ADVERTISEMENT

ಬೆಳಗಾವಿ | 23ನೇ ವಯಸ್ಸಿಗೇ ಎ.ಸಿ.ಯಾದ ಕಲ್ಯಾಣಿ

ಕೆಎಎಸ್‌ ಅಧಿಕಾರಿಯಾದ ನೇಕಾರ ಕುಟುಂಬದ ಯುವತಿ

ಎಂ.ಮಹೇಶ
Published 25 ಡಿಸೆಂಬರ್ 2019, 11:48 IST
Last Updated 25 ಡಿಸೆಂಬರ್ 2019, 11:48 IST
ಬೆಳಗಾವಿಯಲ್ಲಿ ಕೆಎಎಸ್‌ ಅಧಿಕಾರಿಯಾಗಿ ಆಯ್ಕೆಯಾದ ಕಲ್ಯಾಣ ಕಾಂಬ್ಳೆ ಅವರನ್ನು ಉದ್ಯಮಿ ಅನಿಲ್ ಪೋತದಾರ ಹಾಗು ಸ್ನೇಹಿತರು ಮಂಗಳವಾರ ಅಭಿನಂದಿಸಿದರು
ಬೆಳಗಾವಿಯಲ್ಲಿ ಕೆಎಎಸ್‌ ಅಧಿಕಾರಿಯಾಗಿ ಆಯ್ಕೆಯಾದ ಕಲ್ಯಾಣ ಕಾಂಬ್ಳೆ ಅವರನ್ನು ಉದ್ಯಮಿ ಅನಿಲ್ ಪೋತದಾರ ಹಾಗು ಸ್ನೇಹಿತರು ಮಂಗಳವಾರ ಅಭಿನಂದಿಸಿದರು   

ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಇಲ್ಲಿನ ಖಾಸಬಾಗ್‌ ಗಾಯತ್ರಿ ನಗರದ ಕಲ್ಯಾಣಿ ವೆಂಕಟೇಶ್‌ ಕಾಂಬ್ಳೆ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಕಿರಿಯ ವಯಸ್ಸಿನಲ್ಲೇ (23) ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿರುವುದು ವಿಶೇಷ.

ನೇಕಾರಿಯ ಮಧ್ಯಮ ವರ್ಗದ ವೆಂಕಟೇಶ್–ಸುವರ್ಣಾ ದಂಪತಿಯ ಪುತ್ರಿಯಾದ ಅವರು, ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹುದ್ದೆ ಪಡೆಯುವ ಮೂಲಕ ಕುಟುಂಬದೊಂದಿಗೆ ಬೆಳಗಾವಿಯ ಕೀರ್ತಿಯನ್ನೂ ಹೆಚ್ಚಿಸಿದ ಹೆಮ್ಮೆ ತಮ್ಮದಾಗಿಸಿಕೊಂಡಿದ್ದಾರೆ.

ಇಲ್ಲಿನ ಡಿವೈನ್‌ ಪ್ರಾವಿಡೆಂಟ್‌ ಕಾನ್ವೆಂಟ್‌ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗೆ ಓದಿದ ಅವರು, ಎಸ್ಸೆಸ್ಸೆಲ್ಸಿಯಲ್ಲಿ ಶೇ 89 ಅಂಕ ಗಳಿಸಿದ್ದರು. ಬೆಂಗಳೂರಿನ ನಾರಾಯಣ ಪಿಯು ಕಾಲೇಜಿನಲ್ಲಿ ಪಿಯುಸಿ (ವಿಜ್ಞಾನ)ಯಲ್ಲಿ ಶೇ 80 ಅಂಕ ಗಳಿಸಿದ್ದರು. ಹೈದರಾಬಾದ್‌ನ ಶ್ರೀಚೈತನ್ಯ ಪದವಿ ಕಾಲೇಜಿನಲ್ಲಿ ಬಿ.ಎ. ಪದವಿಗೆ ಸೇರಿದ್ದರು. ಯುಪಿಎಸ್‌ಸಿ ಕೋಚಿಂಗ್‌ ಪಡೆಯುವುದಕ್ಕಾಗಿಯೇ ಅವರು ಹೈದರಾಬಾದ್‌ನ ಕಾಲೇಜು ಆಯ್ಕೆ ಮಾಡಿಕೊಂಡಿದ್ದರಂತೆ.

