ADVERTISEMENT

ಬಂಡೂರಿ ನಾಲೆ ತಿರುವಿಗೂ ‘ವನ್ಯಜೀವಿ’ ರಗಳೆ

ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಹತ್ತು ಪ್ರಶ್ನೆ *ರಾಜ್ಯದಿಂದ ತೀಕ್ಷ್ಣ ಪ್ರತ್ಯುತ್ತರ

ಮಂಜುನಾಥ್ ಹೆಬ್ಬಾರ್‌
Published 24 ಅಕ್ಟೋಬರ್ 2024, 6:16 IST
Last Updated 24 ಅಕ್ಟೋಬರ್ 2024, 6:16 IST
<div class="paragraphs"><p>ಕಳಸಾ–ಬಂಡೂರಿ ಯೋಜನೆಯ ಕಾಮಗಾರಿ ನಡೆದಿರುವ ದೃಶ್ಯ</p></div>

ಕಳಸಾ–ಬಂಡೂರಿ ಯೋಜನೆಯ ಕಾಮಗಾರಿ ನಡೆದಿರುವ ದೃಶ್ಯ

   

(ಸಂಗ್ರಹ ಚಿತ್ರ)

ನವದೆಹಲಿ: ‘ಪ್ರಸ್ತಾವಿತ ಬಂಡೂರಿ ನಾಲಾ ತಿರುವು ಯೋಜನೆಯ 10 ಕಿ.ಮೀ. ವ್ಯಾಪ್ತಿಯಲ್ಲಿ ವನ್ಯಜೀವಿಧಾಮ ಹಾಗೂ ಸಂರಕ್ಷಿತ ಪ್ರದೇಶ ಇಲ್ಲ ಎಂದು ಕರ್ನಾಟಕ ಸರ್ಕಾರ ಪ್ರತಿಪಾದಿಸಿದೆ. ಆದರೆ, ಭೀಮಗಢ ವನ್ಯಜೀವಿಧಾಮದಿಂದ ನಾಲಾ ತಿರುವು ಪ್ರದೇಶ 1.44 ಕಿ.ಮೀ. ದೂರದಲ್ಲಿದೆ’ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ತಗಾದೆ ಎತ್ತಿದೆ.  

ADVERTISEMENT

ಮಹದಾಯಿ ಯೋಜನೆಯ ಭಾಗವಾದ ಬಂಡೂರಿ ನಾಲಾ ತಿರುವಿನ 10 ವಿಷಯಗಳ ಕುರಿತು ಪರಿಸರ ಸಚಿವಾಲಯ ಆಕ್ಷೇಪಣೆ ಎತ್ತಿದೆ. ಯೋಜನೆ ಹಾದು ಹೋಗುವ ಪ್ರದೇಶದಲ್ಲಿ ದಟ್ಟ ಅರಣ್ಯ ಇದೆ ಹಾಗೂ ಕಾಡುಪ್ರಾಣಿಗಳ ಸಂಚಾರ ವ್ಯಾಪಕವಾಗಿದೆ. ಹೀಗಾಗಿ, ಯೋಜನೆಯಿಂದ ವನ್ಯಜೀವಿಗಳ ಮೇಲಾಗುವ ಪರಿಣಾಮದ ಕುರಿತು ವನ್ಯಜೀವಿ ವಾರ್ಡನ್‌ ಅವರ ಅಭಿಪ್ರಾಯ ಪಡೆದು ಪ್ರತಿಕ್ರಿಯೆ ನೀಡಬೇಕು’ ಎಂದು ನಿರ್ದೇಶನ ನೀಡಿದೆ. ಸಚಿವಾಲಯದ ತಕರಾರಿಗೆ ರಾಜ್ಯ ಸರ್ಕಾರವು 104 ಪುಟಗಳ ತೀಕ್ಷ್ಣ ಪ್ರತ್ಯುತ್ತರ ನೀಡಿದೆ.

