ಬೆಂಗಳೂರು: ದಾಂಡೇಲಿಯ ಕಾಳಿ ಹುಲಿ ಯೋಜನೆ ವ್ಯಾಪ್ತಿಯ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆಯವರು ನಿಯಮ ಉಲ್ಲಂಘಿಸಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ನಡೆಸಿರುವುದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನಡೆಸಿದ ತನಿಖೆಯಿಂದ ದೃಢಪಟ್ಟಿದೆ.
ಈ ಕುರಿತು ಶಿರಸಿಯ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು (ಡಿಸಿಎಫ್) ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ಎಪಿಸಿಸಿಎಫ್) ವರದಿ ಸಲ್ಲಿಸಿದ್ದಾರೆ. ಕಾಮಗಾರಿ ವೇಳೆ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ ಆಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
2018ರ ನವೆಂಬರ್ 21ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ, ‘ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ರಸ್ತೆ’ ಶೀರ್ಷಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು. ಲೊಕೋಪಯೋಗಿ ಇಲಾಖೆ, ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಸಂರಕ್ಷಿತ ಪ್ರದೇಶದಲ್ಲಿ ₹ 100 ಕೋಟಿಗೂ ಅಧಿಕ ಮೊತ್ತದ ಕಾಮಗಾರಿ ನಡೆಸುತ್ತಿರುವ ಬಗ್ಗೆ ವರದಿಯಲ್ಲಿ ಬೆಳಕು ಚೆಲ್ಲಲಾಗಿತ್ತು. 61 ಕಾಮಗಾರಿಗಳ ಪೈಕಿ ಪರಿಸರಕ್ಕೆ ಅತಿ ಹೆಚ್ಚು ಧಕ್ಕೆ ಉಂಟುಮಾಡುವ 10 ಕಾಮಗಾರಿಗಳನ್ನು ಪಟ್ಟಿ ಮಾಡಲಾಗಿತ್ತು.
ಈ ವರದಿ ಪ್ರಕಟವಾದ ಬಳಿಕ ಅಣಶಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಶಿವಾನಂದ ತೋಡ್ಕರ್ ಅವರು ಶಿರಸಿ ಅರಣ್ಯ ಸಂಚಾರಿ ದಳದ ಡಿಸಿಎಫ್‌ಗೆ ವಸ್ತುಸ್ಥಿತಿ ಕುರಿತು 2018ರ ಡಿಸೆಂಬರ್‌ನಲ್ಲಿ ವರದಿ ಸಲ್ಲಿಸಿದ್ದರು. ಯೋಜನೆಯ ಕೆಲವು ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಕಾಮಗಾರಿ ನಡೆದಿದ್ದರೂ, ಅವರು ವ್ಯತಿರಿಕ್ತ ವರದಿ ನೀಡಿದ್ದರು. ಕೆಲವು ಕಾಮಗಾರಿಗಳಲ್ಲಿ ನಡೆದಿರುವ ಉಲ್ಲಂಘನೆಯನ್ನು ಎಸಿಎಫ್ ಮುಚ್ಚಿಟ್ಟಿರುವುದು ಕೂಡಾ ಡಿಸಿಎಫ್ ಅವರ ವರದಿಯಿಂದ ಸಾಬೀತಾಗಿದೆ.
‘ಶಿವಪುರ ಪಂಚಲಿಂಗೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುಮತಿ ನೀಡಿಲ್ಲ. ಇಲ್ಲಿ 1972 ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ ಆಗಿಲ್ಲ. ಉಳವಿ ಪಂಚಲಿಂಗೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿಪಡಿಸಲು ಸ್ಥಳೀಯರಿಂದ ಹಾಗೂ ರಾಜಕಾರಣಿಗಳಿಂದ ಒತ್ತಡವಿದ್ದರೂ ಈ ಕಾಮಗಾರಿ ನಡೆಸುವುದಕ್ಕೆ ಅವಕಾಶ ನೀಡಿಲ್ಲ’ ಎಂದು ಎಸಿಎಫ್ ಅವರು ವರದಿಯಲ್ಲಿ ತಿಳಿಸಿದ್ದರು.