ADVERTISEMENT

ಪದವಿ ಮುಗಿದ ಮೇಲೆ:

2017ರಲ್ಲಿ ಪದವಿ ಮುಗಿಸಿದ ಅವರು, ಬೆಂಗಳೂರಿನ ಡಾ.ರಾಜ್‌ಕುಮಾರ್ ಐಎಎಸ್‌ ಅಕಾಡೆಮಿಯಲ್ಲಿ ಯುಪಿಎಸ್‌ಸಿ ಕೋಚಿಂಗ್‌ ಪಡೆಯುತ್ತಿದ್ದರು. ಪಿ.ಜಿ.ಯಲ್ಲಿದ್ದುಕೊಂಡು ಅಧ್ಯಯನ ಮಾಡುತ್ತಿದ್ದರು. ಈ ನಡುವೆಯೇ ಕೆಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡಿದ್ದರು. ಅಲ್ಲಿ ಪಡೆದಿದ್ದ ತರಬೇತಿ ಪರೀಕ್ಷೆಗೆ ನೆರವಾಗಿದೆ. ಉತ್ತಮ ಅಂಕಗಳನ್ನು ಅವರು ಗಳಿಸಿ, ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

‘ನಿತ್ಯ 10ರಿಂದ 12 ಗಂಟೆ ಓದುತ್ತಿದ್ದೆ. ತಂದೆ–ತಾಯಿ ಬಹಳ ಪ್ರೋತ್ಸಾಹ ನೀಡಿದರು. ಬಡತನದ ಕಷ್ಟದ ನಡುವೆಯೂ ನನ್ನನ್ನು ಉತ್ತಮವಾಗಿ ಓದಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಉಪ ವಿಭಾಗಾಧಿಕಾರಿ ಆಗುವ ಮೂಲಕ ಅವರ ತ್ಯಾಗಕ್ಕೆ ಬೆಲೆ ತಂದುಕೊಟ್ಟ ಮತ್ತು ಕನಸು ನನಸು ಮಾಡಿದ ಸಾರ್ಥಕ ಭಾವ ನನ್ನದು. ಹೀಗಾಗಿ, ಖುಷಿಯಾಗಿದೆ. ಸಿಕ್ಕಿರುವ ಅವಕಾಶವನ್ನು ಬಡವರು, ಶ್ರೀಸಾಮಾನ್ಯರಿಗೆ ಸಹಾಯ ಮಾಡಲು ಬಳಸಿಕೊಳ್ಳುತ್ತೇನೆ’ ಎಂದು ಕಲ್ಯಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಕ್ಕಂದಿನಿಂದಲೂ ಆಸೆ ಇತ್ತು:

‘ಅಧಿಕಾರಿಯಾಗಬೇಕು ಎನ್ನುವ ಕನಸು ಪ್ರೌಢಶಾಲಾ ಹಂತದಿಂದಲೂ ಇತ್ತು. ಇದಕ್ಕಾಗಿ ಪೂರಕ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೆ. ಯಪಿಎಸ್‌ಸಿ ಪರೀಕ್ಷೆಯಲ್ಲಿ ಸಫಲಳಾಗಲಿಲ್ಲ. ಆದರೆ, ಪ್ರಯತ್ನ ಬಿಡುವುದಿಲ್ಲ. ಈಗ ಸಿಕ್ಕಿರುವ ಎ.ಸಿ. ಕೆಲಸಕ್ಕೆ ಸೇರುತ್ತೇನೆ. ಮುಂದಿನ ವರ್ಷವೂ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುತ್ತೇನೆ. ಆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು ನನ್ನ ಗುರಿಯಾಗಿದೆ’ ಎಂದರು.

‘ಬದ್ಧತೆ, ಪರಿಶ್ರಮದಿಂದ ಅಭ್ಯಾಸ ಮಾಡಬೇಕು. ಹಿಂದಿನ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಅವಲೋಕನ ಮಾಡಿ, ವಿಶ್ಲೇಷಣೆ ಮಾಡಿ ಪರೀಕ್ಷೆಗೆ ಸಿದ್ಧವಾಗಬೇಕು. ಈಗ ಮಾಹಿತಿಯ ಮಹಾಪೂರವೇ ಇದೆ. ಹೀಗಾಗಿ, ಸ್ಮಾರ್ಟ್‌ ಆಗಿ ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡುತ್ತಾರೆ ಅವರು.

‘ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದೆ. ಇಂಗ್ಲಿಷ್‌ನಲ್ಲಿ ಪರೀಕ್ಷೆ ಎದುರಿಸಿದ್ದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮೊದಲಾದ ಸಾಮಾಜಿಕ ಮಾಧ್ಯಮ ಬಳಸಿದರೆ ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ, ಅದರಿಂದ ದೂರವಿದ್ದೆ. ಅಧಿಕೃತ ಪುಸ್ತಕಗಳನ್ನು ಹಾಗೂ ಅಂತರ್ಜಾಲದಲ್ಲಿ ಲಭ್ಯವಿರುವ ಜರ್ನಲ್‌ಗಳನ್ನು ಓದುತ್ತಿದ್ದೆ. ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಿದ್ದೆ’ ಎಂದು ಅನುಭವ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.