‘ಈ ಯೋಜನೆಯು ಯಾವುದೇ ಸಂರಕ್ಷಿತ ಪ್ರದೇಶ ಅಥವಾ ಹುಲಿ ಕಾರಿಡಾರ್ ವ್ಯಾಪ್ತಿಯಲ್ಲಿ ಬರುವುದಿಲ್ಲ. ಭೀಮಗಢ ವನ್ಯಜೀವಿಧಾಮದಿಂದ 1.44 ಕಿ.ಮೀ ಹಾಗೂ ಅದರ ಪರಿಸರ ಸೂಕ್ಷ್ಮ ಪ್ರದೇಶದಿಂದ 0.29 ಕಿ.ಮೀ ದೂರದಲ್ಲಿ ಈ ಯೋಜನಾ ಪ್ರದೇಶ ಇದ್ದರೂ ಕಾಳಿ ಹುಲಿ ಅಭಯಾರಣ್ಯ ಹಾಗೂ ರಾಧಾನಗರಿ ವನ್ಯಜೀವಿಧಾಮದ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವುದಿಲ್ಲ. ಈ ನಾಲೆಯು ಬೇಸಿಗೆಯಲ್ಲಿ ಆರಿ ಹೋಗುತ್ತದೆ. ನಾಲಾ ತಿರುವಿನ ಮೂಲಕ ಮಳೆಗಾಲದಲ್ಲಷ್ಟೇ ಈ ನೀರು ಬಳಸಲಾಗುತ್ತದೆ ಹಾಗೂ ಉಳಿದ ಅವಧಿಯಲ್ಲಿ ವನ್ಯಜೀವಿಗಳ ಬಳಕೆ ಮೀಸಲಿಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. 

ಮಹದಾಯಿ ಜಲವಿವಾದ ಕುರಿತು ಸುಪ್ರೀಂ ಕೋರ್ಟ್ ಹಾಗೂ ಇತರ ನ್ಯಾಯಾಲಯಗಳಲ್ಲಿರುವ ಪ್ರಕರಣಗಳು ಹಾಗೂ ಅದರಿಂದ ಈ ಯೋಜನೆಯ ಮೇಲಾಗುವ ಪರಿಣಾಮದ ಕುರಿತು ವಿವರಣೆ ನೀಡುವಂತೆ ಸಚಿವಾಲಯ ಸೂಚಿಸಿದೆ. 

‘ಕಳಸಾ–ಬಂಡೂರಿ ಯೋಜನೆ ಕೈಗೆತ್ತಿಕೊಳ್ಳದಂತೆ ಗೋವಾ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಆದೇಶ ಹೊರಡಿಸಿದ್ದಾರೆ. ಕರ್ನಾಟಕದ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳುವ ಈ ಯೋಜನೆಗೆ ತಡೆ ಆದೇಶ ನೀಡುವ ಅಧಿಕಾರ ಅವರಿಗೆ ಇಲ್ಲ ಎಂಬುದನ್ನು ರಾಜ್ಯ ಸ್ಪಷ್ಟಪಡಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ದೂರು ನೀಡಿದೆ. ಕಳಸಾ–ಬಂಡೂರಿ ಯೋಜನೆಗೆ ಯಾವುದೇ ತಡೆಯಾಜ್ಞೆ ಇಲ್ಲ’ ಎಂದು ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಿದೆ.

ಖಾನಾಪುರ ತಾಲ್ಲೂಕಿನಲ್ಲಿ ಹಸಿರು ಹೊದಿಕೆ ಇರುವ 25 ಹೆಕ್ಟೇರ್‌ ಪ್ರದೇಶವನ್ನು ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಗುರುತಿಸಲಾಗಿದೆ. ಇಲ್ಲಿ ಗಿಡಗಳನ್ನು ನೆಡಲು ಸಾಧ್ಯವೇ ಎಂದು ಸಚಿವಾಲಯ ಪ್ರಶ್ನಿಸಿದೆ. ‘ಅರಣ್ಯ ಪ್ರದೇಶದೊಳಗೆ ‘ರೈಸಿಂಗ್‌ ಮೇನ್‌’ ಅಳವಡಿಸುವ ಅಗತ್ಯವೇನಿದೆ’ ಎಂದೂ ಕೇಳಿದೆ. ಅಣೆಕಟ್ಟೆ ಹಾಗೂ ಸ್ಟಿಲ್ಲಿಂಗ್‌ ಬೇಸಿನ್‌ (ವೇಗವಾಗಿ ನೀರು ಹರಿಯುವುದನ್ನು ತಡೆಯಲು ನಿರ್ಮಿಸುವ ತಗ್ಗು ಪ್ರದೇಶ) ಎರಡನ್ನೂ ನಿರ್ಮಿಸುವ ಬಗ್ಗೆಯೂ ವಿವರಣೆ ನೀಡಬೇಕು ಎಂದು ಸೂಚಿಸಿದೆ. 

