ಬೆಂಗಳೂರು: ‘ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ) ಮತ್ತು ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್ (ಐಸಿಎಸ್‌ಇ) ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಕಲಿಸಬೇಕು‘ ಎಂಬುದನ್ನು ಕಡ್ಡಾಯಗೊಳಿಸಿರುವ ಆದೇಶವನ್ನು ಆಕ್ಷೇಪಿಸಲಾದ ಪ್ರಕರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ, ಸಿಬಿಎಸ್ಇ ಮತ್ತು ಐಸಿಎಸ್‌ಇ ಮಾನ್ಯತೆ ಪಡೆದ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರಾದ ಸಿ. ಸೋಮಶೇಖರ್ ಸೇರಿದಂತೆ 19 ಜನರು ಹಾಗೂ ಶಿಕ್ಷಕರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
‘ಆಕ್ಷೇಪಾರ್ಹವಾದ ಕರ್ನಾಟಕ ಭಾಷಾ ಕಲಿಕಾ ಕಾಯ್ದೆ, ನಿಯಮಗಳು ಮತ್ತು ನಿರಾಕ್ಷೇಪಣಾ ಪತ್ರದ (ಎನ್ಒಸಿ) ನಿಯಮಗಳಿಗೆ ಮಧ್ಯಂತರ ತಡೆ ನೀಡಬೇಕು‘ ಎಂಬ ಅರ್ಜಿದಾರರ ಕೋರಿಕೆಯನ್ನು ನಿರಾಕರಿಸಿದ ನ್ಯಾಯಪೀಠ; ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ. ಪ್ರಕರಣದಲ್ಲಿ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಸಿಬಿಎಸ್‌ಇ ಅಧ್ಯಕ್ಷರು, ಐಸಿಎಸ್‌ಇ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಆಕ್ಷೇಪಣೆ ಏನು?: ’ನಿರಾಕ್ಷೇಪಣ ಪತ್ರ ನಿಯಮಗಳ ಪ್ರಕಾರ ಕನ್ನಡವನ್ನು ದ್ವಿತೀಯ ಅಥವಾ ತೃತೀಯ ಭಾಷೆಯನ್ನಾಗಿ ಬೋಧಿಸಬೇಕು ಎಂಬುದಾಗಿದೆ. ಆದರೆ, ಕರ್ನಾಟಕ ಭಾಷಾ ಕಲಿಕಾ ಕಾಯ್ದೆ–2015ರ ಕಲಂ 3, ಕರ್ನಾಟಕ ಭಾಷಾ ಕಲಿಕಾ ನಿಯಮಗಳು–2017ರ ನಿಯಮ 3 ಮತ್ತು ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ (ನಿರಾಕ್ಷೇಪಣಾ ಪತ್ರ ನೀಡಿಕೆ ಮತ್ತು ನಿಯಂತ್ರಣ) ನಿಯಮಗಳ 6 (2)ರ ಹೇರುವಿಕೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ‘ ಎಂಬುದು ಅರ್ಜಿದಾರರ ಆಕ್ಷೇಪ.
‘ಕರ್ನಾಟಕದಲ್ಲಿ ತಮ್ಮ ಇಚ್ಛೆಗೆ ಅನುಗುಣವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯನ್ನು ಕಲಿಯುವ ವಿದ್ಯಾರ್ಥಿಗಳ ಹಕ್ಕಿಗೆ ಈ ಕಾಯ್ದೆಗಳು ಅಡ್ಡಿ ಉಂಟು ಮಾಡುತ್ತವೆ. ಇದು ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆ ಪರಿಣಾಮ ಬೀರಲಿದ್ದು, ಭವಿಷ್ಯದಲ್ಲಿ ಅವರ ಔದ್ಯೋಗಿಕ ಅವಕಾಶಗಳಿಗೆ ಅಡಚಣೆಯಾಗುತ್ತದೆ. ಕನ್ನಡ ಹೊರತುಪಡಿಸಿ ಬೇರೆ ವಿಷಯಗಳನ್ನು ಬೋಧಿಸುವ ಶಿಕ್ಷಕರ ಜೀವನಕ್ಕೂ ಇದು ಸಮಸ್ಯೆಯಾಗಲಿದೆ‘ ಎಂದು ದೂರಿದ್ದಾರೆ.
ಕೋರಿಕೆ: ’ಸಿಬಿಎಸ್ಇ ಮತ್ತು ಐಸಿಎಸ್‌ಇ ಮಾನ್ಯತೆ ಪಡೆದ ಶಾಲೆಗಳಿಗೆ ಎನ್ಒಸಿ ನಿಯಮ 6 (2) ಅಸಾಂವಿಧಾನಿಕವಾಗಿದ್ದು ಆಕ್ಷೇಪಾರ್ಹ ಕಾಯ್ದೆ ಮತ್ತು ನಿಯಮಗಳು ಅನ್ವಯಿಸುವುದಿಲ್ಲ ಎಂದು ಘೋಷಿಸಬೇಕು. ಸಿಬಿಎಸ್ಇ ಮತ್ತು ಐಸಿಎಸ್‌ಇ ಮಾನ್ಯತೆ ಪಡೆದ ಶಾಲೆಗಳಲ್ಲಿ ಆಕ್ಷೇಪಾರ್ಹ ಕಾಯ್ದೆ ಮತ್ತು ನಿಯಮಗಳನ್ನು ಜಾರಿಗೊಳಿಸದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು‘ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.