ADVERTISEMENT

ಗಂಜೀಫಾ ರಘುಪತಿ ಭಟ್ಟರಿಗೆ ‘ಕಾಳಿದಾಸ ಸಮ್ಮಾನ್’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 16:08 IST
Last Updated 13 ನವೆಂಬರ್ 2024, 16:08 IST
ಮಧ್ಯಪ್ರದೇಶದ ಉಜ್ಜಯಿನಿಯ ಕಾಳಿದಾಸ ಸಂಸ್ಕೃತ ಅಕಾಡೆಮಿಯಲ್ಲಿ ಮಂಗಳವಾರ ನಡೆದ 66ನೇ ಅಖಿಲ ಭಾರತ ಕಾಳಿದಾಸ ಆಚರಣೆ ಸಮಾರಂಭದಲ್ಲಿ ಮೈಸೂರಿನ ವರ್ಣಚಿತ್ರಕಾರ ಗಂಜೀಫಾ ರಘುಪತಿ ಭಟ್ಟ ಅವರಿಗೆ ಪ್ರತಿಷ್ಠಿತ ಕಾಳಿದಾಸ ಸಮ್ಮಾನ್‌ ಪ್ರಶಸ್ತಿಯನ್ನು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಪ್ರದಾನ ಮಾಡಿದರು
ಮಧ್ಯಪ್ರದೇಶದ ಉಜ್ಜಯಿನಿಯ ಕಾಳಿದಾಸ ಸಂಸ್ಕೃತ ಅಕಾಡೆಮಿಯಲ್ಲಿ ಮಂಗಳವಾರ ನಡೆದ 66ನೇ ಅಖಿಲ ಭಾರತ ಕಾಳಿದಾಸ ಆಚರಣೆ ಸಮಾರಂಭದಲ್ಲಿ ಮೈಸೂರಿನ ವರ್ಣಚಿತ್ರಕಾರ ಗಂಜೀಫಾ ರಘುಪತಿ ಭಟ್ಟ ಅವರಿಗೆ ಪ್ರತಿಷ್ಠಿತ ಕಾಳಿದಾಸ ಸಮ್ಮಾನ್‌ ಪ್ರಶಸ್ತಿಯನ್ನು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಪ್ರದಾನ ಮಾಡಿದರು   

ಬೆಂಗಳೂರು: ಭಾರತೀಯ ಸಂಸ್ಕೃತಿ ಮತ್ತು ಕಲೆಯಲ್ಲಿ ಜೀವಮಾನ ಸಾಧನೆಗಾಗಿ ಮಧ್ಯಪ್ರದೇಶ ಸರ್ಕಾರ ಕೊಡಮಾಡುವ 2023ನೇ ಸಾಲಿನ ‘ಕಾಳಿದಾಸ ಸಮ್ಮಾನ್’ ಪ್ರಶಸ್ತಿಯನ್ನು ಮೈಸೂರಿನ ವರ್ಣಚಿತ್ರಕಾರ ಗಂಜೀಫಾ ರಘುಪತಿ ಭಟ್ಟ ಅವರಿಗೆ ಮಧ್ಯಪ್ರದೇಶದ ಉಜ್ಜಯಿನಿಯ ಕಾಳಿದಾಸ ಸಂಸ್ಕೃತ ಅಕಾಡೆಮಿಯಲ್ಲಿ ಮಂಗಳವಾರ ಉಪರಾಷ್ಟ್ರಪತಿ ಜಗದೀಪ್ ಧನಕರ್ ಪ್ರದಾನ ಮಾಡಿದರು. 

66ನೇ ಅಖಿಲ ಭಾರತ ಕಾಳಿದಾಸ ದಿನಾಚರಣೆ ಅಂಗವಾಗಿ ಕಲೆ, ಸಂಗೀತ, ನೃತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ನೀಡಿದ ಕಲಾವಿದರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ರಘುಪತಿ ಭಟ್ (2023) ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ (ಕಲೆ) ನೀಡಲಾಯಿತು. ಪ್ರಶಸ್ತಿಯು ₹5 ಲಕ್ಷ ನಗದು, ಶಾಲು ಹಾಗೂ ಫಲಕವನ್ನು ಒಳಗೊಂಡಿದೆ.

ಮೈಸೂರಿನ ಲಕ್ಷಣ ಶಾಸ್ತ್ರದ ಅನ್ವಯ ಚಿತ್ರ ರಚಿಸುವಲ್ಲಿ ಪರಿಣತರಾಗಿರುವ ಗಂಜೀಫಾ ರಘುಪತಿ ಭಟ್ಟ ಅವರು, ಅಳಿವಿನಂಚಿನಲ್ಲಿದ್ದ ಗಂಜೀಫಾ ಚಿತ್ರಕಲೆ ಹಾಗೂ ಕರಾವಳಿ ಭಾಗದ ಕಾವಿ ಕಲೆಯನ್ನು ಪುನರುಜ್ಜೀವನಗೊಳಿಸುವ ಮೂಲಕ ಹೆಚ್ಚು ಪ್ರಸಿದ್ಧರು. ಭಟ್ಟರು, ರಾಷ್ಟ್ರಪತಿ ಶಂಕರ್‌ ದಯಾಳ್‌ ಶರ್ಮ ಅವರಿಂದ 1993ರಲ್ಲಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದರು.

ADVERTISEMENT

ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯಿ ಪಟೇಲ್ ವಹಿಸಿದ್ದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್, ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಸಿಂಗ್ ಲೋಧಿ, ಉದ್ಯೋಗ ಇಲಾಖೆ ಸಚಿವ ಗೌತಮ್ ಟೆಟ್ವಾಲ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.