ಬೆಂಗಳೂರು: ವಿವಿಧ ಇಲಾಖೆಗಳು ನೇರ ನೇಮಕಾತಿ ಪ್ರಕ್ರಿಯೆ ನಡೆಸುವಾಗ ಕಲ್ಯಾಣ ಕರ್ನಾಟಕದ ಮೀಸಲಾತಿಯಡಿಯ ನೇಮಕಾತಿಗೆ ಪ್ರತ್ಯೇಕ ಅಧಿಸೂಚನೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಸರ್ಕಾರ ಸೂಚಿಸಿದೆ.
2020ರ ಜೂನ್‌ನಲ್ಲಿ ಹೊರಡಿಸಿದ್ದ ಆದೇಶದಲ್ಲಿ ಸ್ಥಳೀಯ ಮತ್ತು ಮಿಕ್ಕುಳಿದ ವೃಂದಗಳ ನೇರ ನೇಮಕಾತಿ ಮಾಡುವಾಗ ಎರಡೂ ವೃಂದಗಳ ಹುದ್ದೆಗಳಿಗೆ ಒಂದೇ ಅಧಿಸೂಚನೆ ಹೊರಡಿಸಲು ಸೂಚಿಸಲಾಗಿತ್ತು. ಒಂದೇ ಅರ್ಜಿಯಲ್ಲಿ ಮೀಸಲಾತಿವಾರು ಹುದ್ದೆಗಳ ವರ್ಗೀಕರಣ ಮಾಡಿ, ಪ್ರತ್ಯೇಕ ಮೀಸಲಾತಿ ಬಯಸುವವರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಲು ಅವಕಾಶ ಇತ್ತು. ಇದಕ್ಕೆ ವಿರೋಧ ವ್ಯಕ್ತವಾಗಿತ್ತು.
ಈ ಕುರಿತ ಪರಿಷ್ಕೃತ ಆದೇಶದಲ್ಲಿ, ‘ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಒಂದೇ ಅರ್ಜಿ ಇರಲಿದೆ. ಉಳಿದ ಎಲ್ಲ ಹುದ್ದೆಗಳ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿ ಹುದ್ದೆಗಳಿಗೆ ಪ್ರತ್ಯೇಕ ಅಧಿಸೂಚನೆ, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಒಂದೇ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿರುವ ಪ್ರಕರಣಗಳಿಗೆ ಹಳೆ ಆದೇಶವೇ ಅನ್ವಯವಾಗಲಿದೆ’ ಎಂದು ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.