ADVERTISEMENT

ದಾಸಶ್ರೇಷ್ಠನ ಚರಿತ್ರೆ ಸಾರುವ ಬಾಡ: ಕಾಗಿನೆಲೆ

ಜನ್ಮಭೂಮಿ ಬಾಡ, ಕರ್ಮಭೂಮಿ ಕಾಗಿನೆಲೆ, ಅಭಿವೃದ್ಧಿಗೆ ಹಲವು ಯೋಜನೆ ಹಮ್ಮಿಕೊಂಡಿರುವ ಪ್ರಾಧಿಕಾರ

ಎಂ.ಸಿ.ಮಂಜುನಾಥ
Published 15 ನವೆಂಬರ್ 2019, 1:41 IST
Last Updated 15 ನವೆಂಬರ್ 2019, 1:41 IST
ಬೆರಗು ಮೂಡಿಸುವಂತಿದೆ ಕನಕದಾಸರ ಸುಂದರ ಮೂರ್ತಿ
ಬೆರಗು ಮೂಡಿಸುವಂತಿದೆ ಕನಕದಾಸರ ಸುಂದರ ಮೂರ್ತಿ    

ಹಾವೇರಿ: ಕರುನಾಡಿನ ಹರಿದಾಸರಲ್ಲಿ ಕನಕದಾಸರು ಅಗ್ರಗಣ್ಯರು. ಆ ಮಹಾನ್ ಚೇತನರಜನ್ಮಭೂಮಿ ಶಿಗ್ಗಾವಿ ತಾಲ್ಲೂಕಿನ ಬಾಡ. ಕರ್ಮಭೂಮಿ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆ. ಹೀಗಾಗಿ, ಇವರೆಡು ಪುಣ್ಯಸ್ಥಳಗಳಾಗಿ ಉಳಿಯುವುದರ ಜತೆಗೆ ಪ್ರವಾಸಿ ತಾಣಗಳಾಗಿಯೂ ದೇಶ–ವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಕನಕನ ತತ್ವಗಳನ್ನು, ಅವರು ಭಿತ್ತಿರುವ ಆದರ್ಶಗಳನ್ನು, ಜನ್ಮ–ಕರ್ಮ ಭೂಮಿಗಳಲ್ಲಿ ಕನಕನ ಜೀವನ ಶೈಲಿ, ಅವರ ಹೆಜ್ಜೆ ಗುರುತುಗಳನ್ನು ಸಂರಕ್ಷಿಸುವ ಹಾಗೂ ಜಗತ್ತಿಗೇ ಸಾರುವ ಕೆಲಸವನ್ನುಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮಾಡುತ್ತಿದೆ.2007–08ರಲ್ಲಿ ರಚನೆಯಾದ ಪ್ರಾಧಿಕಾರ, ಸುಮಾರು ₹ 100 ಕೋಟಿ ವೆಚ್ಚದಲ್ಲಿ ಕನಕ ಕ್ಷೇತ್ರಗಳನ್ನು ಅಧ್ಯಾತ್ಮದ ಜೊತೆಗೆ ಪ್ರವಾಸಿಗರ ನೆಲೆಯಾಗಿಸುತ್ತಿದೆ.

ಕಾಗಿನೆಲೆ ವೈಭವ: ಪ್ರಾಧಿಕಾರದಿಂದ ಕಾಗಿನೆಲೆಯಲ್ಲಿ ನಿರ್ಮಾಣಗೊಂಡಿರುವ‘ಕನಕ ಪರಿಸರ ಸ್ನೇಹಿ ಉದ್ಯಾನ’ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳು ‘ಕಾಗಿನೆಲೆಯಾದಿಕೇಶವನೇ...’ ಕನಸಲ್ಲಿ ಬಂದು ಕರೆಯುವಂತೆ ರೂಪುಗೊಂಡಿವೆ. ಆಧುನಿಕ ಬೇಡಿಕೆಗೆ ತಕ್ಕಂತೆ, ಕನಕರ ಪದಗಳು, ಕೀರ್ತನೆ, ಕಾವ್ಯ, ಮುಂಡಿಗೆಗಳು, ಕೃತಿಗಳು, ರಚನೆಗಳನ್ನು ಪ್ರಾಧಿಕಾರ ಸಾರ್ವಜನಿಕರ ಮುಂದಿಟ್ಟಿದೆ.

