ADVERTISEMENT

ಕನ್ನಡ ಕೆಲಸಕ್ಕೆ ಸಿಗದ ಧನ ‘ಗ್ಯಾರಂಟಿ’

ಈ ವರ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನಿಸದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌

ವರುಣ ಹೆಗಡೆ
Published 24 ಅಕ್ಟೋಬರ್ 2024, 0:11 IST
Last Updated 24 ಅಕ್ಟೋಬರ್ 2024, 0:11 IST
ಕನ್ನಡ ಭವನ
ಕನ್ನಡ ಭವನ   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2024–25ನೇ ಸಾಲಿನ ‘ಧನಸಹಾಯ’ ಮಂಜೂರಾತಿಗೆ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಂದ ಈವರೆಗೂ ಅರ್ಜಿ ಆಹ್ವಾನಿಸಿಲ್ಲ. ಕಳೆದ ಸಾಲಿನ ಬಾಕಿ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗದೇ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಸಂಘ–ಸಂಸ್ಥೆಗಳಿಗೆ, ಈ ವರ್ಷ ಆರ್ಥಿಕ ನೆರವಿನ ಖಚಿತತೆ ಇಲ್ಲವಾಗಿದೆ.

ಸಾಂಸ್ಕೃತಿಕ ವಾತಾವರಣ ರೂಪಿಸಲು ಕೆಲಸ ಮಾಡುತ್ತಿರುವ ಸಂಘ–ಸಂಸ್ಥೆಗಳಲ್ಲಿ ಹೆಚ್ಚಿನವು ಇಲಾಖೆಯ ಧನಸಹಾಯವನ್ನೇ ಅವಲಂಬಿಸಿವೆ. ಈ ಭರವಸೆಯಿಂದಲೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪ್ರತಿ ವರ್ಷ ಕಾರ್ಯಕ್ರಮಗಳನ್ನು ನೀಡುತ್ತಿವೆ. ಸಂಸ್ಕೃತಿ ಇಲಾಖೆಯು ಅನುದಾನದ ಕೊರತೆಯಿಂದ 2023–24ನೇ ಸಾಲಿನ ಧನಸಹಾಯವನ್ನು ಕಂತು ರೂಪದಲ್ಲಿ ಬಿಡುಗಡೆ ಮಾಡಿತ್ತು.

ಕಳೆದ ಮಾರ್ಚ್‌ನಲ್ಲಿ ಮೊದಲ ಕಂತು ಬಿಡುಗಡೆ ಮಾಡಿದ್ದ ಇಲಾಖೆ, ಕಲಾವಿದರು ಹಾಗೂ ಸಂಘ–ಸಂಸ್ಥೆಗಳ ಪ್ರಮುಖರ ಹೋರಾಟದ ಬಳಿಕ ಸೆಪ್ಟೆಂಬರ್‌ನಲ್ಲಿ ಎರಡನೇ ಕಂತು ಬಿಡುಗಡೆ ಮಾಡಿದೆ. ಮತ್ತೊಂದು ಕಂತಿನಲ್ಲಿಯೂ ಪೂರ್ಣ ಪ್ರಮಾಣದ ಅನುದಾನ ಒದಗಿಸದಿರುವುದು ಸಾಂಸ್ಕೃತಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ಧನಸಹಾಯ ಯೋಜನೆ ಮಾರ್ಗಸೂಚಿ ಪ್ರಕಾರ, ಪ್ರತಿ ವರ್ಷ ಜೂನ್ ತಿಂಗಳಲ್ಲೇ ಅರ್ಜಿ ಆಹ್ವಾನಿಸಿ ಸಂಘ–ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಜಿಲ್ಲಾ ಹಂತದಲ್ಲಿ ಪರಿಶೀಲಿಸಬೇಕು. ಆದರೆ, ಈ ಪ್ರಕ್ರಿಯೆ ಪ್ರಾರಂಭಿಸದಿರುವುದರ ಜೊತೆಗೆ ಕಳೆದ ಸಾಲಿಗೆ ನಿಗದಿ ಪಡಿಸಲಾದ ಅನುದಾನದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಆಯ್ಕೆಯಾದ ಸಂಘ–ಸಂಸ್ಥೆಗಳಿಗೆ ಶೇ 14ರಷ್ಟು ಹಾಗೂ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಸಂಘ–ಸಂಸ್ಥೆಗಳಿಗೆ ಶೇ 13ರಷ್ಟು ಅನುದಾನ ಬಾಕಿ ಉಳಿಸಿಕೊಳ್ಳಲಾಗಿದೆ.

