ADVERTISEMENT

ಸೆಕ್ಯುಲರ್ ಶಬ್ದದಿಂದ ಸೋತ ಸಮಾಜ: ಪ್ರಭಾಕರ ಭಟ್ ಕಲ್ಲಡ್ಕ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 9:18 IST
Last Updated 11 ಸೆಪ್ಟೆಂಬರ್ 2019, 9:18 IST
ಡಾ. ಪ್ರಭಾಕರ್‌ ಭಟ್‌ ಕಲ್ಲಡ್ಕ 
ಡಾ. ಪ್ರಭಾಕರ್‌ ಭಟ್‌ ಕಲ್ಲಡ್ಕ    

ಮಂಗಳೂರು: ‘ಬ್ರಿಟೀಷರ ಕಾಲದಲ್ಲಿ ಭಾರತಕ್ಕೆ ಬಂದ ‘ಸೆಕ್ಯುಲರ್’ ಎಂಬ ಶಬ್ದದಿಂದ ಹಿಂದೂ ಸಮಾಜವು ಸೋತು ಹೋಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಪ್ರಮುಖರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

‘ಹಿಂದೂ’ ಎಂದಾಕ್ಷಣ ‘ಅಸಹಿಷ್ಣುತೆ’ ಭಾವ ಮೂಡಿಸುವ ಯತ್ನವು ನಡೆದಿದೆ. ‘ಸರ್ವೇಜನ ಸುಖಿನೋ ಭವಂತೂ, ಲೋಕಾ ಸಮಸ್ತ ಸುಖಿನೋ ಭವಂತು’ ಎಂಬ ಚಿಂತನೆ ಬೇರೆ ಯಾವುದಾದರೂ ದೇಶದಲ್ಲಿ ಇದೆಯೇ? ನಮಗೆ ಹೊರಗಿನ ಚಿಂತನೆಗಳು ಬೇಕೇ?’ಎಂದು ನಗರದ ರಾಮಕೃಷ್ಣ ಆಶ್ರಮದಲ್ಲಿ ಬುಧವಾರ ‘ಸ್ವಚ್ಛ ಭಾರತ ಶ್ರೇಷ್ಠ ಭಾರತ’ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರಶ್ನಿಸಿದರು.

‘ಸೆಕ್ಯುಲರ್’ ಶಬ್ದದ ಅವಶ್ಯಕತೆ ನಮ್ಮ ದೇಶಕ್ಕೆ ಇರಲಿಲ್ಲ. ಏಕೆಂದರೆ ಭಾರತವು ಎಲ್ಲ–ಎಲ್ಲರನ್ನೂ ಒಪ್ಪಿಕೊಂಡಿದೆ. ಓಡೋಡಿ ಬಂದ ಜನರಿಗೆ ಆಶ್ರಯ ನೀಡಿದೆ’ ಎಂದು ಬಣ್ಣಿಸಿದರು.

ADVERTISEMENT

‘ಅಲ್ಪಸಂಖ್ಯಾತ’ಕ್ಕೆ ಟಾಂಗ್...

‘ಭಾರತಕ್ಕೆ ಬಂದ ಪಾರ್ಸಿ ಜನಾಂಗದವರು ಹಾಲಿನಲ್ಲಿನ ಸಕ್ಕರೆಯಂತೆ ಇದ್ದಾರೆ. ಅವರು ಎಂದಿಗೂ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕೇಳಿಲ್ಲ. ‘ನಾವು ನಿಮ್ಮ ಜೊತೆ ಜೊತೆಗೆ ಇರುತ್ತೇವೆ’ ಎಂದು ಹೇಳಿದ್ದು, ಅಂತೆಯೇ ನಡೆದುಕೊಂಡು ಬಂದಿದ್ದಾರೆ. ಸುಮಾರು 63 ಸಾವಿರ ಇರುವ ಅವರ ಜನಸಂಖ್ಯೆಯೂ ಹೆಚ್ಚಾಗಲಿಲ್ಲ’ ಎಂದು ಶ್ಲಾಫಿಸುವ ಮೂಲಕ ಪರೋಕ್ಷವಾಗಿ ಅಲ್ಪಸಂಖ್ಯಾತರು ಹಾಗೂ ಸ್ಥಾನಮಾನಗಳ ಬೇಡಿಕೆಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