ಅರಣ್ಯ ತಕರಾರಿಗೆ ರಾಜ್ಯದ ಜವಾಬು

ಕೇಂದ್ರ: ಬಂಡೂರಿ ನಾಲಾ ತಿರುವಿಗೆ 22.81 ಹೆಕ್ಟೇರ್‌ (56 ಎಕರೆ) ಅರಣ್ಯ ಬಳಸಲಾಗುತ್ತದೆ ಎಂದು ವಿಸ್ತೃತ ಯೋಜನಾ ವರದಿಯಲ್ಲಿ ತಿಳಿಸಲಾಗಿತ್ತು. ಆದರೆ, 28.44 ಹೆಕ್ಟೇರ್‌ (71 ಎಕರೆ) ಅರಣ್ಯ ಬಳಕೆಗೆ ಅನುಮೋದನೆ ಕೋರಿ ರಾಜ್ಯ ಪ್ರಸ್ತಾವನೆ ಸಲ್ಲಿಸಿದೆ. ಈ ವ್ಯತ್ಯಾಸ ಏಕೆ? 

ರಾಜ್ಯ: 22.81 ಹೆಕ್ಟೇರ್ ಅರಣ್ಯ ಬಳಸಲು ಡಿಪಿಆರ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಶೆಡೆಗಲಿ ಮೀಸಲು ಅರಣ್ಯದ ಕೆಲವೊಂದು ಪ್ರದೇಶಗಳನ್ನು ಕೃಷಿ ಉದ್ದೇಶಕ್ಕಾಗಿ ಬಿಟ್ಟುಕೊಡಲಾಗಿತ್ತು. ಆದರೆ, ಡಿನೋಟಿಫಿಕೇಷನ್‌ ಆಗಿರುವ ಕುರಿತ ದಾಖಲೆಗಳು ಸಿಕ್ಕಿಲ್ಲ. ಹಾಗಾಗಿ, 6 ಹೆಕ್ಟೇರ್ ಪ್ರದೇಶವನ್ನು ಅರಣ್ಯವೆಂದೇ ದಾಖಲಿಸಿ ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ. 

ಕೇಂದ್ರ: ಅರಣ್ಯ ಬಳಕೆ ಪ್ರಮಾಣ ಕಡಿಮೆ ಮಾಡಲು ಎಲೆಕ್ಟ್ರಿಕ್‌ ಟವರ್ ಅನ್ನು ಅರಣ್ಯೇತರ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು. 

ರಾಜ್ಯ: ವಾಸ್ತವದಲ್ಲಿ, ಎಲೆಕ್ಟ್ರಿಕ್‌ ಟವರ್ ಅನ್ನು ಅರಣ್ಯೇತರ ಪ್ರದೇಶದಲ್ಲಿ ಅಳವಡಿಸಲಾಗುತ್ತದೆ. ಈ ಪ್ರದೇಶವು ಕೃಷಿ ಭೂಮಿ ಎಂದು ಕಂದಾಯ ಹಾಗೂ ಅರಣ್ಯ ಇಲಾಖೆಯ ದಾಖಲೆಗಳಲ್ಲಿ ಇದೆ. ಆದರೆ, ಡಿನೋಟಿಫಿಕೇಷನ್‌ ದಾಖಲೆ ಲಭ್ಯವಿಲ್ಲದ ಕಾರಣ ಪ್ರಸ್ತಾವನೆಯಲ್ಲಿ ಅರಣ್ಯ ಪ್ರದೇಶವೆಂದು ಉಲ್ಲೇಖಿಸಲಾಗಿದೆ. 

ಕೇಂದ್ರ: ಭೀಮಗಢ ವನ್ಯಜೀವಿ ಧಾಮಕ್ಕೆ ಕೆಲವೊಂದು ಹಳ್ಳಿಗಳ ಸೇರ್ಪಡೆ, ಮಾನವ–ಪ್ರಾಣಿ ಸಂಘರ್ಷ ತಡೆಗೆ ಉಪಕ್ರಮ ಸೇರಿದಂತೆ ಕೆಲವೊಂದು ಶಿಫಾರಸುಗಳನ್ನು ಡಿಸಿಎಫ್‌ (ಉಪ ಅರಣ್ಯ ಸಂರಕ್ಷಣಾಧಿಕಾರಿ) ಮಾಡಿದ್ದರು. ಈ ಬಗ್ಗೆ ರಾಜ್ಯದ ನಿಲುವೇನು? 

ರಾಜ್ಯ: ಪ್ರಸ್ತಾವಿತ ನೀರಾವರಿ ಯೋಜನೆಗೂ ಹಳ್ಳಿಗಳನ್ನು ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಸೇರಿಸುವ ವಿಷಯಕ್ಕೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಸಮಯದಲ್ಲಿ ಅಗತ್ಯ ನಿರ್ಧಾರ ಕೈಗೊಳ್ಳಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.