ಬೆಂಗಳೂರು: ಸಾಲ ವಾಪಸು ನೀಡದ ಪ್ರಕರಣದಲ್ಲಿ ಸಿನಿಮಾ ನಿರ್ದೇಶಕ, ನಟ ಗುರುಪ್ರಸಾದ್ ಅವರನ್ನು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದ ಗಿರಿನಗರ ಠಾಣೆ ಪೊಲೀಸರು, ನ್ಯಾಯಾಲಯದ ಷರತ್ತು ಜಾಮೀನು ಮೇಲೆ ಸಂಜೆ ಬಿಡುಗಡೆ ಮಾಡಿದ್ದಾರೆ.
‘ಮಠ’, ‘ಎದ್ದೇಳು ಮಂಜುನಾಥ್’, ‘ಡೈರೆಕ್ಟರ್ ಸ್ಪೆಷಲ್’ ಸೇರಿದಂತೆ ಹಲವು ಸಿನಿಮಾಗಳನ್ನು ಗುರುಪ್ರಸಾದ್ ನಿರ್ದೇಶನ ಮಾಡಿದ್ದರು. ಸ್ನೇಹಿತ ಶ್ರೀನಿವಾಸ್ ಅವರಿಂದ ಸಾಲ ಪಡೆದಿದ್ದ ಗುರುಪ್ರಸಾದ್, ಅದನ್ನು ವಾಪಸು ನೀಡಿರಲಿಲ್ಲ. ಇದನ್ನು ಪ್ರಶ್ನಿಸಿದ್ದ ಶ್ರೀನಿವಾಸ್, ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯ, ಗುರುಪ್ರಸಾದ್ ಅವರಿಗೆ ನೋಟಿಸ್ ನೀಡಿತ್ತು. ಆದರೆ, ಅವರು ವಿಚಾರಣೆಗೆ ಗೈರಾಗಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ, ಗುರುಪ್ರಸಾದ್ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ತ್ವರಿತವಾಗಿ ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ಗಿರಿನಗರ ಠಾಣೆ ಪೊಲೀಸರಿಗೆ ಸೂಚಿಸಿತ್ತು.
ಹೊಸಕೆರೆಹಳ್ಳಿ ಕ್ರಾಸ್ ಬಳಿಯಲ್ಲಿರುವ ತಮ್ಮ ಮನೆಯಲ್ಲಿದ್ದ ಗುರುಪ್ರಸಾದ್ ಅವರನ್ನು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.