ADVERTISEMENT

ಕಾಗಿನೆಲೆಯಲ್ಲಿ ಸುಮಾರು 134 ಎಕರೆ ವಿಸ್ತೀರ್ಣದಲ್ಲಿ ಕನಕ ಉದ್ಯಾನ ನಿರ್ಮಿಸಲಾಗಿದ್ದು, ಕನಕರ ‘ಮೋಹನ ತರಂಗಿಣಿ’ ಯಲ್ಲಿ ಕಂಗೊಳಿಸುವ 238 ಎಕರೆಯ ದೊಡ್ಡಕೆರೆಯೂ (ಕನಕ ಕೆರೆ) ಇಲ್ಲಿದೆ. ಹುಲ್ಲುಹಾಸಿನಿಂದ ಕಂಗೊಳಿಸುತ್ತಿರುವ ಉದ್ಯಾನದಲ್ಲಿ ಅಲಂಕಾರಿಕ ಗಿಡಗಳೊಂದಿಗೆ ಔಷಧೀಯ ಸಸ್ಯಗಳ ಕಿರು ಉದ್ಯಾನವನ್ನೂ ನಿರ್ಮಿಸಲಾಗಿದೆ. ಪಕ್ಕದಲ್ಲಿರುವ ಸಂಗೀತ ಕಾರಂಜಿಯ ನರ್ತನಕ್ಕೆ ಯುವ ಜೋಡಿಗಳು, ನಿವೃತ್ತರು, ವಿಹಾರಿಗಳು, ಪ್ರವಾಸಿಗರು ಮನ ತಣಿಸಿಕೊಳ್ಳುತ್ತಿದ್ದಾರೆ.

ಸಮೀಪದಲ್ಲಿ ಕೃತಕ ಬಂಡೆಗಳ ಮೇಲಿಂದ ಬೀಳುವ ನೀರಿನ ಕೃತಕ ಜಲಪಾತ ಹಾಗೂ ನಡುವೆ ಸಾಗಲು ಇರುವ ಸೇತುವೆ ಕಣ್ಮನ ಸೆಳೆಯುತ್ತದೆ. ರಾಶಿ-ನಕ್ಷತ್ರ-ದೈವಿ ಉದ್ಯಾನವನ ಮತ್ತು ಮಿನಿರಾಕ್ ಒಳ ಉದ್ಯಾನಗಳೂ ಗಮನ ಸೆಳೆಯುತ್ತವೆ. ಚಿಟ್ಟೆ ಉದ್ಯಾನವನ್ನೂ ರೂಪಿಸಲಾಗಿದ್ದು, ಲಕ್ಷಕ್ಕೂ ಹೆಚ್ಚು ಚಿಟ್ಟೆಗಳು ಕಲ್ಪನಾಲೋಕಕ್ಕೆ ಕೊಂಡೊಯ್ಯತ್ತವೆ.

ಕನಕರ ವರ್ಣರಂಜಿತ ಜೀವನದ ನಾನಾ ಸಂಗತಿಗಳನ್ನು ಪ್ರತಿಬಿಂಬಿಸುವ ಕಲಾಮೂರ್ತಿಗಳು, ಅವರ ಹುಟ್ಟು, ವಿದ್ಯಾರ್ಥಿಜೀವನ, ಉಡುಪಿಯಲ್ಲಿ ಶೀಕೃಷ್ಣ ತಿರುಗಿ ನಿಂತಿದ್ದು,ಚಿನ್ನದ ಕೊಪ್ಪರಿಗೆಯು ಅವರಿಗೆ ಸಿಕ್ಕು ಕನಕನಾಕರಾಗಿದ್ದು, ಸಾಮರಸ್ಯ ಬೋಧನೆ... ಹೀಗೆ, ಅವರ ಜೀವನದ ಘಟನೆಗಳನ್ನು ಪ್ರತಿಬಿಂಬಿಸುವ ಪ್ರತಿಮೆಗಳೂ ಅನಾವರಣಗೊಂಡಿವೆ. ಪ್ರವಾಸಿಗರ ಹೊಟ್ಟೆ ತುಂಬಿಸಲುಫುಡ್‌ ಕೋರ್ಟ್‌, ವಿಶ್ರಾಂತಿ ಗೃಹ, ದಣಿವಾರಿಸಲು ಸಣ್ಣ ಸಣ್ಣ ಮಂಟಪ ಕುಟೀರಗಳಿವೆ. ಉದ್ಯಾನ ಮಾತ್ರವಲ್ಲ, ಸಮಾರಂಭ, ವಿಚಾರಸಂಕಿರಣ, ಸಮಾವೇಶ, ಸಭೆ, ನೃತ್ಯ, ನಾಟಕ, ಸಂಗೀತ ಸೇರಿದಂತೆ ಕಲಾ ಕಾರ್ಯಕ್ರಮಗಳು, ವಿವಾಹ ಸಮಾರಂಭಗಳನ್ನು ನಡೆಸಲು 3 ಸಾವಿರ ಆಸೀನಗಳ ‘ಕಲಾಭವನ’ವಿದೆ. ಪಕ್ಕದಲ್ಲೇ ಕನಕ ಯಾತ್ರಿ ನಿವಾಸವಿದ್ದು, ಉಪಹಾರ–ಊಟಕ್ಕೆ ಕ್ಯಾಂಟಿನ್ ಇದೆ.

