ಬೆಂಗಳೂರು: ಮಂಡ್ಯದಲ್ಲಿ ಡಿಸೆಂಬರ್ 20, 21 ಮತ್ತು 22ರಂದು ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಬುಧವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಅಂತಿಮಗೊಳಿಸಲಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಹಂಪ ನಾಗರಾಜಯ್ಯ, ಸಿದ್ಧಲಿಂಗ ಪಟ್ಟಣಶೆಟ್ಟಿ, ಸುಧಾಮೂರ್ತಿ, ಲತಾ ರಾಜಶೇಖರ್, ನಾ ಮೊಗಸಾಲೆ ಸೇರಿದಂತೆ ಸಾರ್ವಜನಿಕವಾಗಿ ಚರ್ಚೆಯಾದಂತೆ ಹಲವರ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಎಲ್ಲ ನೆಲೆಗಳಿಂದಲೂ ಕೂಲಂಕಷವಾಗಿ ಚರ್ಚಿಸಿ, 60 ಸದಸ್ಯರಲ್ಲಿ ಹಾಜರಿದ್ದ 53 ಸದಸ್ಯರು ಸರ್ವಾನುಮತದಿಂದ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಿದರು’ ಎಂದು ಹೇಳಿದರು.
‘ಸಮ್ಮೇಳನಕ್ಕೆ ಮಹಿಳೆಯರನ್ನು ಅಧ್ಯಕ್ಷರನ್ನಾಗಿಸಬೇಕೆಂಬ ಪ್ರಯತ್ನ ನಮ್ಮದೂ ಇದೆ. ಆದರೆ, ಎಲ್ಲರ ಅಭಿಪ್ರಾಯ ಹಾಗೂ ಹಿರಿತನಕ್ಕೆ ಪ್ರಾಧಾನ್ಯ ನೀಡಲಾಯಿತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ರಾಜ್ಯ ಸರ್ಕಾರದಿಂದ ಸಮ್ಮೇಳನಕ್ಕೆ ₹ 25 ಕೋಟಿ ಬಿಡುಗಡೆಯಾಗಿದೆ. ಮಂಡ್ಯದಲ್ಲಿ ನಡೆಯುವ ಸಮ್ಮೇಳನಕ್ಕೆ ಅಲ್ಲಿನ ಸರ್ಕಾರಿ ನೌಕರರು ವೇತನವನ್ನು ಕೊಡುಗೆಯಾಗಿ ನೀಡಿದ್ದು, ಇದು ಸುಮಾರು ₹ 6 ಕೋಟಿಯಾಗಲಿದೆ. ನಾವು ಕೇಳಿದ್ದ ₹ 30 ಕೋಟಿಗಿಂತ ಹೆಚ್ಚೇ ಹಣ ಲಭ್ಯವಾಗಲಿದೆ. ಈ ಬಾರಿ ಸಮ್ಮೇಳನದಲ್ಲಿ ಹೊರದೇಶದವರೂ ಭಾಗಿಯಾಗಲಿದ್ದಾರೆ’ ಎಂದು ಮಹೇಶ್ ಜೋಶಿ ತಿಳಿಸಿದರು.
ಗೊ.ರು ಚನ್ನಬಸಪ್ಪ ಪರಿಚಯ
1930ರ ಮೇ 18ರಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಗೊಂಡೇದಹಳ್ಳಿಯಲ್ಲಿ ಜನಿಸಿದ ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ ಅವರು ಹಡಗಲು ತಿಮ್ಮಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದರು. 1944-48ರಲ್ಲಿ ಅಜ್ಜಂಪುರ, ಬೀರೂರು, ಕಡೂರು, ಮಾಯಕೊಂಡಗಳಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಗಳಲ್ಲಿ ಭಾಗವಹಿಸಿದ್ದರು. 1948ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಗೊರುಚ, ಗಾಂಧಿಗ್ರಾಮದಲ್ಲಿ ಸಮಾಜ ಶಿಕ್ಷಣ ತರಬೇತಿ ಪಡೆದು, ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಭಾರತ ಸ್ಕೌಟ್ಸ್ ಮತ್ತು ಗೌಡ್ಸ್ ಪ್ರಧಾನ ಕಮಿಷನರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು.
ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಕೆ, ಕುನಾಲ, ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ‍್ಯಾವೊ, ಬಾಗೂರು ನಾಗಮ್ಮ, ಗ್ರಾಮಗೀತೆಗಳು, ವಿಭೂತಿ, ಕರ್ನಾಟಕ ಜನಪದ ಕಲೆಗಳು ಸೇರಿದಂತೆ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ 1975-77ರಲ್ಲಿ ಜಾನಪದ ವಿಭಾಗದ ಸಂಚಾಲಕರಾಗಿದ್ದರು. 1987-88ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಸಂಪಾದಕರಾಗಿದ್ದರು. 1989-92ರಲ್ಲಿ ಪರಿಷತ್ ಗೌರವ ಕಾರ್ಯದರ್ಶಿಯಾಗಿ ಮೂರು ಸಮ್ಮೇಳನಗಳ ನಿರ್ವಹಣೆ ಮಾಡಿದ್ದರು. 1990ರಲ್ಲಿ ಪರಿಷತ್‌ನಲ್ಲಿ ಪ್ರಥಮ ಬಾರಿಗೆ ಬಂಡಾಯ ಸಾಹಿತ್ಯ ಸಮಾವೇಶ ಆಯೋಜಿಸಿದ್ದರು. 1992-95ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮೂರು ಸಮ್ಮೇಳನಗಳನ್ನು ನಡೆಸಿ, ‘ಒಬ್ಬ ಕನ್ನಡಿಗ ಒಂದು ರೂಪಾಯಿ’ ಎಂಬ ಘೋಷಣೆಯೊಂದಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಪರಿಷತ್ ಅನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡಲು ಶ್ರಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.