ನವದೆಹಲಿ: ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ
ತೆಗೆದುಕೊಂಡ ಸುಪ್ರೀಂ ಕೋರ್ಟ್, ‘ತನಿಖೆಯಲ್ಲಿ ಪ್ರಗತಿಯನ್ನೇ ಸಾಧಿಸದೇ ಎಲ್ಲರನ್ನೂ ಮೂರ್ಖರನ್ನಾಗಿ ಮಾಡಲಾಗುತ್ತಿದೆ’ ಎಂದು ಅಭಿಪ್ರಾಯಪಟ್ಟಿತು.
ಕಲಬುರ್ಗಿ ಅವರ ಪತ್ನಿ ಉಮಾದೇವಿಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್.ಎಫ್. ನರೀಮನ್ ಹಾಗೂ ನವೀನ್ ಸಿನ್ಹಾ
ಅವರಿದ್ದ ಪೀಠ, ಇದುವರೆಗೆ ನಡೆದಿರುವ ತನಿಖೆಯ ವಿವರ ಒಳಗೊಂಡ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.
‘ನೀವು ಸಲ್ಲಿಸಲಿರುವ ವರದಿಯನ್ನು ಅವಲೋಕಿಸಲಾಗುತ್ತದೆ. ಒಂದೊಮ್ಮೆ ತನಿಖೆಯಲ್ಲಿ ಪ್ರಗತಿ ಸಾಧಿಸದಿದ್ದರೆ ತನಿಖೆಯ ಉಸ್ತುವಾರಿಯನ್ನು ನೋಡಿಕೊಳ್ಳುವಂತೆ ಬಾಂಬೆ ಹೈಕೋರ್ಟ್‌ಗೆ ಸೂಚಿಸುವುದು ಅನಿವಾರ್ಯವಾಗಲಿದೆ’ ಎಂದು ನ್ಯಾಯಪೀಠ ಸುಳಿವು ನೀಡಿತು.
‘ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸಿಯೇ ಇಲ್ಲ. ಇದುವರೆಗೆ ನೀವು ಏನು ಮಾಡಿದ್ದೀರಿ ಎಂಬುದನ್ನು ಅವಲೋಕಿಸಿದರೆ ಏನೂ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ’ ಎಂದು ರಾಜ್ಯ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, ‘ತನಿಖೆ ಪೂರ್ಣಗೊಳ್ಳಲು ಇನ್ನೂ ಎಷ್ಟು ಕಾಲಾವಕಾಶ ಅಗತ್ಯವಿದೆ, ಪ್ರಕರಣದ ಕುರಿತು ಆದೇಶ ಹೊರಡಿಸಬೇಕೇ’ ಎಂದು ಪ್ರಶ್ನಿಸಿತು.
ತನಿಖೆ ಪೂರ್ಣಗೊಳ್ಳಲು ಇನ್ನೂ ಎಷ್ಟು ಕಾಲಾವಕಾಶ ಬೇಕಾಗಬಹುದು ಎಂಬ ಮಾಹಿತಿ ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಅಡ್ವೋಕೇಟ್ ಜನರಲ್ ದೇವದತ್ತ ಕಾಮತ್ ತಿಳಿಸುತ್ತಿದ್ದಂತೆಯೇ, ‘ನೀವುಮಾಹಿತಿ ನೀಡಿ, ಇದೇ ರೀತಿಯ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್‌ಗೆ ನಾವು ಈ ಪ್ರಕರಣವನ್ನೂವರ್ಗಾಯಿಸುತ್ತೇವೆ’ ಎಂದು ಪೀಠ ಎಚ್ಚರಿಸಿತು.
ಪ್ರಕರಣದ ತನಿಖೆಯ ಉಸ್ತುವಾರಿಯನ್ನು ಬಾಂಬೆ ಹೈಕೋರ್ಟ್‌ಗೆ ವರ್ಗಾಯಿಸುವುದು ಸೂಕ್ತ ಎಂದು ಅರ್ಜಿದಾರರ ಪರ ವಕೀಲರೂ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.