ADVERTISEMENT

ಪ್ರತ್ಯೇಕ ನಾಡ ಧ್ವಜ: ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 16:32 IST
Last Updated 25 ಅಕ್ಟೋಬರ್ 2024, 16:32 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕರ್ನಾಟಕವು ಪ್ರತ್ಯೇಕ ನಾಡ ಧ್ವಜ ಹೊಂದಲು ಸಂಬಂಧಿತ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಹೈಕೋರ್ಟ್‌ ವಜಾ ಮಾಡಿದೆ.

ಈ ಸಂಬಂಧ, ‘ಉತ್ತರ ಕರ್ನಾಟಕ ಹೋರಾಟ ಸಮಿತಿ’ ರಾಜ್ಯ ಘಟಕದ ಅಧ್ಯಕ್ಷರಾದ ಬೆಳಗಾವಿಯ ಭೀಮಪ್ಪ ಗುಂಡಪ್ಪ ಗಡಾದ್‌ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್‌.ಉಮಾಪತಿ, ‘ನಮ್ಮದು ಒಕ್ಕೂಟ ದೇಶ. ಪ್ರತಿ ರಾಜ್ಯವೂ ತನ್ನದೇ ಆದ ಧ್ವಜ ಹೊಂದುವ ಹಕ್ಕು ಹೊಂದಿದೆ. 2014ರಿಂದ ನಾವು ಈ ವಿಚಾರಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ 2018ರ ಮಾರ್ಚ್‌ 8ರಂದು ಪ್ರತ್ಯೇಕ ಧ್ವಜವನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿದ್ದಾರೆ. ಆದರೆ, ಆನಂತರ ಯಾವುದೇ ಬೆಳವಣಿಗೆಯಾಗಿಲ್ಲ’ ಎಂದರು.

ADVERTISEMENT

‘ಪ್ರತ್ಯೇಕ ಧ್ವಜ ಹೊಂದಲು ರಾಜ್ಯ ಸರ್ಕಾರವೇ ಬೆಂಬಲ ಸೂಚಿಸಿದೆ. ಇದಕ್ಕಾಗಿ ಕವಿಗಳು, ಹೋರಾಟಗಾರರನ್ನು ಒಳಗೊಂಡ ಒಂಬತ್ತು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ನೀಡಿದ್ದ ವರದಿಯನ್ನು ಅಂದಿನ ಸಂಪುಟ ಒಪ್ಪಿಕೊಂಡಿತ್ತು. ಈಗ ಸಮಿತಿಯ ವರದಿಯನ್ನು ನ್ಯಾಯಾಲಯದ ಮುಂದೆ ಇರಿಸಬೇಕು. ತದನಂತರ ಅದನ್ನು ಪೀಠವು ಪರಿಗಣಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪ್ರತ್ಯೇಕ ನಾಡ ಧ್ವಜ ಹೊಂದುವ ವಿಚಾರವು ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ, ಈ ಅರ್ಜಿಯನ್ನು ವಜಾ ಮಾಡಲಾಗುತ್ತಿದೆ’ ಎಂದು ಅರ್ಜಿ ವಜಾಗೊಳಿಸಿತು.

ಪ್ರತ್ಯೇಕ ಧ್ವಜಕ್ಕೆ ಕಾನೂನಿನ ಮಾನ್ಯತೆ ಹಾಗೂ ಧ್ವಜದ ವಿನ್ಯಾಸದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಚಕ್ರವರ್ತಿ ಮೋಹನ್‌ ನೇತೃತ್ವದ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. 2018ರ ಮಾರ್ಚ್‌ 8ರಂದು ಹಳದಿ, ಬಿಳಿ ಮತ್ತು ಕೆಂಪು ವರ್ಣಗಳ ನಡುವೆ ಗಂಡಭೇರುಂಡ ಚಿಹ್ನೆ ಹೊಂದಿರುವ ಧ್ವಜವನ್ನು ಮುಖ್ಯಮಂತ್ರಿ ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.