ADVERTISEMENT

ಶಿಲಾ ಫಲಕದಲ್ಲಿ ಕನ್ನಡ ಕಡೆಗಣನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 15:46 IST
Last Updated 5 ಏಪ್ರಿಲ್ 2022, 15:46 IST
   

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ಸತ್ಯಸಾಯಿ ಆಸ್ಪತ್ರೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಿರುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ.

ಇತ್ತೀಚೆಗೆ ನಡೆದ ಈ ಕಾರ್ಯಕ್ರಮದಲ್ಲಿನ ಶಿಲಾ ಫಲಕವು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿತ್ತು. ಕನ್ನಡ ಕಡೆಗಣನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದ್ದವು. ಹೀಗಾಗಿ, ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ಭಾಷೆಯು ನಮಗೆ ಆದ್ಯತೆ ಆಗಬೇಕೇ ಹೊರತು ಆಯ್ಕೆ ಆಗಬಾರದು. ಕನ್ನಡ ಭಾಷೆ ಬಳಸದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ತಾವುಗಳು ಭಾಗವಹಿಸಿರುವುದರಿಂದ ಪ್ರಾಧಿಕಾರದ ಜತೆಗೆ ಸರ್ಕಾರಕ್ಕೂ ಮುಜುಗರ ಉಂಟಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಪ್ರಾಧಿಕಾರವನ್ನು ಗುರುತು ಮಾಡಿ, ಟೀಕಿಸುತ್ತಿದ್ದಾರೆ. ಈ ಸರ್ಕಾರಕ್ಕೆ ಕನ್ನಡದ ಬದ್ಧತೆಯಿಲ್ಲ ಎಂಬಂತೆ ಚರ್ಚೆ ಮಾಡುತ್ತಿದ್ದಾರೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

‘ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇನ್ನು ಮುಂದೆ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಅಳವಡಿಸುವ ಪರದೆಗಳು ಹಾಗೂ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು. ಈ ಬಗ್ಗೆ ತಾವು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಾದ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.