ಬೆಂಗಳೂರು: ‘ಶಾಲಾ ಸಂಪರ್ಕ ಸೇತು ಯೋಜನೆ’ಯ ಅಡಿಯಲ್ಲಿ ಬಂಟ್ವಾಳ ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಕಾಲುಸಂಕಗಳ ಕುರಿತ ಪ್ರಜಾವಾಣಿ ವರದಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ‘ನಮ್ಮ ಕೆಲಸಗಳು ಮಾತನಾಡಬೇಕು. ಮಾತನಾಡುತ್ತಿವೆ,’ ಎಂದು ಹೇಳಿಕೊಂಡಿದ್ದಾರೆ.
ಗ್ರಾಮೀಣ ಭಾಗಗಳಿಂದ ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಗ್ರಾಮೀಣ ತೋಡುಗಳಿಗೆ ನಿರ್ಮಿಸುವ ‘ಶಾಲಾ ಸಂಪರ್ಕ ಸೇತು' ಯೋಜನೆಗೆ ವ್ಯಾಪಕ ಬೇಡಿಕೆ ಇರುವುದಾಗಿಯೂ, ಬಂಟ್ವಾಳ ತಾಲೂಕು ಒಂದರಲ್ಲೇ 36 ಕಡೆ ಸಂಪರ್ಕ ಸೇತುವೆಗಳು ನಿರ್ಮಾಣವಾಗುತ್ತಿರುವುದಾಗಿಯೂ ‘ಪ್ರಜಾವಾಣಿ’ ಜುಲೈ 23ರ ಗುರುವಾರ ವರದಿ ಪ್ರಕಟಿಸಿತ್ತು. ‘36 ಕಡೆ ಕಾಲುಸಂಕ: ಕಾಮಗಾರಿ ಪ್ರಗತಿ’ ಶೀರ್ಷಿಕೆಯೊಂದಿಗೆ ದಕ್ಷಿಣ ಕನ್ನಡ ಆವೃತ್ತಿಯಲ್ಲಿ ಈ ವರದಿ ಪ್ರಕಟವಾಗಿತ್ತು.
ಈ ವರದಿಯನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿರುವ ಎಚ್.ಡಿ ಕುಮಾರಸ್ವಾಮಿ, ‘ಕಾಲುಸಂಕ ದಾಟುತ್ತಿದ್ದ ವೇಳೆ ಶಾಲಾ ಬಾಲಕಿಯೊಬ್ಬಳು ತೊರೆಗೆ ಬಿದ್ದು ಮೃತಪಟ್ಟ ಸುದ್ದಿ ಅಂದು ನನ್ನ ಮನ ಕಲಕಿತ್ತು. ಮಲೆನಾಡು, ಕರಾವಳಿಯಲ್ಲಿ ಈ ಸಮಸ್ಯೆ ನಿವಾರಿಸಲು ಅಂದು ಮನಸು ಮಾಡಿ ಬಜೆಟ್ ನಲ್ಲಿ 'ಶಾಲಾ ಸಂಪರ್ಕ ಸೇತು' ಯೋಜನೆ ಘೋಷಿಸಿದೆ. ಅದು ಯಶಸ್ವಿಯಾಗಿದೆ. ವಿದ್ಯಾರ್ಥಿಗಳಿಗೆ ನೆರವಾಗಿದೆ. "ನಮ್ಮ ಕೆಲಸಗಳು ಮಾತನಾಡಬೇಕು. ಮಾತನಾಡುತ್ತಿವೆ" ಎಂದು ಟ್ವೀಟ್ ಮಾಡಿದ್ದಾರೆ.
ಕುಮಾರಸ್ವಾಮಿ ಅವರ ಈ ಟ್ವೀಟ್ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.