ADVERTISEMENT

ದೇಶದೆಲ್ಲೆಡೆಗೆ ಕಂಬಳದ ಸೊಗಡು: ಹೈಕೋರ್ಟ್‌ಗೆ ಅಡ್ವೊಕೇಟ್‌ ಜನರಲ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 15:38 IST
Last Updated 23 ಅಕ್ಟೋಬರ್ 2024, 15:38 IST
<div class="paragraphs"><p>ಕಂಬಳದ ದೃಶ್ಯ</p></div>

ಕಂಬಳದ ದೃಶ್ಯ

   

ಪ್ರಜಾವಾಣಿ ಸಂಗ್ರಹ ಚಿತ್ರ

ಬೆಂಗಳೂರು: ‘ಕೋಣಗಳ ಓಟದ ಕಂಬಳ ಸ್ಪರ್ಧೆಯು ಸಮಸ್ತ ಕರ್ನಾಟಕದ ಸಂಸ್ಕೃತಿಗೆ ಸಂಬಂಧಿಸಿದ್ದು, ಇದನ್ನು ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಕೊಂಡೊಯ್ಯುವ ಸಂದರ್ಭ ಕೂಡಿಬಂದಿದೆ’ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮೌಖಿಕವಾಗಿ ತಿಳಿಸಿದೆ.

ADVERTISEMENT

‘ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ 26ರಂದು ಕಂಬಳ ಸ್ಪರ್ಧೆ ನಡೆಸಲು ಬೆಂಗಳೂರು ಕಂಬಳ ಸಮಿತಿಗೆ ಅನುಮತಿ ನೀಡಬಾರದು ಮತ್ತು ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಿ ‘ಪೆಟಾ’ (ಪೀಪಲ್‌ ಫಾರ್‌ ಎ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಅನಿಮಲ್ಸ್‌) ಸಂಸ್ಥೆಯ ಅಧಿಕೃತ ಪ್ರತಿನಿಧಿ ಖುಷ್ಬೂ ಗುಪ್ತ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ಅವರು, ‘ಕಂಬಳವನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಾತ್ರ ನಡೆಸಬೇಕೆ ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದೆ. ಪ್ರಾಣಿಗಳಿಗೆ ಕ್ರೌರ್ಯ ಉಂಟು ಮಾಡಲಾಗುತ್ತಿದೆ ಎಂದು ಪೆಟಾ ಆಕ್ಷೇಪಿಸಿದೆ. ಆದರೆ, ಕುದುರೆ ರೇಸ್‌ ನಡೆದಾಗ ಕುದುರೆಗಳನ್ನು ಬೇರೆ ದೇಶಗಳಿಂದ ಆಮದು ಅಥವಾ ರಫ್ತು ಮಾಡಲಾಗುತ್ತದೆ. ಬೇರೆ ರಾಜ್ಯಗಳಿಗೂ ಅವುಗಳನ್ನು ಸಾಗಿಸಲಾಗುತ್ತದೆ’ ಎಂದು ವಿವರಿಸಿದರು. ಅಂತೆಯೇ, ‘ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ಅರ್ಜಿದಾರರಿಗೆ ತಿಳಿಸಲಾಗುವುದು’ ಎಂದು ತಿಳಿಸಿದರು.

ಇದಕ್ಕೂ ಮೊದಲು ‘ಬೆಂಗಳೂರು ಕಂಬಳ ಸಮಿತಿ’ ಪರ ವಕೀಲರು, ‘ನಗರದ ಅರಮನೆ ಮೈದಾನದಲ್ಲಿ ಇದೇ 26ರಂದು ಕಂಬಳದ ಸ್ಪರ್ಧೆ ನಡೆಸುತ್ತಿಲ್ಲ ಮತ್ತು ಬೇರೆಲ್ಲೂ ಕಂಬಳ ನಡೆಸುವ ಸಂಬಂಧ ಸರ್ಕಾರದ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿಲ್ಲ’ ಎಂದು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.

ಪೆಟಾ ಪರ ಹಾಜರಿದ್ದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ, ‘ಕಂಬಳ ಸ್ಪರ್ಧೆ ನಡೆಸಲು ಅನುಮತಿ ನೀಡಲಾಗುತ್ತಿದೆ ಎಂಬ ವಿಚಾರವನ್ನು ನಮಗೆ ತಿಳಿಸಬೇಕು. ಆಗ ನಾವು ನ್ಯಾಯಾಲಯಕ್ಕೆ ಬರುತ್ತೇವೆ’ ಎಂದರು.

‘ನವೆಂಬರ್‌ 9ರಂದು ದಕ್ಷಿಣ ಕನ್ನಡ ಪಿಲಿಕುಳದ ಪ್ರಾಣಿ ಸಂಗ್ರಹಾಲಯದ ಪಕ್ಕದಲ್ಲಿ ಕಂಬಳ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಸಂಬಂಧ ಪ್ರಾಣಿ ಸಂಗ್ರಹಾಲಯದ ನಿರ್ದೇಶಕರು ಅಲ್ಲಿನ ಜಿಲ್ಲಾಧಿಕಾರಿಗೆ ಪತ್ರ ಬರೆದು ಸ್ಪರ್ಧೆಯ ಸಂದರ್ಭದಲ್ಲಿನ ಕೂಗಾಟದಿಂದ ಪ್ರಾಣಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಹೆಚ್ಚುವರಿ ಪ್ರಮಾಣ ಪತ್ರ ಸಲ್ಲಿಸಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ನವೆಂಬರ್‌ 5ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?: ‘ಕಂಬಳ ಸ್ಪರ್ಧೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯ ಗ್ರಾಮೀಣ ಭಾಗ ಹೊರತುಪಡಿಸಿ ಬೇರೆಲ್ಲೂ ನಡೆಸಲು ಅನುಮತಿ ನೀಡಬಾರದು. ಪ್ರಾಣಿಗಳ ಮೇಲಿನ ಕ್ರೌರ್ಯ ನಿಷೇಧ ಕಾಯ್ದೆ–2017ರ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.