ಬೆಂಗಳೂರು: ‘ಮುಂದಿನ ಒಂದು ತಿಂಗಳೊಳಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ದಸ್ತಾವೇಜುಗಳು ನೋಂದಣಿಯಾಗುವಂತೆ ಕ್ರಮಕೈಗೊಳ್ಳಬೇಕು’ ಎಂದುನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಯ ಆಯುಕ್ತರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸೂಚಿಸಿದರು.
ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಯ ಅಧಿಕಾರಿಗೊಂದಿಗೆಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಯನ್ನು ಅವರು ಬುಧವಾರ ನಡೆಸಿದರು.
‘ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದ ಆದಾಯ ತಂದುಕೊಡುವ ಈ ಇಲಾಖೆಯಲ್ಲಿ ವರ್ಷಕ್ಕೆ ಸುಮಾರು 20 ಲಕ್ಷ ದಸ್ತಾವೇಜುಗಳು ನೋಂದಣಿಯಾಗುತ್ತಿವೆ. ಅವೆಲ್ಲವೂ ಇಂಗ್ಲಿಷ್‌ನಲ್ಲಿರುವುದು ದುರದೃಷ್ಟಕರ. ಕಡ್ಡಾಯವಾಗಿ ಕನ್ನಡದಲ್ಲಿಯೇ ನೋಂದಣಿಯಾಗುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು’ ಎಂದುಇಲಾಖೆಯ ಆಯುಕ್ತ ಕೆ.ಪಿ. ಮೋಹನ್ ರಾಜ್ ಅವರಿಗೆ ತಾಕೀತು ಮಾಡಿದರು.
‘ರಾಜ್ಯದಲ್ಲಿರುವ 286 ನೋಂದಣಾಧಿಕಾರಿಗಳ ಕಚೇರಿಗಳಲ್ಲೂ ಇಂಗ್ಲಿಷ್ ಬಳಸಲಾಗುತ್ತಿದೆ. ಅಪಾರ್ಟ್‌ಮೆಂಟ್ ಸಮುಚ್ಚಯ ಮತ್ತು ನಿವೇಶನಗಳ ಕ್ರಯಪತ್ರಗಳೂ ಇಂಗ್ಲಿಷ್‌ನಲ್ಲಿಯೇ ನೋಂದಣಿಯಾಗುತ್ತಿವೆ. ರೈತರು ಮತ್ತು ಗ್ರಾಮೀಣ ಭಾಗದ ಜನರಿಗೆ ಇಲಾಖೆಯ ಸಾಕಷ್ಟು ನಮೂನೆಗಳು ಅರ್ಥವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ದಸ್ತಾವೇಜುಗಳು ಇಂಗ್ಲಿಷ್‌ನಲ್ಲಿರುವುದರಿಂದ ಜನ ಅವುಗಳನ್ನು ಓದಲಾಗದೇ ಅಧಿಕಾರಿಗಳು ಸೂಚಿಸಿದ ಕಡೆ ಸಹಿ ಮಾಡಬೇಕಾಗಿದೆ. ಮಧ್ಯವರ್ತಿಗಳ ಹಾವಳಿಯೂ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರೂ ಅದು ಕನ್ನಡೀಕರಣಗೊಂಡಿಲ್ಲ. ಜನ ಸಮಸ್ಯೆ ಎದುರಿಸುವಂತಾಗಿದೆ’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.