ಪಣಿ ಮಾಡಲು ಅಭ್ಯಂತರವಿಲ್ಲ. ಆದರೆ, ವ್ಯಕ್ತಿಗತ, ಸಮಾಜದ ಹಿತಕ್ಕೆ ಧಕ್ಕೆಯಾಗುವಂತೆ ವರ್ಣದ ಬಗ್ಗೆ ನಿಂದನೆ ಅವರ ಘನತೆಗೆ ತಕ್ಕದಾಗಿರಲಿಲ್ಲ. ತಮ್ಮ ಹೇಳಿಕೆಯನ್ನು ಮಾಧ್ಯಮಗಳ ಮೂಲಕ ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ. ಒಕ್ಕಲಿಗ ಸಮಾಜ ಇಂತಹ ನಡೆಯನ್ನು ಸಹಿಸುವುದಿಲ್ಲ’ ಎಂದಿದ್ದಾರೆ.

‘ವಕ್ಫ್‌ಬೋರ್ಡ್‌ ಮೂಲಕ ಹಿಂದೂಗಳ ಭೂಮಿ ಕಬಳಿಸಲು ಯತ್ನಿಸುತ್ತಿರುವ ಸಚಿವ ಜಮೀರ್‌ ಇದೇ ರೀತಿ ಮಾತು ಮುಂದುವರಿಸಿದರೆ ಒಕ್ಕಲಿಗರು ಬೀದಿಗಿಳಿಯಬೇಕಾಗುತ್ತದೆ’ ಎಂದು ಮಹಾಸಭಾದ ಮುಖಂಡ ಎ.ಎಚ್‌. ಆನಂದ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.