ಧಾರವಾಡ: ಹಿರಿಯ ವಿಮರ್ಶಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ನಡೆಸಿದ ಆರೋಪಿಗಳು ತಮ್ಮ ಬೈಕ್ ಅನ್ನು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂಬುದು ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ.
ಇದಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳಾದ ಅಮೋಲ ಕಾಳೆ ಮತ್ತು ಪ್ರವೀಣ ಪ್ರಕಾಶ ಚತುರನನ್ನು ಇಲ್ಲಿನ ಕಲ್ಯಾಣ ನಗರದಲ್ಲಿರುವ ಡಾ. ಕಲಬುರ್ಗಿ ಮನೆ ಮತ್ತು ಕಿತ್ತೂರಿನಲ್ಲಿ ಬೈಕ್ ಬಿಟ್ಟು ಹೋಗಿದ್ದ ಎರಡೂ ಸ್ಥಳಗಳಿಗೆ ಬುಧವಾರ ಕರೆದೊಯ್ದು ಮಹಜರು ನಡೆಸಿದರು.
ಇಲ್ಲಿನ ಕಲ್ಯಾಣ ನಗರದಲ್ಲಿರುವ ಮನೆಯಲ್ಲಿ 2015ರ ಆ.30ರಂದು ಕಲಬುರ್ಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಕಾಳೆ ಮೇಲೆ ಯೋಜನೆ ರೂಪಿಸಿದ ಆರೋಪ ಇದ್ದರೆ, ಅವನನ್ನು ಬೈಕ್‌ನಲ್ಲಿ ಕರೆದೊಯ್ದ ಆರೋಪ ಚತುರನ ಮೇಲಿದೆ.
ಕೃತ್ಯ ನಡೆದ ಜಾಗದಿಂದ (ಮನೆ ಬಾಗಿಲು) ಗೇಟ್ ಹಾಗೂ ಗೇಟ್‌ನಿಂದ ನಿಲ್ಲಿಸಿದ್ದ ಬೈಕ್‌ಗೆ ಇದ್ದ ಅಂತರವನ್ನು ಅಧಿಕಾರಿಗಳು ದಾಖಲಿಸಿದರು. ತನಿಖಾ ತಂಡದಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳು ಇದ್ದರು. ಸ್ಥಳದಲ್ಲಿ ಛಾಯಾಚಿತ್ರ ತೆಗೆಯಲು ನಿರ್ಬಂಧಿಸಲಾಗಿತ್ತು.
ಉಮಾದೇವಿ ಕಲಬುರ್ಗಿ ಪ್ರತಿಕ್ರಿಯಿಸಿ, ‘ಎಸ್‌ಐಟಿ ತಂಡದವರು ಬಂದಿದ್ದು ಗೊತ್ತಾಗಿಲ್ಲ. ಅವರು ನನ್ನನ್ನು ಕರೆಯಲೂ ಇಲ್ಲ. ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ನಾವು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.