ಬಾಡ ಅರಮನೆಯ ವಿಹಂಗಮ ನೋಟ

ಬಾಡದಲ್ಲಿ ಕನಕ ವೈಭವ: ಕನಕರ ಜನ್ಮಭೂಮಿಯಾದ ಬಾಡದಲ್ಲಿ ಅವರ ಜೀವಿತದ ಗತವೈಭವವನ್ನು ಮರುಸೃಷ್ಟಿಸಲಾಗಿದೆ.‘ಇಲ್ಲಿಉತ್ಖನನದ ವೇಳೆ ಆದಿಕೇಶವ (ರಂಗನಾಥ) ದೇವಸ್ಥಾನ ಇದ್ದ ಬಗ್ಗೆ ಕುರುಹುಗಳು ಲಭ್ಯವಾಗಿದ್ದವು. ಅರಮನೆಯ ಅವಶೇಷಗಳು ಪತ್ತೆಯಾದವು. ಬೆಳ್ಳಿ, ತಾಮ್ರದ ನಾಣ್ಯಗಳು, ಮಡಿಕೆ ಚೂರುಗಳು ದೊರೆತಿದ್ದು, ಇದು ಕನಕದಾಸರ ಅರಮನೆಯೆಂದು ಖಚಿತಪಡಿಸಿದ್ದರು’ ಎನ್ನುತ್ತಾರೆ ಸಂಶೋಧಕ ಜಗನ್ನಾಥ ಗೇನಣ್ಣನವರ.

ಪ್ರಾಧಿಕಾರವು ಅವಶೇಷಗಳನ್ನು ಸಂರಕ್ಷಿಸಿ, ಬಾಡ ಗುಡ್ಡದ ಮೇಲೆ ವಿಜಯನಗರ ಶಿಲ್ಪಕಲಾ ಶೈಲಿಯಲ್ಲಿ ಸುಂದರ ಅರಮನೆಯನ್ನು ಪುನರ್ ನಿರ್ಮಿಸಿದೆ. ಸುತ್ತ ಕೆಂಪುಕಲ್ಲಿನ ಕೋಟೆ, ಒಳಾಂಗಣದಲ್ಲಿ ಕನಕರ ಕೀರ್ತನೆಗಳನ್ನು ಗ್ರಾನೈಟ್ ಶಿಲೆಯಲ್ಲಿ ಚಿತ್ರಿಸಲಾಗಿದೆ.ಅರಮನೆಯಲ್ಲಿರುವ ತೈಲವರ್ಣಗಳು ಹಾಗೂ ಉಬ್ಬುಶಿಲೆಗಳು ಕನಕದಾಸರು ಹಾಗೂ ಅವರ ಪೂರ್ವಿಕರ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸುತ್ತಿವೆ. ಇಲ್ಲಿನ ದರ್ಬಾರ್ ಹಾಲ್ ನೋಡುಗರಲ್ಲಿ ಅಚ್ಚರಿ ಮೂಡಿಸುತ್ತದೆ.

ತಿಮ್ಮಪ್ಪನಿಂದ ‘ಕನಕನಾಯಕ’: ಬಂಕಾಪುರದ ದಂಡನಾಯಕ ಬೀರಪ್ಪ ಹಾಗೂ ಬಚ್ಚಮ್ಮ ದಂಪತಿ ಪುತ್ರನಾಗಿದ್ದ ತಿಮ್ಮಪ್ಪ (ಕನಕನ ಮೂಲ ಹೆಸರು), ತಂದೆಯ ಅಕಾಲಿಕ ಮರಣದ ನಂತರ ಸುತ್ತ 78 ಹಳ್ಳಿಯ ಡಣ್ಣಾಯಕರಾದರು. ಶೌರ್ಯ, ಸಾಹಸ ಹಾಗೂ ಬುದ್ಧಿ ಮತ್ತೆಯಿಂದ ನಾಯಕರೂ ಆದರು. ಭೂಮಿ ಅಗಿಯುತ್ತಿರುವ ವೇಳೆ ಬಂಗಾರ (ಕನಕ) ದೊರೆತು, ಅದನ್ನೆಲ್ಲ ಸತ್ಕಾರ್ಯಗಳಿಗೆ ಬಳಸಿದ್ದರಿಂದ ಪ್ರಜೆಗಳ ಮನಸ್ಸಿನಲ್ಲಿ ‘ಕನಕ ನಾಯಕ’ರಾಗಿ ಸ್ಥಾನ ಪಡೆದರು ಎಂಬ ಐತಿಹ್ಯವಿದೆ.