‘ನಾವು ಇಸ್ರೇಲ್‌ನಿಂದ ಬಂದ ಜನರಿಗೂ ಆಶ್ರಯ ನೀಡಿದ್ದೇವೆ. ಅವರ್‍ಯಾರೂವ ನಮ್ಮ ಮೂಲ ಚಿಂತನೆಗೆ ವಿರುದ್ಧ ಮಾಡಿಲ್ಲ. ಹೀಗಾಗಿ ನಾವು ‘ಆ್ಯಂಟಿ ಸೆಕ್ಯುಲರ್’ ಎಂದು ಹೇಳಲು ಸಾಧ್ಯವಿಲ್ಲ. ಅದೊಂದು ಪ್ರಚಾರ. ನಾವು ನಮ್ಮ ಹಳೇ ಚಿಂತನೆಗಳನ್ನೇ ಮತ್ತೆ ಜಗತ್ತಿಗೆ ಕೊಡುವ ಪ್ರಯತ್ನವನ್ನು ಮಾಡೋಣ’ ಎಂದರು.

‘ಧರ್ಮ’ ಮತ್ತು ‘ರಿಲೀಜಿಯನ್‌’ ಬೇರೆ ಬೇರೆಯಾಗಿವೆ. ಭಾರತದ ಹಿಂದೂ ‘ಧರ್ಮ’ವು ಜೀವನ ಕ್ರಮವಾಗಿದೆ. ಆದರೆ, ಮತಾಂತರ, ವಸಾಹತು ಮತ್ತಿತರ ಕಾರಣದಿಂದ ದೇಶಕ್ಕೆ ಹಾನಿಯಾಗಿದ್ದು, ನಾವೆಲ್ಲ ಒಂದೇ ದೇವರ ಮಕ್ಕಳಂತೆ ದೇಶ ಕಟ್ಟೋಣ’ ಎಂದರು.

ಓಂ ಅಲ್ಲಾಯ ನಮ: ಎನ್ನಿ....

‘ವಿಶ್ವ ಯೋಗದಿನ’ವನ್ನು ಮೊದಲ ಬಾರಿಗೆ ನಮ್ಮ ಬುದ್ಧಿಜೀವಿಗಳೇ ಪ್ರಶ್ನಿಸಿದರು. ‘ಓಂ ಸೂರ್ಯಾಯ ನಮಃ’ ಎಂದು ಹೇಳಿಸುತ್ತಾರೆ ಎಂದು ಪ್ರಚಾರ ನಡೆಸಿದರು. ಆದರೆ, ಈಗ 47 ಮುಸ್ಲಿಂ ರಾಷ್ಟ್ರ ಸಹಿತ 196 ರಾಷ್ಟ್ರಗಳು ಯೋಗವನ್ನು ಒಪ್ಪಿಕೊಂಡಿವೆ. ನೀವು, ‘ಓಂ ಅಲ್ಲಾಯ ನಮಃ’ ಅಥವಾ ‘ ಓಂ ಯೇಸುವೇ ನಮಃ’ ಎಂದರೂ ಅಡ್ಡಿಯಿಲ್ಲ. ಸ್ವಾಸ್ಥ್ಯಕ್ಕಾಗಿ ಯೋಗ ಮಾಡಿ’ ಎಂದು ನಸುನಕ್ಕರು.

ಹೂವಿಗೂ ಮೊದಲೇ ಬಾಡುವ ಪ್ರೀತಿ...

