ಬೆಂಗಳೂರು: ‘ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದು ಸಂಶೋಧಕ ಹಂಪ ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿರುವ ‘ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರಿಗೆ ಎರಡು ದಿನಗಳ ಕಾರ್ಯಾಗಾರ’ವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಮಾನ್ಯ ಕನ್ನಡಿಗರು ಮಾತನಾಡುವುದನ್ನು ಗಮನಿಸಿದರೆ, ಅವರ ಮಾತಿನಲ್ಲಿ ಬಹುತೇಕ ಇಂಗ್ಲಿಷ್ ಪದಗಳೇ ಇರುತ್ತವೆ. ಅವರು ಕಂಗ್ಲಿಷ್ ಮಾತನಾಡುತ್ತಿರುತ್ತಾರೆ. ಇಂತಹ ಸ್ಥಿತಿಗೆ ನಾವು ಬಂದಿದ್ದೇವೆ’ ಎಂದರು.
ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘ಸರೋಜಿನಿ ಮಹಿಷಿ ವರದಿ ಜಾರಿಗೆ ತರಲು ಸಾಧ್ಯವಿಲ್ಲ. ಅದನ್ನು ಸುಪ್ರೀಂ ಕೋರ್ಟ್ ಒಪ್ಪುವುದೂ ಇಲ್ಲ. ದೇಶದ ಯಾವುದೇ ರಾಜ್ಯದ ಜನರು, ಯಾವುದೇ ರಾಜ್ಯಕ್ಕೆ ಹೋಗಿ ಉದ್ಯೋಗ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೊರಗಿನವರಿಗೇ ಅವಕಾಶ ಕೊಡುತ್ತಾ ಹೋದರೆ ಕನ್ನಡದ ಅಸ್ಮಿತೆ ಏನಾಗಬೇಕು. ಒಕ್ಕೂಟ ವ್ಯವಸ್ಥೆ ಎಂಬುದು ಎಲ್ಲ ರಾಜ್ಯಗಳ, ಭಾಷೆಗಳ ಅಸ್ಮಿತೆಯನ್ನು ಉಳಿಸಿಕೊಂಡು ಹೋಗುವುದು. ಆದರೆ ಕನ್ನಡದ ವಿಚಾರದಲ್ಲಿ ಹಾಗಾಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡದ ಮಕ್ಕಳಿಗಾಗಿ 100 ಪುಸ್ತಕ: ‘ಕನ್ನಡ ಸಂಸ್ಕೃತಿ, ಐತಿಹ್ಯ, ಭಾಷೆಯನ್ನು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಸರಳ ಭಾಷೆಯಲ್ಲಿ 100 ಕಿರು ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ರೂಪಿಸಿದ್ದೇವೆ. ಪುಸ್ತಕಗಳ ರಚನೆಗಾಗಿ ಈಗಾಗಲೇ ಹಲವು ಮಂದಿ ಲೇಖಕರನ್ನು ಸಂಪರ್ಕಿಸಲಾಗಿದೆ. ಹಲವರು ಒಪ್ಪಿಗೆ ಸೂಚಿಸಿದ್ದಾರೆ. ಪುಸ್ತಕ ರಚನೆ ಕೆಲಸವೂ ಆರಂಭವಾಗಿದೆ’ ಎಂದು ಬಿಳಿಮಲೆ ಹೇಳಿದರು.
ಶಿಕ್ಷಕರಿಗೆ ಎರಡು ದಿನಗಳ ಕಾರ್ಯಾಗಾರ 70 ಶಿಕ್ಷಕರಿಗೆ ತಜ್ಞರಿಂದ ತರಬೇತಿ
ಮೇಯರ್ ಹುದ್ದೆ ಕನ್ನಡಿಗರಿಗೆ ಮೀಸಲು–ಪತ್ರ
‘ಬಿಬಿಎಂಪಿಯನ್ನು ವಿಭಜನೆ ಮಾಡುವ ಪ್ರಸ್ತಾವ ಸರ್ಕಾರದ ಮುಂದೆ ಇದೆ. ನಾಲ್ಕು ಪಾಲಿಕೆಗಳನ್ನಾಗಿ ವಿಭಜಿಸಿದರೆ ಮೂರರಲ್ಲಿ ಮೇಯರ್ ಮತ್ತು ಉಪ ಮೇಯರ್ ಆಗಿ ಕನ್ನಡೇತರರೇ ಆಯ್ಕೆಯಾಗುತ್ತಾರೆ. ಆಗ ಕನ್ನಡಿಗರಿಗೆ ತೊಡಕಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸುವ ಬಗ್ಗೆ ಉಪ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಲಾಗಿದೆ’ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು. ‘ಬೆಂಗಳೂರು ವಿಭಜನೆಯಾದಾಗ ಪಾಲಿಕೆಗೆ ಆಯ್ಕೆಯಾಗುವ ಸದಸ್ಯರಲ್ಲಿ ಕನ್ನಡಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾತಿನಿಧ್ಯ ಇರುವಂತೆ ಮತ್ತು ಮೇಯರ್ ಹಾಗೂ ಉಪ ಮೇಯರ್ ಹುದ್ದೆ ಕನ್ನಡಿಗರಿಗೆ ಮೀಸಲಿರುವಂತೆ ಕಾನೂನನ್ನು ರೂಪಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಎಂದು ಪತ್ರದಲ್ಲಿ ಕೋರಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.