ಶಿವಮೊಗ್ಗ: ಜಗತ್ತಿನಾದ್ಯಂತ ಕಾಳಿಂಗ ಸರ್ಪದ ಒಂದೇ ಪ್ರಭೇದ ಇಲ್ಲ. ಬದಲಿಗೆ ನಾಲ್ಕುಪ್ರಭೇದಗಳಿವೆ ಎಂಬುದನ್ನು ಇಲ್ಲಿನ ಆಗುಂಬೆಯ ವನ್ಯಜೀವಿ, ಉರಗ ತಜ್ಞರ ತಂಡ ಪತ್ತೆ ಮಾಡಿದೆ. ಅದರಲ್ಲಿ ದಕ್ಷಿಣ ಭಾರತದಲ್ಲಿ ಕಾಣಸಿಗುವ ಪ್ರಭೇದಕ್ಕೆ ಈ ಭಾಗದಲ್ಲಿ ಬಳಕೆಯಲ್ಲಿರುವ ‘ಕಾಳಿಂಗ’ ಎಂಬ ಹೆಸರನ್ನೇ ವೈಜ್ಞಾನಿಕವಾಗಿ ನಾಮಕರಣ ಮಾಡಿದೆ.
‘ದಕ್ಷಿಣ ಭಾರತದ ಪಶ್ಚಿಮ ಹಾಗೂ ಪೂರ್ವ ಘಟ್ಟ ಶ್ರೇಣಿಗಳಲ್ಲಿ ಕಾಣಸಿಗುವ ಕಾಳಿಂಗ ಸರ್ಪದ ಪ್ರಭೇದಕ್ಕೆ ಇನ್ನು ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಒಪಿಪಿಗಸ್ ಕಾಳಿಂಗ’ ಎಂದೇ ಸಂಬೋಧಿಸಲಾಗುತ್ತದೆ’ ಎಂದು ಉರಗ ತಜ್ಞ ಡಾ.ಪಿ.ಗೌರಿಶಂಕರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಉರಗ ತಜ್ಞ ಕ್ಯಾಂಟರ್ 1836ರಲ್ಲಿ ಈ ಉರಗ ದೈತ್ಯನ ಪ್ರಭೇದವನ್ನು ಮೊದಲ ಬಾರಿಗೆ ಗುರುತಿಸಿದ್ದರು. ಆಗಿನಿಂದ ಅದಕ್ಕೆ ಒಪಿಪಿಗಸ್ ಅನ್ಹಾ (Ophiophagus hannah) ಎಂಬ ವೈಜ್ಞಾನಿಕ ಹೆಸರು ಇದೆ. ಜಗತ್ತಿನಲ್ಲಿ ಒಂದೇ ಪ್ರಭೇದದ ಕಾಳಿಂಗ ಸರ್ಪ ಮಾತ್ರ ಇದೆ ಎಂದೇ ಆಗಿನಿಂದಲೂ ನಂಬಲಾಗಿತ್ತು’ ಎಂದು ಹೇಳಿದರು.
‘185 ವರ್ಷಗಳ ನಂತರ ಕಾಳಿಂಗ ಸರ್ಪಗಳ ನಾಲ್ಕು ಪ್ರಭೇದ ಇರುವುದು ಪತ್ತೆಯಾಗಿದೆ. ಇದಕ್ಕಾಗಿ 10 ವರ್ಷಗಳ ಕಾಲ ಕ್ಷೇತ್ರ ಅಧ್ಯಯನ ನಡೆಸಿದ್ದೇವೆ. ಡಿಎನ್‌ಎ ಪರೀಕ್ಷೆ ಹಾಗೂ ಅವುಗಳ ದೇಹದ ಮೇಲಿನ ಪಟ್ಟೆಗಳ ನೆರವು ಪಡೆದಿದ್ದೇವೆ’ ಎಂದು ಅವರು ತಿಳಿಸಿದರು.
