ADVERTISEMENT

ಕರ್ನಾಟಕದಲ್ಲಿ ವಹಿವಾಟಿದ್ದಾಗ ಕನ್ನಡದಲ್ಲೇ ಫಲಕ ಪ್ರದರ್ಶಿಸಿ: ಹೈಕೋರ್ಟ್ ತಾಕೀತು

ಬೃಹತ್ ಕಂಪನಿಗಳಿಗೆ ಹೈಕೋರ್ಟ್ ತಾಕೀತು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:32 IST
Last Updated 24 ಅಕ್ಟೋಬರ್ 2024, 15:32 IST
ಗೇಟ್‌ ತೆರವು ಹೈಕೋರ್ಟ್ ತಾಕೀತು
ಗೇಟ್‌ ತೆರವು ಹೈಕೋರ್ಟ್ ತಾಕೀತು   

ಬೆಂಗಳೂರು: ‘ವಾಣಿಜ್ಯ, ವ್ಯವಹಾರ ನಡೆಸುವ ಅಂಗಡಿಗಳ ಮುಂದಿನ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಮಾಡಬೇಕೆಂಬ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸುತ್ತೋಲೆ ಪ್ರಶ್ನಿಸಲಾದ ರಿಟ್‌ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌, ‘ನೀವು ಕರ್ನಾಟಕದಲ್ಲಿದ್ದ ಮೇಲೆ ಸೂಚನಾ ಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು’ ಎಂದು ಅರ್ಜಿದಾರರಿಗೆ ಮೌಖಿಕವಾಗಿ ತಾಕೀತು ಮಾಡಿದೆ.

ಈ ಸಂಬಂಧ ರೀಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಆದಿತ್ಯ ಬಿರ್ಲಾ ಫ್ಯಾಷನ್ ಆ್ಯಂಡ್ ರೀಟೇಲ್ ಲಿಮಿಟೆಡ್, ಟೈಟಾನ್ ಕಂಪನಿ ಲಿಮಿಟೆಡ್, ಅಡಿಡಾಸ್ ಇಂಡಿಯಾ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ 24 ಖಾಸಗಿ ಸಂಸ್ಥೆಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘ನೀವು (ವಾಣಿಜ್ಯ ಸಂಸ್ಥೆಗಳು) ಕರ್ನಾಟಕದಲ್ಲಿ ವಹಿವಾಟು ನಡೆಸುತ್ತಿದ್ದೀರಿ ಎಂದಾದ ಮೇಲೆ ನಿಮ್ಮ ಸೂಚನಾ ಫಲಕಗಳನ್ನು ಕನ್ನಡದಲ್ಲೇ ಪ್ರದರ್ಶಿಸಬೇಕು. ಅದಕ್ಕೆ ಯಾವುದೇ ವಿನಾಯಿತಿ ನೀಡಲಾಗದು’ ಎಂದು ಮೌಖಿಕವಾಗಿ ಹೇಳಿದ ನ್ಯಾಯಮೂರ್ತಿಗಳು, ಕನ್ನಡ ಭಾಷಾ ರಕ್ಷಣೆಗೆ ಸಂಬಂಧಿಸಿದಂತೆ ಶ್ರಮಿಸುತ್ತಿರುವ ಕನ್ನಡ ರಕ್ಷಣಾ ವೇದಿಕೆಗಳ ಹೋರಾಟವನ್ನು ಪ್ರಸ್ತಾಪಿಸಿದರು.

ADVERTISEMENT

ಪ್ರಕರಣವನ್ನು ತುರ್ತು ವಿಚಾರಣೆ ನಡೆಸುವಂತೆ ಕೋರಿದ ಅರ್ಜಿದಾರರ ಪರ ವಕೀಲರ ಮನವಿಯನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳು, ಈ ಮೊದಲು ಇದೇ ಹೈಕೋರ್ಟ್‌ನ  ಮತ್ತೊಂದು ಏಕಸದಸ್ಯ ನ್ಯಾಯಪೀಠ ಮಾರ್ಚ್ 18ರಂದು ನೀಡಿದ್ದ; ‘ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ’ ಮಧ್ಯಂತರ ಆದೇಶವನ್ನು ವಿಸ್ತರಿಸಿ ವಿಚಾರಣೆ  ಮುಂದೂಡಿದರು.

‘ನಾಮಫಲಕ ಅವಳಡಿಕೆ ಕುರಿತು 2019ರ ಅಕ್ಟೋಬರ್ 19ರಂದು ಹೊರಡಿಸಿರುವ ಆದೇಶ ಹಾಗೂ ಅಕ್ಟೋಬರ್ 31ರಂದು ನೀಡಿರುವ ನೋಟಿಸ್ ಅನುಸಾರ ಅರ್ಜಿದಾರರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಬಾರದು’ ಎಂದು ನ್ಯಾಯಪೀಠ ಬಿಬಿಎಂಪಿಗೆ ತಾಕೀತು ಮಾಡಿತ್ತು. ‘ಈ ಮಧ್ಯಂತರ ಆದೇಶ ಕೇವಲ ಅರ್ಜಿದಾರ ಸಂಸ್ಥೆಗಳಿಗೆ ಮಾತ್ರ ಅನ್ವಯಿಸಲಿದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.