‘ಫಾದರ್ಸ್ ಡೇ, ಮದರ್ಸ್ ಡೇ, ಲವರ್ಸ್ ಡೇಗಳು ನಮ್ಮ ಸಂಸ್ಕೃತಿಯಲ್ಲ. ಎಲ್ಲರಿಗೂ ಒಂದೊಂದು ದಿನ ಸೀಮಿತವಲ್ಲ. ಎಲ್ಲರೂ ಒಂದಾಗಿರುವ ಪ್ರತಿ ದಿನ ನಮ್ಮದು. ಲವರ್ಸ್‌ ಡೇ ಮಾಡಿದವರ ಹೂ ಬಾಡುವ ಮೊದಲೇ ಲವ್‌ ಬಾಡಿ ಹೋಗುತ್ತಿದೆ’ ಎಂದು ಲೇವಡಿ ಮಾಡಿದರು.

ಸ್ವಾತಂತ್ರ್ಯ ಕೊಟ್ಟ ಜೈಹಿಂದ್‌, ವಂದೇ ಮಾತರಂ...

‘ವಿವೇಕಾನಂದರು ದೇಶದ ಮೇಲೆ ಪ್ರೀತಿ ಹಾಗೂ ಪೂಜನೀಯ ಭಾವನೆ ಹೊಂದಿದ್ದರು. ‘ಜೈಹಿಂದ್‌’ ಹಾಗೂ ‘ವಂದೇ ಮಾತರಂ’ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಸ್ಪೂರ್ತಿಯ ಘೋಷಗಳು. ಅದಕ್ಕೆ ಪ್ರೇರಣೆ ನೀಡಿದವರು ಸ್ವಾಮಿ ವಿವೇಕಾನಂದರು ಎಂದರು.

ಓಡಬೇಡಿ, ಓಡಿಸಿ...

ಸಮಸ್ಯೆಗಳನ್ನು ನೋಡಿ ನೀವು ಓಡಬೇಡಿ. ಸಮಸ್ಯೆಗಳನ್ನೇ ಓಡಿಸಿ. ಅಂತಹ ಸಾಮರ್ಥ್ಯವು ಆಧ್ಯಾತ್ಮಿಕ ಚಿಂತನೆಯಿಂದ ಸಾಧ್ಯ. ವಿಜ್ಞಾನ ಎಂಬುದು ಪ್ರಯೋಗ. ಇಲ್ಲಿ ಸೋಲು–ಗೆಲುವು ಸಾಮಾನ್ಯ ಎಂಬ ಪ್ರಧಾನಿ ನರೇಂದ್ರ ಮೋದಿ ಮಾತುಗಳು ನಿಮ್ಮ ಬದುಕಿಗೂ ಪ್ರೇರಣೆಯಾಗಲಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

‘ವಿವೇಕಾನಂದರು ಉನ್ನತ ಸ್ಥಿತಿಗೆ ಏರಿದರೂ, ದೇಶದ ಬಗ್ಗೆಯೇ ಚಿಂತನೆ ಮಾಡಿದರು. ಬಡವರಿಗೆ ದಾನ ಮಾಡಿದರು. ಯಾವುದೇ ವ್ಯಕ್ತಿಯ ಭಾಷಣ ಮುಖ್ಯವಲ್ಲ, ಬದುಕನ್ನು ನೋಡಿ ಪ್ರೀತಿಸಿ, ಗೌರವಿಸಿ’ ಎಂದರು.

ದೈವತ್ವಕ್ಕಾಗಿ ಸ್ವಚ್ಛತೆ...

‘ಹಿಂದಿನ ಚಿಂತನೆಗಳು ಭವಿಷ್ಯದ ಭಾರತಕ್ಕೆ ಮತ್ತೆ ಬೇಕಾಗಿದೆ. ಸ್ವಚ್ಛ ಭಾರತ ಎಂದರೆ ಒಳಗೂ– ಹೊರಗೂ ಸ್ವಚ್ಛವಾಗಬೇಕಾಗಿದೆ. ಏಕ ಭಾರತ ನಮ್ಮದಾಗಲಿ. ದೈವತ್ವ ಪರಿಪೂರ್ಣವಾದ ‘ಡಿಗ್ನಿಟಿ’ಯಲ್ಲಿ ಬದುಕೋಣ. ಅದಕ್ಕಾಗಿ ಸ್ವಚ್ಛವಾರಿಗೋಣ’ ಎಂದರು.

ರಾಮೃಕಷ್ಣ ಮಿಷನ್‌ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.