ಕಾಗಿನೆಲೆಯಲ್ಲೇ ದೇಹತ್ಯಾಗ: ‘ಶರಣರ ಸಾವು ಮರಣದಲ್ಲಿ ನೋಡಾ’ ಎಂಬಂತೆ ಭಕ್ತಿಪಥದಲ್ಲಿ ಬದುಕಿದ್ದ ಕನಕರ ದೇಹವನ್ನು ‘ಕನಕಕೆರೆ’ಯ ಪಕ್ಕದಲ್ಲಿ ಮಣ್ಣುಮಾಡಲಾಗಿದೆ. ಆ ಜಾಗದ ಮೇಲೆ ವೃಂದಾವನವನ್ನು ಕಟ್ಟಲಾಗಿದೆ. 1982ರಲ್ಲಿ ಬೆಂಗಳೂರಿನ ಕಾಳಿದಾಸ ಗೆಳೆಯರ ಬಳಗದವರು ಇಲ್ಲಿ ಸಣ್ಣ ಗುಡಿ ಕಟ್ಟಿಸಿ, ಕನಕರ ಆಳೆತ್ತರದ ಮೂರ್ತಿಯನ್ನು ನಿಲ್ಲಿಸಿದ್ದಾರೆ. 2008ರಲ್ಲಿ ಪ್ರಾಧಿಕಾರವು ಇಲ್ಲಿ ದೊರೆತ ಅಸ್ಥಿಪಂಜರವನ್ನೊಳಗೊಂಡ ಗ್ರಾನೈಟ್ ಶಿಲೆಯಲ್ಲಿ ವಿಜಯನಗರ ಶೈಲಿ ಮಾದರಿಯಲ್ಲಿ ಸಮಾಧಿ ನಿರ್ಮಿಸಿದೆ.

ಕಾಗಿನೆಲೆಯಲ್ಲಿರುವ ಔಷಧೀಯ ವನ

ತೊಟ್ಟಿಲೋತ್ಸವ ಇಂದು
ನೆರೆಹಾವಳಿ ಹಾಗೂ ಚುನಾವಣೆ ನೀತಿ ಸಂಹಿತೆ ಕಾರಣದಿಂದ ಜಿಲ್ಲಾಡಳಿತ ಶುಕ್ರವಾರ ಕನಕ ಜಯಂತಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿದೆ. ಅಂತೆಯೇ ಪ್ರಾಧಿಕಾರವು ಕನಕನ ಜನ್ಮ ಹಾಗೂ ಕರ್ಮ ಕ್ಷೇತ್ರಗಳಲ್ಲಿ ಸಿದ್ಧತೆ ನಡೆಸುತ್ತಿದೆ. ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲೂ ಗುರುವಾರ ‘ಕನಕರ ತೊಟ್ಟಿಲೋತ್ಸವ’ ಹಾಗೂ ‘ಕನಕ ರಥೋತ್ಸವ’ ಕಾರ್ಯಕ್ರಮಗಳು ನಡೆಯಲಿವೆ.

*
ಬಾಡ ಹಾಗೂ ಕಾಗಿನೆಲೆಯನ್ನು ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಇನ್ನಷ್ಟು ಮಹತ್ವದ ಯೋಜನೆಗಳಿವೆ.
-ಮಲ್ಲೇಶಪ್ಪ ಹೊರಪೇಟೆ, ಆಯುಕ್ತರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ

*
ಹಾವೇರಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬಾಡ ತನ್ನದೇ ಆದ ಕೊಡುಗೆ ಕೊಟ್ಟಿದೆ. ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸಗಳು ಆಗಬೇಕಿವೆ.
-ಬಸವರಾಜ ಬೊಮ್ಮಾಯಿ, ಗೃಹಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.