ದಕ್ಷಿಣ ಭಾರತದ ಪಶ್ಚಿಮ ಹಾಗೂ ಪೂರ್ವ ಘಟ್ಟಶ್ರೇಣಿ, ಅಂಡಮಾನ್ ದ್ವೀಪ ಸಮೂಹದಲ್ಲಿ ಕಾಳಿಂಗದ ಒಂದು ಪ್ರಭೇದ ಕಾಣಸಿಕ್ಕಿದೆ. ಉತ್ತರ ಭಾರತದ ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಮತ್ತೊಂದು, ಈಶಾನ್ಯ ಭಾರತ ಹಾಗೂ ದಕ್ಷಿಣ ಚೀನಾ ಭಾಗದಲ್ಲಿ ಮೂರನೇ ಪ್ರಭೇದ ಹಾಗೂ ಮ್ಯಾನ್ಮಾರ್, ಥಾಯ್ಲೆಂಡ್, ವಿಯಟ್ನಾಂ, ಮಲೇಷ್ಯಾ, ಸುಮಾತ್ರಾ, ಬೊರ್ನಿಯೊ, ಜಾವಾ, ಬಾಲಿ ದ್ವೀಪ ಸಮೂಹ, ಫಿಲಿಪ್ಪೀನ್ಸ್ ಭಾಗದಲ್ಲಿ ಕಾಳಿಂಗದ ನಾಲ್ಕನೇ ಪ್ರಭೇದ ಕಾಣಸಿಕ್ಕಿದೆ ಎಂದು ವಿವರಿಸಿದರು.
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ ಕಾಳಿಂಗ ಮನೆ (ಕೆಸಿಆರ್‌ಇ–ಕಾಳಿಂಗ ಸೆಂಟರ್ ಫಾರ್ ರೇನ್ ಫಾರೆಸ್ಟ್ ಇಕಾಲಜಿ) ಸ್ಥಾಪಿಸಿರುವ ಗೌರಿಶಂಕರ್ ಕಾಳಿಂಗ ಸರ್ಪಗಳ ರಕ್ಷಣೆ ಹಾಗೂ ಸಂಶೋಧನೆಯಲ್ಲಿ ತೊಡಗಿದ್ದಾರೆ.
ಡಾ.ಗೌರಿಶಂಕರ್ ನೇತೃತ್ವದ ಸಂಶೋಧನಾ ತಂಡದಲ್ಲಿ ಪ್ರಿಯಾಂಕಾ ಸ್ವಾಮಿ, ಡಾ.ಎಸ್.ಆರ್.ಗಣೇಶ್, ಡಾ.ಎಸ್.ಪಿ.ವಿಜಯಕುಮಾರ್, ರಿನೋನ್ ವಿಲಿಯಮ್ಸ್ ಹಾಗೂ ಪಿ.ಪ್ರಶಾಂತ್ ಕೆಲಸ ಮಾಡಿದ್ದಾರೆ.
ಈ ಹಿಂದೆ ಕಾಳಿಂಗಕ್ಕೆ ವೈಜ್ಞಾನಿಕವಾಗಿ ಲ್ಯಾಟಿನ್ ಗ್ರೀಕ್ ಭಾಷೆಯ ಹೆಸರು ಕೊಡಲಾಗಿತ್ತು. ಆದರೆ ನಮ್ಮ ತಂಡ ಇಲ್ಲಿನ ಪ್ರಭೇದಕ್ಕೆ ‘ಕಾಳಿಂಗ‘ ಎಂಬ ಹೆಸರನ್ನೇ ಕೊಟ್ಟಿದೆ. ಆ ಹೆಸರಿಗೆ ಜಾಗತಿಕವಾಗಿ ಮನ್ನಣೆ ದೊರೆತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಡಾ.ಪಿ.ಗೌರಿಶಂಕರ್ ವನ್ಯಜೀವಿ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.