ಆದರೆ, ಡಿಸಿಎಫ್ ಅವರು ಎಪಿಸಿಸಿಎಫ್‌ಗೆ ಸಲ್ಲಿಸಿದ ವರದಿಯಲ್ಲಿ ಈ ಎರಡೂ ಕಾಮಗಾರಿಗಳಿಂದಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ. ‘ಶಿವಪುರ ಪಂಚಲಿಂಗೇಶ್ವರ ದೇವಸ್ಥಾನ ರಸ್ತೆಗೆ ಸುಮಾರು 300 ಮೀ. ಉದ್ದಕ್ಕೆ ಜಲ್ಲಿ ಹಾಕಿ ಅಭಿವೃದ್ಧಿಗೊಳಿಸುವ ಮೂಲಕ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಉಳವಿ ಪಂಚಲಿಂಗೇಶ್ವರ ದೇವಸ್ಥಾನ ರಸ್ತೆಯಲ್ಲೂ ಸುಮಾರು 4 ಮೀ ಉದ್ದಕ್ಕೆ ಜಲ್ಲಿಕಲ್ಲನ್ನು ಹಾಕಿ ಅಭಿವೃದ್ಧಿ ನಡೆಸಲಾಗಿದೆ’ ಎಂದು ಅವರು ಒಪ್ಪಿಕೊಂಡಿದ್ದಾರೆ.
ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸುವುದಕ್ಕೆ ಅನುವು ಮಾಡಿಕೊಟ್ಟ ಎಸಿಎಫ್, ವಲಯ ರಕ್ಷಣಾಧಿಕಾರಿಗಳು ಹಾಗೂ ಕಾಳಿ ಹುಲಿ ಯೋಜನೆಯ ನಿರ್ದೇಶಕರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
‘ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಡ’
ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆಯೇ ಲೋಕೋಪಯೋಗಿ ಇಲಾಖೆಯವರು ಕಾಮಗಾರಿ ನಡೆಸಿರುವ ಸಂಬಂಧ ಎಂಟು ಎಫ್‌ಐಆರ್ ದಾಖಲಿಸಿರುವುದನ್ನು ಅಣಶಿ ಉಪವಿಭಾಗದ ಎಸಿಎಫ್ ಅವರು ವರದಿಯಲ್ಲಿ ಉಲ್ಲೇಖಿಸಿದ್ದರು. ‘2016–17ನೇ ಸಾಲಿನಲ್ಲಿ ಈ ಕಾಮಗಾರಿಗಳು ಆರಂಭವಾಗಿದ್ದವು. ಆಗ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗಿನ ವಲಯ ಅರಣ್ಯಾಧಿಕಾರಿಗಳಿಗೆ ಹಾಗೂ ನನಗೆ ಕಾಮಗಾರಿ ಪೂರ್ಣಗೊಳಿಸಲು ಒತ್ತಡ ಬರುತ್ತಿವೆ’ ಎಂದೂ ಅವರು ವರದಿಯಲ್ಲಿ ತಿಳಿಸಿದ್ದರು.
‘ಉಲ್ಲಂಘನೆ ವಿರುದ್ಧ ಕ್ರಮ’
ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವ ಮುನ್ನ ರಾಜ್ಯ ವನ್ಯಜೀವಿ ಮಂಡಳಿ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿ, ರಾಷ್ಟ್ರೀಯ ಹುಲಿ ಸಂಕ್ಷಣಾ ಪ್ರಾಧಿಕಾರ ಹಾಗೂ ಮುಖ್ಯ ವನ್ಯಜೀವಿ ವಾರ್ಡನ್ ಅವರಿಂದ ಅನುಮತಿ ಪಡೆಯುವಂತೆ ವಲಯ ಅರಣ್ಯಾಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದರು. ಅನುಮತಿ ಪಡೆಯದೆಯೇ ಕೈಗೊಂಡ ಕಾಮಗಾರಿಗಳನ್ನು ವಲಯ ಅರಣ್ಯಾಧಿಕಾರಿಗಳು ತಡೆದು, 1972ರ ವನ್ಯಜೀವಿ ಕಾಯ್ದೆಯ ಸೆಕ್ಷನ್ 29ರನ್ವಯ ಕ್ರಮ ಕೈಗೊಂಡಿದ್ದಾರೆ ಎಂದು ಶಿರಸಿ ಅರಣ್ಯ ಸಂಚಾರಿ ದಳದ ಡಿಸಿಎಫ್ ಅವರು ಎಪಿಸಿಸಿಎಫ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.