ಅಲ್ಪ ಧನ ಸಂದಾಯ:

2023–24ನೇ ಸಾಲಿನ ಧನಸಹಾಯಕ್ಕೆ ಸಾಮಾನ್ಯ ವರ್ಗದಲ್ಲಿ 831, ಪರಿಶಿಷ್ಟ ಜಾತಿ ಉಪ ಯೋಜನೆಯಡಿ 519 ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ 97 ಸಂಘ–ಸಂಸ್ಥೆಗಳು ಆಯ್ಕೆಯಾಗಿದ್ದವು. ಯೋಜನೆಯಡಿ ಗರಿಷ್ಠ ₹5 ಲಕ್ಷದವರೆಗೆ ಅನುದಾನ ಒದಗಿಸಲು ಅವಕಾಶವಿದ್ದರೂ ಜಿಲ್ಲಾ ಸಮಿತಿಯು ಬಹುತೇಕ ಸಂಘ–ಸಂಸ್ಥೆಗಳಿಗೆ ₹1 ಲಕ್ಷದಿಂದ ₹2 ಲಕ್ಷ ಮಾತ್ರ ಶಿಫಾರಸು ಮಾಡಿದ್ದರಿಂದ ಕೆಲವರಿಗೆ ₹15 ಸಾವಿರದಿಂದ ₹20 ಸಾವಿರ ಮೊದಲ ಕಂತಾಗಿ ಕೈಸೇರಿತ್ತು. ಸಾಮಾನ್ಯ ವರ್ಗದಲ್ಲಿ ಧನಸಹಾಯ ಸಮಿತಿ ಶಿಫಾರಸು ಮಾಡಿದ್ದ ₹14.71 ಕೋಟಿಯಲ್ಲಿ ಮೊದಲ ಕಂತಾಗಿ ₹5.88 ಕೋಟಿ ಹಾಗೂ ಎರಡನೇ ಕಂತಾಗಿ ₹4.14 ಕೋಟಿ ಬಿಡುಗಡೆಯಾಗಿದೆ.‌ ಪರಿಶಿಷ್ಟ ಜಾತಿ ಉಪಯೋಜನೆಯಡಿ ಬಾಕಿ ಉಳಿಸಿಕೊಂಡಿದ್ದ ಶೇ 69ರಷ್ಟು ಅನುದಾನದಲ್ಲಿ ಶೇ 55ರಷ್ಟು ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.

‘ಎರಡನೇ ಕಂತಿನಲ್ಲಿಯೂ ಪೂರ್ಣ ಹಣ ಬಿಡುಗಡೆಯಾಗದಿರುವುದು ನಮ್ಮ ದುರದೃಷ್ಟ. ಕಂತು ರೂಪದಲ್ಲಿ ಅನುದಾನ ನೀಡಿದರೆ ಕಾರ್ಯಕ್ರಮಗಳನ್ನು ಮಾಡುವುದು ಕಷ್ಟ. ಕಲಾವಿದರು ಇಲಾಖೆ ಕಚೇರಿಗೆ ಅಲೆದಾಡಿ, ಕಂಗಾಲಾಗಿದ್ದಾರೆ. ಪ್ರಸಕ್ತ ಸಾಲಿನ ಧನಸಹಾಯಕ್ಕೂ ಅರ್ಜಿ ಆಹ್ವಾನಿಸದಿರುವುದು ಗೊಂದಲವನ್ನುಂಟು ಮಾಡಿದೆ. ಈ ಬಗ್ಗೆ ಹೋರಾಟ ಅನಿವಾರ್ಯ’ ಎಂದು ಕಲಾವಿದ ಜಯಸಿಂಹ ಎಸ್. ತಿಳಿಸಿದರು.

ಕಳೆದ ಸಾಲಿನ ಬಾಬ್ತು ಬಾಕಿ ಇರುವ ಧನಸಹಾಯದ ಮೊತ್ತವನ್ನು ಮೊದಲು ಬಿಡುಗಡೆ ಮಾಡಲಾಗುವುದು. ಬಳಿಕ ಈ ಸಾಲಿಗೆ ಅರ್ಜಿ ಆಹ್ವಾನಿಸಲಾಗುವುದು
ಕೆ. ಧರಣೀದೇವಿ ಮಾಲಗತ್ತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ

ಕನ್ನಡ ಭವನಕ್ಕೆ ಅಲೆದಾಟ ಬಾಕಿ

ಉಳಿಸಿಕೊಂಡಿರುವ ಕಳೆದ ಸಾಲಿನ ಧನಸಹಾಯ ಪಡೆಯಲು ಕಲಾವಿದರು ಹಾಗೂ ಸಂಘ–ಸಂಸ್ಥೆಗಳ ಮುಖ್ಯಸ್ಥರು ಕನ್ನಡ ಭವನಕ್ಕೆ ಅಲೆದಾಡುತ್ತಿದ್ದಾರೆ. ರಾಜ್ಯದಲ್ಲಿ ಏಳು ಸಾವಿರಕ್ಕೂ ಅಧಿಕ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿವೆ. ಅರ್ಜಿ ಅಲ್ಲಿಸುವ ನಾಲ್ಕು ಸಾವಿರಕ್ಕೂ ಹೆಚ್ಚು ಸಂಘ–ಸಂಸ್ಥೆಗಳಲ್ಲಿ ಒಂದು ಸಾವಿರದಿಂದ 1500 ಸಂಘ–ಸಂಸ್ಥೆಗಳಿಗೆ ಧನಸಹಾಯ ಒದಗಿಸಲಾಗುತ್ತಿದೆ. ಈ ಹಿಂದೆ ಧನಸಹಾಯಕ್ಕೆ ಸರ್ಕಾರವು ವಾರ್ಷಿಕ ₹15 ಕೋಟಿಯಿಂದ ₹20 ಕೋಟಿ ಅನುದಾನ ಒದಗಿಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.